ಕರ್ನಾಟಕಕ್ಕೆ ಮಣಿದ ಆಂಧ್ರ
ಆರಂಭಿಕರಾದ ಮನೀಷ್ ಪಾಂಡೆ ಮತ್ತು ಕೆ.ಎಲ್. ರಾಹುಲ್ರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ...
ವಿಜಯನಗರ: ಆರಂಭಿಕರಾದ ಮನೀಷ್ ಪಾಂಡೆ ಮತ್ತು ಕೆ.ಎಲ್. ರಾಹುಲ್ರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ದಕ್ಷಿಣ ವಲಯ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಆಂಧ್ರ ವಿರುದ್ಧ 7 ವಿಕೆಟ್ಗಳ ಸುಲಭ ಗೆಲವು ದಾಖಲಿಸಿದೆ.
ಗೆಲ್ಲಲು 132 ರನ್ಗಳ ಗುರಿ ಪಡೆದಿದ್ದ ಕರ್ನಾಟಕ ಇನ್ನೂ 11 ಎಸೆತಗಳು ಉಳಿದಿರುವಂತೆಯೇ 3 ವಿಕೆಟ್ ಕಳೆದುಕೊಂಡು ವಿಜಯೋತ್ಸವ ಆಚರಿಸಿತು.
ಮನೀಷ್ ಪಾಂಡೆ ಕೇವಲ 51 ಎಸೆತಗಳಲ್ಲಿ 60 ರನ್ಗಳಿಸಿ ನಿರ್ಗಮಿಸಿದರು. ಅವರು ಎ.ಜಿ. ಪ್ರವೀಣ್ ದಾಳಿಯಲ್ಲಿ ಬೌಲ್ಡ್ ಆಗಿ ಹೊರನಡೆದರು. ಕೆ.ಎಲ್. ರಾಹುಲ್ 34 ಎಸೆತಗಳಲ್ಲಿ 34 ರನ್ಗಳಿಸಿದರು. ಪಾಂಡೆ ಮತ್ತು ರಾಹುಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 87 ರನ್ ಸೇರಿಸುವ ಮೂಲಕ ಕರ್ನಾಟಕದ ಗೆಲವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಕರ್ನಾಟಕದ ಆರಂಭಿಕ ಜೋಡಿಯನ್ನು ಬೇರ್ಪಡಿಸಲು ಆಂಧ್ರ ಬೌಲಿಂಗ್ನಲ್ಲಿ ಪದೇ ಪದೆ ಬದಲಾವಣೆ ಮಾಡಿದರೂ ಸಹ ಬೇಗನೆ ಫಲ ಕಾಣಲಿಲ್ಲ.
ಆತಿಥೇಯ ಬೌಲರ್ಗಳ ಪೈಕಿ ಬಿ. ಸುಧಾಕರ್ 19 ರನ್ ನೀಡಿ 2 ವಿಕೆಟ್ ಉರುಳಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಂಧ್ರ ತಂಡದ ಪರ ರಿಕಿ ಭುಯಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 53 ರನ್ಗಳ ಕಾಣಿಕೆ ನೀಡಿದರು. ಆದರೆ, ಅಂತಿಮವಾಗಿ ಅವರ ಅರ್ಧಶತಕ ವ್ಯರ್ಥವಾಗುವಂತಾಯಿತು.
ತಂಡ 2 ವಿಕೆಟ್ ನಷ್ಟಕ್ಕೆ 30 ರನ್ಗಳಿಸಿ ಒತ್ತಡದ ಪರಿಸ್ಥಿತಿಯಲ್ಲಿದ್ದಾಗ ಬ್ಯಾಟಿಂಗ್ ಮಾಡಲು ಆಗಮಿಸಿದ ರಿಕಿ, ಕರ್ನಾಟಕದ ಬೌಲರ್ಗಳನ್ನು ಸಮರ್ಥವಾಗಿಯೇ ಎದುರಿಸಿದರು. ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಜಿ.ಕೆ. ಚಿರಂಜೀವಿ ಅವರೊಂದಿಗೆ 47 ರನ್ಗಳ ಮಹತ್ವದ ಜೊತೆಯಾಟ ಆಡಿದರು.
ರಿಕಿ ಭುಯಿ ತಮ್ಮ ಖಾತೆಯಲ್ಲಿ 31 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದ್ದರು.
ಕರ್ನಾಟಕದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಎಡಗೈ ಸ್ಪಿನ್ನರ್ ಅಬ್ರಾರ್ ಖಾಜಿ 25 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ಆಂಧ್ರ 131 (ರಿಕಿ ಭುಯಿ 53, ಅಬ್ರಾರ್ ಖಾಜಿ 25ಕ್ಕೆ2) ಹಾಗೂ ಕರ್ನಾಟಕ 18.1 ಓವರುಗಳಲ್ಲಿ 3 ವಿಕೆಟ್ಗೆ 132 (ಮನೀಷ್ ಪಾಂಡೆ 60, ಕೆ.ಎಲ್. ರಾಹುಲ್ 34, ಸುಧಾಕರ್ 19ಕ್ಕೆ2).