ವೇಗದ ವಿಫಲ
ಇಶಾಂತ್, ಜೇಮ್ಸ್ ಫಾಕ್ನರ್ಗೆ ಒಂದು ಓವರ್ನಲ್ಲಿ 30 ರನ್ ಬಿಟ್ಟುಕೊಟ್ಟಾಗ ಭಾರತೀಯರು ಬಾಯಿ ಬಾಯಿ ಬಡಕೊಂಡೆವು. ಅಯ್ಯೋ ಒಂದೆರಡು ಬಾಲ್ ಡಾಟ್ ಆಗಿದ್ದರೂ...
ಇಶಾಂತ್, ಜೇಮ್ಸ್ ಫಾಕ್ನರ್ಗೆ ಒಂದು ಓವರ್ನಲ್ಲಿ 30 ರನ್ ಬಿಟ್ಟುಕೊಟ್ಟಾಗ ಭಾರತೀಯರು ಬಾಯಿ ಬಾಯಿ ಬಡಕೊಂಡೆವು. ಅಯ್ಯೋ ಒಂದೆರಡು ಬಾಲ್ ಡಾಟ್ ಆಗಿದ್ದರೂ ಗೆಲ್ಲುತ್ತಿದ್ದೆವಲ್ಲ! ಧೋನಿ ಯಾಕಾದ್ರೂ ಆತನಿಗೆ ಓವರ್ ಕೊಟ್ಟನೋ! ಆದರೆ ನೆನಪಿಡಿ, ಟಿ-20ಯಲ್ಲಿ 200, ಒನ್ಡೇಯಲ್ಲಿ 400 ರನ್ ಕೂಡ ಸೇಫ್ ಅಲ್ಲ ಅನ್ನುವಂಥ ಮನಸ್ಥಿತಿಗೆ ಕಾರಣ ಯಾರು ಎಂದು ಕೇಳಿದರೆ, ಅದು ನಾವೇ!
ನಮಗಿಂದು ಕ್ರಿಕೆಟ್ ಎಂದರೆ ಸಿಕ್ಸರ್, ಬೌಂಡರಿಗಳ ಸುರಿಮಳೆಗೈಯ್ಯಬೇಕು ಅಂತಾಗಿಬಿಟ್ಟಿದೆ. ಇಲ್ಲವಾದಲ್ಲಿ ನೋಡುವ ತಾಳ್ಮೆ ನಮ್ಮದಾಗಿರುವುದಿಲ್ಲ. ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಮಾಡಿ ಎದುರಾಳಿಯನ್ನು 250ರೊಳಗೆ ಕಟ್ಟಿಹಾಕಿದಲ್ಲಿ ಛೇ ಇನ್ನೂ ಸ್ಪಲ್ಪ ಜಾಸ್ತಿ ರನ್ ಇರ್ತಿದ್ರೆ ಮ್ಯಾಚ್ ಫೈಟ್ ಬರ್ತಿತ್ತು ಎನ್ನುವವರೇ ಹೆಚ್ಚು ಹೊರತು, ಎಷ್ಟು ಚೆನ್ನಾಗಿ ಬೌಲಿಂಗ್ ನಡೆಸಿದ್ರು ಎನ್ನುವವರು ಕಡಿಮೆ. ಅಂದರೆ ಕ್ರಿಕೆಟ್ನ ಮನರಂಜನೆಯನ್ನು ಹೊಡೆಬಡಿ ಬ್ಯಾಟಿಂಗ್ನಲ್ಲೇ ಕಂಡವರು ನಾವು. ಇಡೀ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಮಾತ್ರ ನೋಡುವವರು ಎಷ್ಟಿಲ್ಲ ಹೇಳಿ.
ಬಿಸಿಸಿಐಗೂ ದುಡ್ಡು ಎಲ್ಲಿ ಹುಟ್ಟುತ್ತದೆ ಮತ್ತು ಅದನ್ನು ಹೇಗೆ ಬಾಚಬೇಕು ಎಂದು ಗೊತ್ತು. ಹೀಗಾಗಿಯೇ ಭಾರತ ಉಪಖಂಡಗಳ ಎಲ್ಲೆಂದರಲ್ಲಿ ರಾರಾಜಿಸುತ್ತಿರುವುದು ಪಕ್ಕಾ ಬ್ಯಾಟಿಂಗ್ ಪಿಚ್ಗಳು. ದಶಕಗಳ ಹಿಂದೆ ಶ್ರೀಲಂಕಾದಲ್ಲಾದರೂ ಕೊಂಚ ಮಟ್ಟಿಗೆ ಬೌಲಿಂಗ್ ಸ್ನೇಹಿಗಳಿದ್ದವು. ಈಗ ಅಲ್ಲೂ ಅಷ್ಟೇ. ಯಾವ ಪಿಚ್ ಬೌಲರ್ಗಳ ಕೈಚಳಕಕ್ಕೆ ಸ್ಪಂದಿಸುವುದಿಲ್ಲವೋ, ಯಾವ ಪಿಚ್ನಲ್ಲಿ ಚೆಂಡು ಬಹಳ ಚೆನ್ನಾಗಿ ಬ್ಯಾಟನ್ನು ಹುಡುಕಿಕೊಂಡು ಬಂದು ಹೊಡೆಸಿಕೊಳ್ಳುತ್ತದೋ, ಅಂಥ ಪಿಚ್ನಲ್ಲಿ ಇಶಾಂತ್ ಶರ್ಮನಾದರೂ ಏನು ಮಾಡಿಯಾನು ಪಾಪ.
ನಮ್ಮ ಬೌಲರ್ಗಳು
ಮೊದಲು ಆಸ್ಟ್ರೇಲಿಯಾದಲ್ಲಿ ಬ್ರೆಟ್ ಲೀ ಒಬ್ಬರೇ 150 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಇಂದು ಅಲ್ಲಿ ಅದೇ ವೇಗ ಹಾಗೂ ತಾಂತ್ರಿಕತೆಯೊಂದಿಗೆ ಚೆಂಡೆಸೆಯಬಲ್ಲ ಬಹಳಷ್ಟು ಬೌಲರ್ಗಳಿದ್ದಾರೆ. ಬ್ಯಾಟ್ಸ್ಮನ್ಗೆ ಟೈಮಿಂಗ್ಸ್ ತೆಗೆದುಕೊಳ್ಳಲು ಅವಕಾಶ ನೀಡಬಾರದು ಎಂಬುದೇ ಇಂದಿನ ಬೌಲರ್ಗಳ ಮೂಲ ಮಂತ್ರವಾಗಿದ್ದಾಗ ಮಾತ್ರ ರನ್ ವೇಗಕ್ಕೆ ನಿಯಂತ್ರಣ ಹೇರಲು, ವಿಕೆಟ್ ಉದುರಲು ಸಾಧ್ಯ. ಅದರೊಂದಿಗೆ ನಯವಾಗಿ ವಂಚಿಸಲೆಂದು 120 ಕಿ.ಮೀ. ವೇಗದಲ್ಲಿ ಚೆಂಡನ್ನು ಎತ್ತ ಕಡೆ ತಿರುಗಿಸಿದರೂ ಅದು ಬೌಂಡರಿ ಗೆರೆ ದಾಟಿರುತ್ತದೆ.
ಮುಂದಿನ ವಿಶ್ವಕಪ್ ಒಳಗಾಗಿ ನಮ್ಮ ಸ್ಪಿನ್ ವಿಭಾಗದಲ್ಲಿ ಬಲಶಾಲಿಯಾಗಿದೆ ಎಂಬ ಕಾರಣಕ್ಕೆ ಹಿಂದೆಲ್ಲಾ ಭಾರತದಲ್ಲಿ ಸ್ಪಿನ್ ಪಿಚ್ಗಳನ್ನೇ ತಯಾರಿಸಲಾಗುತ್ತಿತ್ತು. ಆದರೆ ಇಂದು ಅವೂ ಇಲ್ಲ. ಈ ಪಿಚ್ನಲ್ಲಿ ನಾನು ಸ್ಪಿನ್ನರ್ಗಳ ನೆರವಿನಿಂದ ಗೆಲ್ಲಬಲ್ಲೆ ಎಂದು ಧೋನಿ ಹೇಳಬಹುದಾಗಿದ್ದ ಒಂದೇ ಒಂದು ಪಿಚ್ ಇದ್ದರೆ ಹೇಳಿ. ಹಾಗಂತ ನಾವು ಸ್ಪಿನ್ ಪಿಚ್ಗಳನ್ನು ಮಾಡುತ್ತಾ ಕೂರಲಾಗುವುದಿಲ್ಲ. ಯಾಕೆಂದರೆ ಮುಂದಿನ ವಿಶ್ವಕಪ್ ನಡೆಯುವುದು ಆಸ್ಟ್ರೇಲಿಯಾ, ನ್ಯೂಜಿಲೆಂಡ್ಗಳ ಬೌನ್ಸಿ ಟ್ರ್ಯಾಕ್ಗಳಲ್ಲಿ. ಅಲ್ಲಿ ಭಾರತದ ಬ್ಯಾಟ್ಸ್ಮನ್ಗಳ ಪರಾಕ್ರಮಗಳನ್ನು ಬಣ್ಣಿಸಬೇಕಾದ ಅಗತ್ಯವಿಲ್ಲ. ಹಾಗಾಗಿಯೇ ಕಳೆದ ವರ್ಷ ದುರ್ಬಲ ತಂಡವಾಗಿದ್ದ ಆಸ್ಟ್ರೇಲಿಯಾ ಭಾರತವನ್ನು ಕ್ಲೀನ್ಸ್ವೀಪ್ ಮಾಡಿತ್ತು! 2 ವರ್ಷ ಕಳೆದು ಭಾರತ ಅದೇ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಆಡಬೇಕಿದೆ. ಅಷ್ಟರೊಳಗೆ ಈ ಮೂಲ ಸಮಸ್ಯೆಯನ್ನು ಬಗೆಹರಿಸುವತ್ತ ಗಮನಹರಿಸಿದರೆ ಮಾತ್ರ ಸಕಾರಾತ್ಮಕ ಫಲಿತಾಂಶ ದೊರೆತೀತು.
ನಮ್ಮ ಬೌಲರ್ಗಳಿಗೇಕೆ ಈ ಶಾಪ?
ನಮ್ಮ ದೇಶದಲ್ಲೇಕೆ ಶೋಯೇಬ್ ಅಕ್ತರ್, ಬ್ರೆಟ್ ಲೀಯಂಥ ಎದೆ ನಡುಗಿಸುವ ಬೌಲರ್ಗಳು ಹುಟ್ಟುವುದಿಲ್ಲ ಎಂದು 90ರ ದಶಕದ ಅಂತ್ಯದಲ್ಲಿ ಅಸೂಯೆಪಟ್ಟಿದ್ದೆವು. ಅದಕ್ಕೆ ಉತ್ತರ ಸಿಗಲಿಲ್ಲ ಎಂದಲ್ಲ. ಆದರೆ, ಆ ಉತ್ತರವನ್ನು ಸಮರ್ಥವಾಗಿ ಅರ್ಥೈಸಿಕೊಳ್ಳುವಲ್ಲಿ ಎಡವಿದೆವು ಎಂದರೆ ತಪ್ಪಲ್ಲ. ಭಾರತದ ಅತ್ಯಂತ ವೇಗದ ಬೌಲರ್ ಎಂಬ ಅಭಿದಾನದೊಂದಿಗೆ ಟೀಂ ಇಂಡಿಯಾ ಕದ ತಟ್ಟಿದ ಮುನಾಫ್ ಪಟೇಲ್ 145 ಕಿ.ಮೀ.ಗಿಂತ ವೇಗವಾಗಿ ಚೆಂಡೆಸೆಯಬೇಕಾದರೆ ಭಾರತ ಖುಷಿಪಟ್ಟಿತ್ತು. ಆದರೆ, ಜಾನ್ ರೈಟ್ ಮಾತ್ರ ಲೈನ್ ಆ್ಯಂಡ್ ಲೆಂಗ್ತ್ ಪಾಠ ಹೇಳಿ ಸ್ಪೀಡ್ಬ್ರೇಕರ್ ಅಳವಡಿಸಿದರು. ಆತನ ಮುಖ ಕಾಣದೆ ಬಹಳ ವರ್ಷವಾದಂತೆ ಅನ್ನಿಸುತ್ತಿದೆ. ಇನ್ನು ಮೊನ್ನೆ ಮೊನ್ನೆ ನಮ್ಮ ಪಾಲಿಗೆ ವಿಲನ್ ಅಂತೆ ಗೋಚರಿಸಿದ ಇಶಾಂತನ ವೇಗವೂ ಇದೇ ತೆರನಾಗಿತ್ತು. ಭಾರತದ ವೇಗಿಗಳನ್ನು ಚಿಂದಿ ಉಡಾಯಿಸುವ ರಿಕಿ ಪಾಂಟಿಂಗ್, ಇಶಾಂತ್ ವೇಗಸಹಿತ ಸ್ವಿಂಗ್ ಬೌಲಿಂಗ್ ಎದುರಿಸಲಾಗದೇ ಮಂಕು ಬಡಿದವನಂತೆ ಪೆವಿಲಿಯನ್ನತ್ತ ತೆರಳಿದ್ದು ನಮಗೆ ಗೊತ್ತೇ ಇದೆ. ಆತನಿಗೇ ಇದೇ ಪಾಠ ಹೇಳಿದಾತ ಟೀಂ ಇಂಡಿಯಾ ಕಂಡ ವಿಪರೀತ ವಿವಾದದ ಕೋಚ್ ಗ್ರೇಗ್ ಚಾಪೆಲ್.
ಸದ್ಯಕ್ಕೆ ಭಾರತ ಪಾಲಿಗೆ ಆಶಾಕಿರಣವಾಗಿರುವವರು ಉಮೇಶ್ ಯಾದವ್ ಮತ್ತು ವರುಣ್ ಅರೋನ್. ಈ ಇಬ್ಬರು ಯುವಕರೂ 150ರ ಆಸುಪಾಸಿನಲ್ಲಿ ನಿರಂತರವಾಗಿ ಚೆಂಡೆಸೆಯಬಲ್ಲ ಸಾಮರ್ಥ್ಯವುಳ್ಳವರು. ಈ ಪ್ರತಿಭೆಗಳ ಶೋಧವಾದಾಗ 145 ಕಿ.ಮೀ. ವೇಗದಲ್ಲಿ ಸ್ವಿಂಗ್ ಬೌಲಿಂಗ್ ಅನ್ನು ಬೌನ್ಸ್ ಜೊತೆಗೆ ಎದುರಿಸುವ ಕಷ್ಟ ಏನೆಂಬುದುನ್ನು ಇದೀಗ ಕಾಂಗರೂಗಳಿಗೆ ಕಲಿಸುವ ಸಮಯ ಬಂದಿದೆ ಎಂದು ಗೌತಮ್ ಗಂಭೀರ್ ತಿಳಿಸಿದ್ದರು.
ಈ ವಿಷಯ ಕ್ರಿಕೆಟ್ ಮಂಡಳಿಗೆ ಮಾತ್ರ ಅರ್ಥವಾಗಿಲ್ಲ. ಇಂದು ಪ್ರಪಂಚದ ಎಲ್ಲಾ ತಂಡದಲ್ಲೂ 140ರಿಂದ 150 ಕಿ.ಮೀ. ವೇಗದಲ್ಲಿ ಬೌಲಿಂಗ್ ನಡೆಸುವ ವೇಗಿಗಳಿದ್ದಾರೆ. ಆದರೆ, ನಮ್ಮ ವಿನಯ್ ಕುಮಾರ್ 125 ಕಿ.ಮೀ. ವೇಗ(?)ದಲ್ಲಿ ಚೆಂಡನ್ನು ಸ್ವಿಂಗ್ ಮಾಡಿದರೆ ಎದುರಾಳಿ ಸಾವಕಾಶವಾಗಿ ಸಮಯ ತೆಗೆದುಕೊಂಡು ನಯವಾಗಿ ಚೆಂಡನ್ನು ಬೌಂಡರಿಗಟ್ಟುತ್ತಾನೆ. ನಾವು ಇಲ್ಲೇ ಹಿಂದುಳಿದಿದ್ದು.
- ಗಣೇಶ ಪ್ರಸಾದ್ ಕುಂಬ್ಳೆ