ಸೆ.30ರಿಂದ ಬ್ಯಾಡ್ಮಿಂಟನ್ ಲೀಗ್
ನವದೆಹಲಿ: ಎರಡನೇ ಆವೃತ್ತಿಯ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾವಳಿಯು ಸೆ.30ರಿಂದ ಅ.15ರವರೆಗೆ ನಡೆಸಲು ಐಬಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ.
ಐಬಿಎಲ್ ಆಡಳಿತ ಮಂಡಳಿಯು ಈ ಬಾರಿ ಪ್ರತಿ ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶ ನೀಡಲು ನಿರ್ಧರಿಸಿದೆ.
ಮೊದಲ ಆವೃತ್ತಿಯ ವೇಳೆ ಪ್ರತಿ ಫ್ರಾಂಚೈಸಿ 11 ಆಟಗಾರರನ್ನು ಹೊಂದಿದ್ದು, ಈ ಬಾರಿ 13 ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಿದೆ. ಹಾಗಾಗಿ ಈ ಬಾರಿ ಪ್ರತಿ ಫ್ರಾಂಚೈಸಿಗಳು ಎರಡು ಆಟಗಾರರನ್ನು ತಂಡಕ್ಕೆ ಹೆಚ್ಚುವರಿಯಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
2014ರ ಏಷ್ಯನ್ ಗೇಮ್ಸ್ನಲ್ಲಿ ಬ್ಯಾಡ್ಮಿಂಟನ್ ಪಂದ್ಯಗಳು ಸೆ.29ಕ್ಕೆ ಮುಕ್ತಾಯಗೊಳ್ಳಲಿದ್ದು, ನಂತರ ಆಟಗಾರರು ನೇರವಾಗಿ ಇಂಚಾನ್ನಿಂದ ಐಬಿಎಲ್ಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ, ಹಾಗೂ ಐಬಿಎಲ್ ಆಡಳಿತ ಮಂಡಳಿ ಮುಖ್ಯಸ್ಥ ಅಖಿಲೇಶ್ ದಾಸ್ ಗುಪ್ತಾ ತಿಳಿಸಿದ್ದಾರೆ. ಅಲ್ಲದೆ ಈ ಬಾರಿಯ ಆವೃತ್ತಿಯನ್ನು ದೆಹಲಿ, ಲಖನೌ, ಮುಂಬೈ, ಪುಣೆ, ಹೈದರಾಬಾದ್ ಹಾಗೂ ಬೆಂಗಳೂರು ನಗರಗಳಲ್ಲಿ ನಡೆಸಲಾಗುವುದು ಎಂದು ತಿಳಿಸಲಾಗಿದೆ.