ಯುವಿಗೆ ಹಿಮ್ಮಡಿ ನೋವುನೆಟ್ ಅಭ್ಯಾಸದಿಂದ ಹೊರಕ್ಕೆ
ಮೀರ್‌ಪುರ್: ಫುಟ್ಬಾಲ್ ಆಟದ ವೇಳೆ ತೀವ್ರ ಎಡ ಹಿಮ್ಮಡಿ ನೋವಿಗೆ ಒಳಗಾಗಿದ್ದ ಭಾರತ ತಂಡದ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್, ಬುಧವಾರದ ಅಭ್ಯಾಸದಿಂದ ಹೊರಗುಳಿದಿದ್ದರು. ಬಿಸಿಬಿ ಅಕಾಡೆಮಿಯಲ್ಲಿ ನಿನ್ನೆ ಸಹ ಆಟಗಾರರೊಂದಿಗೆ ಫುಟ್ಬಾಲ್ ಆಡುತ್ತಿದ್ದ ಸಂದರ್ಭದಲ್ಲಿ ಯುವರಾಜ್, ಹಿಮ್ಮಡಿ ನೋವಿಗೆ ತುತ್ತಾದರು. ಸದ್ಯ ಬ್ಯಾಂಡೇಜ್ ಹಾಕಿಕೊಂಡಿರುವ ಅವರು ಫಾತುಲ್ಹಾದಲ್ಲಿ ಇಂದು ನಡೆದ ಎಂದಿನ ತಂಡದ ಅಭ್ಯಾಸಕ್ಕೆ ಆಗಮಿಸಲಿಲ್ಲ. ಯುವರಾಜ್‌ಗೆ ವಿಶ್ರಾಂತಿ ನೀಡಲಾಗಿದ್ದು, ಹೋಟೆಲ್‌ನಲ್ಲಿಯೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ. ಮುಂಜಾಗ್ರತೆ ದೃಷ್ಟಿಯಿಂದ ಅವರನ್ನು ಅಭ್ಯಾಸಕ್ಕೆ ಇಳಿಸಲಾಗಿಲ್ಲ ಎಂದು ಭಾರತ ತಂಡದ ಮಾಧ್ಯಮ ವ್ಯವಸ್ಥಾಪಕ ಡಾ. ಆರ್.ಎನ್, ಬಾಬಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಗುರುವಾರ ಕೂಡ ಅವರು ಅಭ್ಯಾಸದಲ್ಲಿ ತೊಡಗುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅವರಿಗಾಗಿರುವ ಗಾಯದ ಕುರಿತಂತೆ ಪರೀಕ್ಷಿಸಲಾಗುತ್ತಿದೆ. ಟ್ರೇನರ್ ಸುದರ್ಶನ್ ಸಹ ಯುವರಾಜ್ ಬೇಗನೆ ಗುಣಮುಖರಾಗಿ ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟಿ-20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಲಭ್ಯರಾಗುವಂತೆ ಗಮನ ಹರಿಸಿದ್ದಾರೆ. ಅಚ್ಚರಿ ಎಂದರೆ, 2006ರ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲೂ ಸಹ ಆಸ್ಟ್ರೇಲಿಯಾ ವಿರುದ್ಧದ (ಮೊಹಾಲಿಯಲ್ಲಿ ಪಂದ್ಯ) ಸೆಮಿಫೈನಲ್ ಪಂದ್ಯಕ್ಕೆ ಮುನ್ನ ಯುವರಾಜ್ ಮಂಡಿ ನೋವಿಗೆ ಗುರಿಯಾಗಿದ್ದರು. ಆಗ ತಂಡದ ತರಬೇತುದಾರರಾಗಿದ್ದ ಗ್ರೆಗ್ ಚಾಪೆಲ್, ಆಟಗಾರರನ್ನು ಖೋ-ಖೋ ಆಟಕ್ಕೆ ಅಣಿಯಾಗಿಸಿದ್ದಾಗ ಯುವರಾಜ್‌ಗೆ ಕಾಲು ಉಳುಕಿ ಮಂಡಿ ನೋವು ಉಂಟಾಗಿತ್ತು. ಈ ಮಧ್ಯೆ ಭಾರತ ತಂಡದ ಉಳಿದ ಆಟಗಾರರು ಇಂದು ಗಂಭೀರವಾಗಿ ನೆಟ್ ಅಭ್ಯಾಸದಲ್ಲಿ ತೊಡಗಿದ್ದರು. ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಕಠಿಣ ಪರೀಕ್ಷೆಗೆ ಒಳಗಾಗಿ ತಮ್ಮ ಸಾಮರ್ಥ್ಯವನ್ನು ತೂಗಿನೋಡುವಲ್ಲಿ ಮಗ್ನರಾಗಿದ್ದರು.