ಕೆರಿಬಿಯನ್ನರ ಬೇಟೆಗೆ ಸಿಂಹಳೀಯರ ಹೊಂಚು
ಮೀರ್ಪುರ: ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಸತತ ಎರಡನೇ ಬಾರಿಗೆ ಪ್ರಶಸ್ತಿ ಸುತ್ತು ತಲುಪುವ ಮೂಲಕ ಟಿ-20 ವಿಶ್ವಕಪ್ ಅನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಹೊಂಚುಹಾಕಿದೆ. ಆ ನಿಟ್ಟಿನಲ್ಲಿ ಗುರುವಾರ ಎದುರಾಗಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಸವಾಲನ್ನು ಮೆಟ್ಟಿ ನಿಂತು ಮತ್ತೆ ಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿ ವೆಸ್ಟ್ ಇಂಡೀಸ್ ಆಟಗಾರರಿದ್ದಾರೆ.
ಮತ್ತೊಂದೆಡೆ ಶ್ರೀಲಂಕನ್ನರು ಕಳೆದ 2012ನೇ ಸಾಲಿನ ಆವೃತ್ತಿಯಲ್ಲಿ ಪ್ರಶಸ್ತಿ ಸುತ್ತಿನ ಸಮರದಲ್ಲಿಯೇ ವಿಂಡೀಸ್ ಎದುರು ಸೋತು ಮೊದಲ ಬಾರಿಗೆ ಟಿ-20 ವಿಶ್ವಕಪ್ ಅನ್ನು ಎತ್ತಿ ಹಿಡಿಯುವ ಅವಕಾಶವನ್ನು ಕೈಚೆಲ್ಲಿದ್ದರು. ಈಗ ವಿಂಡೀಸ್ ವಿರುದ್ಧ ಗೆದ್ದು ಸೇಡು ತೀರಿಸಿಕೊಳ್ಳುವುದರ ಜೊತೆಗೆ ಫೈನಲ್ ತಲುಪುವ ಮೂಲಕ ಪ್ರಶಸ್ತಿಯ ಆಸೆ ಹೆಚ್ಚಿಸಿಕೊಳ್ಳಲು ಶ್ರೀಲಂಕಾ ಬಯಸಿದೆ. ಹಾಗಾಗಿ, ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೊದಲ ಸೆಮಿಫೈನಲ್ ಹೋರಾಟ ರೋಚಕ ಹಣಾಹಣಿಯಿಂದ ಕೂಡಿರುವ ನಿರೀಕ್ಷೆ ಹೊಂದಲಾಗಿದೆ.
ಉಭಯ ತಂಡಗಳೂ ಗುಂಪಿನ ತಮ್ಮ ಅಂತಿಮ ಲೀಗ್ ಪಂದ್ಯಗಳಲ್ಲಿ ಅಧ್ಭುತ ಗೆಲವು ದಾಖಲಿಸಿ ನಾಲ್ಕರಘಟ್ಟಕ್ಕೆ ಅರ್ಹತೆ ಪಡೆದುಕೊಂಡಿವೆ. ಶ್ರೀಲಂಕಾ ಪಡೆ ನ್ಯೂಜಿಲೆಂಡ್ ಸವಾಲನ್ನು ಸದೆಬಡಿದರೆ, ವೆಸ್ಟ್ ಇಂಡೀಸ್ ಆಟಗಾರರು ಪಾಕಿಸ್ತಾನವನ್ನು ಮಣಿಸುವ ಮೂಲಕ ಮುನ್ನಡೆ ಪಡೆದುಕೊಂಡಿವೆ. ಒಂದು ವೇಳೆ ತಮ್ಮ ಈ ಪಂದ್ಯಗಳಲ್ಲಿ ಸೋಲನುಭವಿಸಿದ್ದರೆ, ಉಭಯರೂ ಪ್ರಶಸ್ತಿ ಸುತ್ತಿನ ಪೈಪೋಟಿಯಿಂದ ಹೊರಬೀಳಬೇಕಾಗುತ್ತಿತ್ತು. ಅಂತಹ ಒಂದು ಆತಂಕದ ಸನ್ನಿವೇಶದಲ್ಲೂ ಸಿಲುಕಿದ್ದವು. ಕೊನೆಗೆ, ಅಚ್ಚರಿ ಎಂದರೆ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಆಟಗಾರರು ತಮ್ಮ ಎದುರಾಳಿ ಪಡೆಗಳನ್ನು ನೂರರ ಗಡಿಯೊಳಗೆಯೇ ಕಟ್ಟಿಹಾಕಿದ್ದರು.
ಎರಡೂ ತಂಡಗಳಲ್ಲಿ ಸ್ಪಿನ್ ವಿಭಾಗ ಹೆಚ್ಚು ಬಲಾಢ್ಯವಾಗಿದೆ. ಚಿತ್ತಗಾಂಗ್ನಲ್ಲಿನ ಐತಿಹಾಸಿಕ ಸಾಧನೆಯನ್ನು ಪುನರಾವರ್ತಿಸುವ ಲೆಕ್ಕಾಚಾರದಲ್ಲಿ ರಂಗನ ಹೆರಾತ್ ಇದ್ದಾರೆ. ಇಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 3 ರನ್ಗಳಿಗೆ 5 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದರು. ವಿಂಡೀಸ್ನ ಅಪಾಯಕಾರಿ ಬ್ಯಾಟ್ಸ್ಮನ್ಗಳಾದ ಕ್ರಿಸ್ ಗೇಯ್ಲ್ ಮತ್ತು ಡ್ವೈನ್ ಬ್ರಾವೊ ಅವರನ್ನು ಸೆರೆ ಹಿಡಿಯಲು ಹೆರಾತ್ ಉತ್ತಮ ಬಲೆ ಹೆಣೆದುಕೊಂಡಿದ್ದಾರೆ. ಹಾಗೆಯೇ ಶ್ರೀಲಂಕಾ ಬ್ಯಾಟ್ಸ್ಮನ್ಗಳೂ ಸಹ ವಿಂಡೀಸ್ನ ಸ್ಪಿನ್ ದ್ವಯರಾದ ಸುನೀಲ್ ನಾರಾಯಣ ಮತ್ತು ಸ್ಯಾಮುಯೆಲ್ ಬದ್ರಿ ಬಗ್ಗೆ ಹೆಚ್ಚು ಚಿಂತೆಯಲ್ಲಿದ್ದಾರೆ. ಅನುಭವಿಗಳಾದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ದನೆ ಉತ್ತಮ ಫಾರ್ಮ್ಗೆ ಮರಳಿದರೆ, ಲಂಕಾ ಪಾಲಿಗೆ ಅದುವೇ ಪ್ಲಸ್ ಪಾಯಿಂಟ್ ಎನಿಸಲಿದೆ.
ಅದೇ ರೀತಿ ಎರಡೂ ತಂಡಗಳಲ್ಲಿ ಪ್ರತಿಭಾನ್ವಿತ ಬ್ಯಾಟ್ಸ್ಮನ್ಗಳಿದ್ದು, ಎಂತಹುದೇ ದಾಳಿಯನ್ನು ಸಮರ್ಥವಾಗಿ ಎದುರಿಸುವಷ್ಟು ಸಾಮರ್ಥ್ಯವುಳ್ಳವರಾಗಿದ್ದಾರೆ. ಅಂತೆಯೇ ವೆಸ್ಟ್ ಇಂಡೀಸ್ ನಾಯಕ ಡಾರೆನ್ ಸಾಮಿ ಹಾಗೂ ಶ್ರೀಲಂಕಾ ನಾಯಕ ದಿನೇಶ್ ಚಂಡಿಮಲ್ ತಮ್ಮ ಪಡೆಯನ್ನು ಸಮರ್ಥವಾಗಿ ಮುನ್ನಡೆಸಿ ಶ್ರೇಯಸ್ಸು ದಕ್ಕಿಸಿಕೊಳ್ಳಲು ಉತ್ತಮ ಯೋಜನೆ ರೂಪಿಸಿಕೊಂಡು ಸಮರಕ್ಕೆ ಸಜ್ಜಾಗಿ ನಿಂತಿದ್ದಾರೆ. ಇನ್ನು ಈ ಕ್ರೀಡಾಂಗಣಕ್ಕೆ ಸಂಬಂಧಿಸಿ ಶ್ರೀಲಂಕನ್ನರಿಗೆ ಹಚ್ಚಹಸಿರಾದ ಸಾಧನೆಯ ಮೆಲಕು ಇದೆ. ಕೆಲವು ದಿನಗಳ ಹಿಂದೆಯಷ್ಟೆ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಲಂಕನ್ನರು ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ಶ್ರೀಲಂಕಾ
ದಿನೇಶ್ ಚಂಡಿಮಲ್ (ನಾಯಕ), ತಿಲಕರತ್ನೆ ದಿಲ್ಶಾನ್, ಕುಶಾಲ್ ಪೆರೇರಾ, ಮಹೇಲ ಜಯವರ್ದನೆ, ಕುಮಾರ ಸಂಗಕ್ಕಾರ, ಲಹಿರು ತಿರಿಮಾನೆ, ಆ್ಯಂಜೆಲೊ ಮ್ಯಾಥ್ಯೂಸ್, ತಿಸಾರ ಪೆರೇರಾ, ರಂಗನ ಹೆರಾತ್, ಸುರಂಗ ಲಕ್ಮಲ್, ಸೀಕುಗೆ ಪ್ರಸನ್ನ, ಅಜಂತ ಮೆಂಡಿಸ್, ನುವಾನ್ ಕುಲಸೇಕರ, ಚತುರಂಗ ಡಿಸಿಲ್ವಾ.
ವೆಸ್ಟ್ ಇಂಡೀಸ್
ಡಾರೆನ್ ಸಾಮಿ (ನಾಯಕ), ಕ್ರಿಸ್ ಗೇಯ್ಲ್, ಡ್ವೈನ್ ಸ್ಮಿತ್, ಲೆಂಡ್ಲ್ ಸಿಮನ್ಸ್, ಮರ್ಲಾನ್ ಸ್ಯಾಮುಯೆಲ್ಸ್, ಡ್ವೈನ್ ಬ್ರಾವೊ, ದಿನೇಶ್ ರಾಮ್ದಿನ್, ಆ್ಯಂಡ್ರೆ ರಸೆಲ್, ಸ್ಯಾಮುಯೆಲ್ ಬದ್ರಿ, ಸುನೀಲ್ ನಾರಾಯಣ್, ಕ್ರಿಷ್ಮಾರ್ ಸ್ಯಾಂಟೋಕಿ, ರವಿ ರಾಮ್ಪಾಲ್, ಆ್ಯಂಡ್ರೆ ಫ್ಲೆಚರ್, ಶೆಲ್ಡನ್ ಕಾಟೆರೆಲ್, ಜಾನ್ಸನ್ ಚಾರ್ಲ್ಸ್.