ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕರ್ನಾಟಕಕ್ಕೆ ತಲೆಬಾಗಿದ ಮುಂಬೈ

Rashmi Kasaragodu
Updated On : 2 Apr 2014, 1:25 am

ಚೆನ್ನೈ: ಕರ್ನಾಟಕ ತಂಡದ ಆಟಗಾರರು ಕೊನೆಯವರೆಗೂ ರೋಚಕ ಹೋರಾಟ ಸಂಘಟಿಸುವ ಮೂಲಕ 4ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್ಶಿಪ್ನಲ್ಲಿ ಅದ್ಭುತ ಜಯ ಸಂಪಾದಿಸಿದ್ದಾರೆ.
ಮಂಗಳವಾರ ಇಲ್ಲಿ ನಡೆದ 'ಎ' ಡಿವಿಜನ್ನ 'ಬಿ' ಗುಂಪಿನ ಪಂದ್ಯದಲ್ಲಿ ಕರ್ನಾಟಕದ ಆಟಗಾರರು 3-2 ಗೋಲುಗಳಿಂದ ಮುಂಬೈ ಹಾಕಿ ಸಂಸ್ಥೆ ತಂಡವನ್ನು ಪರಾಭವಗೊಳಿಸಿದರು.
ವಿಜೇತ ಕರ್ನಾಟಕ ತಂಡದ ಪರ ಎಂ.ಡಿ. ರಾಹೆಲ್ 19ನೇ ನಿಮಿಷ ಮತ್ತು 63ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರೆ, ಪೃಥ್ವಿರಾರ್ 47ನೇ ನಿಮಿಷ ಗೋಲು ಗಳಿಸಿದರು.
ಮತ್ತೊಂದೆಡೆ ಮುಂಬೈ ತಂಡಕ್ಕೆ ವಿನಯ್ ವಾಲ್ಮೀಕಿ 38ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಹಾಗೂ ರಾಜೇಂದ್ರ ಪವಾರ್ 53ನೇ ನಿಮಿಷಗಳಲ್ಲಿ ಗೋಲು ಗಳಿಸಿಕೊಟ್ಟಿದ್ದು ವ್ಯರ್ಥವಾಯಿತು.
ತುರುಸಿನ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಕರ್ನಾಟಕ ಎರಡು ಬಾರಿ ಮುನ್ನಡೆ ಸಾಧಿಸಿದಾಗಲೂ, ತಿರುಗಿಬಿದ್ದಿದ್ದ ಮುಂಬೈ ಆಟಗಾರರು ಹಿನ್ನಡೆ ಅಂತರ ತಗ್ಗಿಸಿಕೊಂಡಿದ್ದರು. ಆದರೆ, ಎಂ.ಡಿ. ರಾಹೆಲ್ ಆಟ ಮುಗಿಯಲು ಕೇವಲ 7 ನಿಮಿಷಗಳಿದ್ದಾಗ ಆಕರ್ಷಕ ಗೋಲು ಗಳಿಸಿ ಮತ್ತೆ ಕರ್ನಾಟಕಕ್ಕೆ 3-2ರಿಂದ ಮಹತ್ವದ ಮುನ್ನಡೆ ತಂದುಕೊಟ್ಟರು.
ಕೊನೆಯ ಕೆಲವೇ ನಿಮಿಷಗಳ ಆಟದಲ್ಲಿ ಮುಂಬೈ ಪಡೆ ಹೇಗಾದರೂ ಮಾಡಿ ಮತ್ತೊಂದು ಗೋಲು ಗಳಿಸಿ ಕನಿಷ್ಠ ಡ್ರಾ ಫಲಿತಾಂಶ ಪಡೆಯುವ ಉದ್ದೇಶದಿಂದ ಆಕ್ರಮಣಕಾರಿ ಮನೋಭಾವ ತೋರಲು ಮುಂದಾಯಿತು. ಆದರೆ, ಎದುರಾಳಿಯ ಪ್ರಯತ್ನವನ್ನು ಮೆಟ್ಟಿ ನಿಲ್ಲಲು ರಕ್ಷಣಾ ವಿಭಾಗವನ್ನು ಮತ್ತಷ್ಟು ಹೆಚ್ಚು ಬಲಪಡಿಸಿಕೊಂಡು ಅಂತಿಮವಾಗಿ ಕನ್ನಡಿಗರು ಗೆಲವಿನ ಕೇಕೆ ಹಾಕಲು ಸಫಲರಾದರು.
ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಹಾಕಿ ಒಡಿಶಾ ತಂಡ 2-1 ಗೋಲುಗಳಿಂದ ಹಿಮಾಚಲಪ್ರದೇಶ ವಿರುದ್ಧ ಜಯಗಳಿಸಿದರು.
ಉಳಿದಂತೆ, 'ಡಿ' ಗುಂಪಿನ ಪಂದ್ಯಗಳಲ್ಲಿ ಹಾಕಿ ಭೋಪಾಲ್ 2-1 ಗೋಲುಗಳಿಂದ ಹಾಕಿ ಮಹಾರಾಷ್ಟ್ರ ತಂಡವನ್ನು ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ 7-1 ಗೋಲುಗಳಿಂದ ಛತ್ತೀಸ್ಗಢ ತಂಡವನ್ನು ಮಣಿಸಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement