ಸದಾ ಓಡುತಿರು ನೀ...
ಈತನಿಗೆ ಕ್ರೀಡೆ ಎಂಬುದು ರಕ್ತಗತವಾಗಿಯೇ ಬಂದಿದೆ. ಮನೆಯಲ್ಲಿ ಬಡತನದ ನಡುವೆಯೂ ಪೋಷಕರಿಗೆ ನನ್ನ ಮಗ ಒಬ್ಬ ದೊಡ್ಡ ಕ್ರೀಡಾಪಟುವಾಗಬೇಕೆಂಬ ಹಂಬಲವಿತ್ತು. ಇಂದು ರಾಷ್ಟ್ರಮಟ್ಟದಲ್ಲಿ ತನ್ನನ್ನು ಗುರುತಿಸಿ ಪೋಷಕರ ಆಸೆಯನ್ನು ನನಸು ಮಾಡಿದ್ದಾರೆ ಸದಾಶಿವ.
ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಸಿಜೆ ಮಾಡುತ್ತಿರುವ ಸದಾಶಿವರಿಗೆ ಕ್ರೀಡಾ ರಂಗದಲ್ಲಿ ಆಸಕ್ತಿ ಹುಟ್ಟಿದ್ದೇ ಆಕಸ್ಮಿಕ. ಅಂದೊಂದು ದಿನ ಶಾಲೆಯಲ್ಲಿ 4 ಕಿಲೋಮೀಟರ್ ಕ್ರಾಸ್ ರೇಸ್ ಆಯೋಜಿಲಾಗಿತ್ತು. ಕೊನೆಯ ಹಂತದ ವರೆಗೂ ಟಾಪ್ ಇದ್ದ ಇವರು ಅನಿವಾರ್ಯ ಕಾರಣದಿಂದ ನಿರಾಸೆ ಅನುಭವಿಸಬೇಕಾಯಿತು. ಇದನ್ನೇ ಸವಾಲಾಗಿ ಆಗಿ ತೆಗೆದುಕೊಂಡ ಸದಾಶಿವ, ಮುಂದಿನ ದಿನಗಳಲ್ಲಿ ಮುಟ್ಟಿದ್ದೆಲ್ಲಾ ಚಿನ್ನ.
ಪ್ರಶಸ್ತಿಯ ಬೆನ್ನೇರಿ...
ಮೊದಲ ಬಾರಿ ಇವರು 8ನೇ ತರಗತಿಯಲ್ಲಿರುವಾಗ ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ 100 ಮೀ. ಓಟದಲ್ಲಿ ದ್ವಿತೀಯ, 400, 600 ಮೀ. ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಆಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಇವರ ಕ್ರೀಡಾಬದುಕಿನ ಮೊದಲ ಸಂಭ್ರಮ.
ಸುರತ್ಕಲ್ನಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ 6 ಕಿ.ಮೀ. ಗುಡ್ಡಗಾಡು ಓಟದಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದುಕೊಂಡ ಇವರು, ನಂತರ ಹಳಿಯಾಳದಲ್ಲಿ ನಡೆದ ರಾಜ್ಯ ಮಟ್ಟದ ಓಟದಲ್ಲಿ 12ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಅಂತರ್ ಕಾಲೇಜು ಮಟ್ಟದ 21.50 ಕಿ.ಮೀ. ಮ್ಯಾರಥಾನ್ನಲ್ಲಿ ಮೂರನೇ ಸ್ಥಾನ ಪಡೆದರು ಸದಾಶಿವ. ದ್ವಿತೀಯ ಪದವಿಯ ಸಂದರ್ಭ ಹಳೆಯಂಗಡಿಯಲ್ಲಿ 12.50 ಕಿ.ಮೀ. ಕ್ರಾಸ್ ಕಂಟ್ರಿ ರೇಸ್ಲ್ಲಿ 6ನೇ ಸ್ಥಾನದೊಂದಿಗೆ ರಾಷ್ಟ್ರಮಟ್ಟದ ಖಾತೆ ಆರಂಭಿಸಿದರು. ನಂತರ ಹರಿಯಾಣದ ರೋಹ್ತಕ್ನಲ್ಲಿ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಭಾಗಿಯಾದರು.
ಅದೇ ವರ್ಷ ಮಡಿಕೇರಿಯಲ್ಲಿ ನಡೆದ ರಾಜ್ಯ ಮಟ್ಟದ 8 ಕಿ.ಮೀ. ಗುಡ್ಡಗಾಡು ಓಟದಲ್ಲಿ ಮೂರನೇ ಸ್ಥಾನದೊಂದಿಗೆ ಪುಣೆಯ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಗೊಂಡರು. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ಹಾಫ್ ಮ್ಯಾರಥಾನ್ನಲ್ಲಿ ಚಿನ್ನದ ಪದಕ ಬಾಚಿದರು. ಕಳೆದವರ್ಷ ಸುಬ್ರಹ್ಮಣ್ಯದಲ್ಲಿ ನಡೆದ 12.50 ಕಿ.ಮೀ. ಗುಡ್ಡಗಾಡು ಓಟದಲ್ಲಿ ಗೆದ್ದು ನಾಗಪುರದ ರಾಷ್ಟ್ರಮಟ್ಟದ ಕ್ರೀಡಾಕೂಟದತ್ತ ನಡೆದರು.
ಸದಾಶಿವ ಹಾಸನ ಜಿಲ್ಲೆಯ ಸಕಲೇಶಪುರದ ಸುಬ್ರಹ್ಮಣ್ಯ ಮತ್ತು ವಿಮಲಾ ದಂಪತಿಯ ಪುತ್ರ. ಇವರ ಈ ಸಾಧನೆಯ ಹಿಂದೆ ಹಿಂದೆ ಪೋಷಕರ, ಸ್ನೇಹಿತರ ಮತ್ತು ಕಾಲೇಜಿನವರ ಸಹಕಾರ ಅಗಾಧ.
- ನವೀನ್ಭಟ್ ಇಳಂತಿಲ