ಭಾರತಕ್ಕೆ ಫಿರ್ಕಿಯೇ ಬಲ
ಮಿರ್ಪುರ: ಆಡಿರುವ ನಾಲ್ಕು ಪಂದ್ಯಗಳಲ್ಲಿ ಅಜೇಯವಾಗಿ ಉಳಿಯುವ ಮೂಲಕ ವಿಶ್ವಾಸದಲ್ಲಿರು ಟೀಂ ಇಂಡಿಯಾ, ಶುಕ್ರವಾರ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯಕ್ಕೆ ಯುವರಾಜ್ ಸಿಂಗ್ ಹಿಮ್ಮಡಿ ನೋವಿನಿಂದ ಚೇತರಿಸಿಕೊಂಡಿದ್ದು, ತಂಡದ ಆಡಳಿತ ಮಂಡಳಿಗೆ ಸಂತಸ ಉಂಟುಮಾಡಿದೆ. ಇದು ಆಡುವ 11 ಆಟಗಾರರ ಆಯ್ಕೆ ಕುರಿತು ಆಡಳಿತ ಮಂಡಳಿಯಲ್ಲಿ ಉಂಟುಮಾಡಿದ್ದ ಸಮಸ್ಯೆಯನ್ನು ನೀಗಿಸಿದೆ.
ಆಯ್ಕೆಯ ಸಮಸ್ಯೆ ಎಂದರೆ, ಫಾರ್ಮ್ ಕಳೆದುಕೊಂಡಿರುವ ಶಿಖರ್ ಧವನ್ ಸ್ಥಾನದಲ್ಲಿ ಆಯ್ಕೆ ಮಾಡಲಾಗಿರುವ ಅಜಿಂಕ್ಯ ರಹಾನೆ ಮತ್ತು ಮೊಹ್ಮದ್ ಶಮಿ ಸ್ಥಾನ ತುಂಬಿದ್ದ ಮೋಹಿತ್ ಶರ್ಮಾ ಅವರನ್ನು ಉಳಿಸಿಕೊಳ್ಳಬೇಕೆ? ಎಂಬ ಚಿಂತೆ ಟೀಂ ಇಂಡಿಯಾವನ್ನು ಕಾಡುತ್ತಿದೆ.
ಯುವರಾಜ್ ಗಾಯದಿಂದ ಚೇತರಿಸಿಕೊಂೆಡಿದ್ದು, ಬ್ಯಾಟಿಂಗ್ನಲ್ಲಿ ರಹಾನೆ ಮತ್ತು ಧವನ್ ಇಬ್ಬರಲ್ಲಿ ಒಬ್ಬರಿಗೆ ಆಡುವ 11 ಆಟಗಾರರಲ್ಲಿ ಸ್ಥಾನ ನೀಡುವ ಸಾಧ್ಯತೆಗಳಿವೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ತಂಡ, ಭಾರತ ತಂಡದ ಗುಣಮಟ್ಟದ ಸ್ಪಿನ್ ದಾಳಿ ಕುರಿತು ಆತಂಕದಲ್ಲಿದೆ. ಸದಾ ದುರಾದೃಷ್ಟದಿಂದ ವಿಶ್ವಕಪ್ ಪಂದ್ಯಾವಳಿಯಲ್ಲಿ ನಿರಾಸೆ ಅನುಭವಿಸುವ ಹರಿಣಗಳು ಈ ಪಂದ್ಯಾವಳಿಯಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇನ್ನು ದಕ್ಷಿಣ ಆಫ್ರಿಕಾ ತಂಡದಲ್ಲಿ ಮಿಂಚುತ್ತಿರುವ ಸ್ಪಿನ್ನರ್ ಇಮ್ರಾನ್ ತಾಹೀರ್ ಅವರನ್ನು ಭಾರತ ತಂಡದ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೇಗೆ ಎದುರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಅಲ್ಲದೆ, ಡೇಲ್ ಸ್ಟೇಯ್ನ್ ಸಹ ಆಫ್ರಿಕಾದ ಪ್ರಮುಖ ಬೌಲರ್ ಎನಿಸಿದ್ದಾರೆ.ಉಭಯ ತಂಡಗಳನ್ನು ಪರಸ್ಪರ ಅವಲೋಕನ ಮಾಡಿದಾಗ, ಭಾರತ ತಂಡ ಗೆಲ್ಲುವ ಫೇವರಿಟ್ ಎನಿಸಿದೆ. ಟಿ20 ಕ್ರಿಕೆಟ್ನಲ್ಲಿ ಪಂದ್ಯ ಯಾವಾಗ ಬೇಕಾದರೂ ತಿರುವು ಪಡೆದುಕೊಳ್ಳಬಹುದು. ಹೀಗಾಗಿ ಇವರೇ ಗೆಲ್ಲುತ್ತಾರೆ ಎಂದು ತೀರ್ಮಾನಿಸುವುದು ಕಠಿಣ.
ಭಾರತ ತಂಡಕ್ಕೆ ಮತ್ತೊಂದು ಕಠಿಣ ವಿಷಯವೆಂದರೆ, ವೇಗದ ಬೌಲಿಂಗ್ ವಿಭಾಗ, ವೇಗಿ ಭುವನೇಶ್ವರ ಕುಮಾರ್ ಮಾತ್ರ ಉತ್ತಮವಾಗಿಯೇ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ. ಆದರೆ, ಮೊಹ್ಮದ್ ಶಮಿ ಮಾತ್ರ ಲಯ ಕಳೆದುಕೊಂಡಿರುವುದು ವೇಗದ ಬೌಲಿಂಗ್ ವಿಭಾಗ ಮೊನಚು ಕಳೆದುಕೊಳ್ಳಲು ಕಾರಣವಾಗಿದೆ. ಹೀಗಾಗಿ ಮೋಹಿತ್ ಶರ್ಮಾ ಅವರೇ ಹರಿಣಗಳ ವಿರುದ್ಧ ಅಂಗಣಕ್ಕಿಳಿಯುವ ಸಾಧ್ಯತೆಗಳಿವೆ.
ಇನ್ನು ಆಫ್ರಿಕಾ ತಂಡದ ಗೆಲವು ವಿಶ್ವದ ನಂಬರ್ 1 ವೇಗಿ ಡೇಲ್ ಸ್ಟೇಯ್ನ್ ಮೇಲೆಅವಲಂಬಿತವಾಗಿದೆ. ಇದುವರೆಗೂ ನಾಲ್ಕು ಪಂದ್ಯಗಳನ್ನಾಡಿರುವ ಸ್ಟೇಯ್ನ್ ಒಟ್ಟು 9 ವಿಕೆಟ್ ಕಬಳಿಸಿದ್ದಾರೆ.
ಸ್ಪಿನ್ ವಿಭಾಗದಲ್ಲಿ 11 ವಿಕೆಟ್ ಪಡೆದು ಮಿಂಚುತ್ತಿರುವ ಇಮ್ರಾನ್ ತಾಹೀರ್ ಅವರು ಭಾರತದ ವಿರುದ್ಧದ ಪಂದ್ಯವನ್ನು ಎದುರು ನೋಡುತ್ತಿದ್ದಾರೆ.
ಆದರೆ, ಭಾರತದ ಬ್ಯಾಟ್ಸ್ಮನ್ಗಳು ಕಳೆದ ವರ್ಷ ನಡೆದ ಟೆಸ್ಟ್ ಸರಣಿಯಲ್ಲಿ ಇಮ್ರಾನ್ ವಿರುದ್ಧ ಯಾವುದೇ ರೀತಿಯ ತೊಂದರೆ ಅನುಭವಿಸಿಲ್ಲ. ಹೀಗಾಗಿ ಇಮ್ರಾನ್ ತಾಹಿರ್ ಬಗ್ಗೆ ಭಾರತದ ಬ್ಯಾಟಿಂಗ್ ಪಡೆಯಲ್ಲಿ ಯಾವುದೇ ರೀತಿಯ ಅಳುಕಿಲ್ಲ.
ಆದರೆ, ಸ್ಥಿರ ಪ್ರದರ್ಶನ ಕಾಪಾಡಿಕೊಂಡು ಬಂದಿರುವ ಡಿವಿಲಿಯರ್ಸ್ ಮಾತ್ರ ಭಾರತ ತಂಡಕ್ಕೆ ಕೊಂಚ ಆತಂಕವಾಗಿ ಪರಿಣಮಿಸಿದ್ದಾರೆ. ಅವರೊಂದಿಗೆ ನಾಯಕ ಫಫ್ ಡು ಪ್ಲೆಸಿಸ್ಅವರು ಧೋನಿ ಪಡೆಯನ್ನು ಕಾಡುವ ನಿರೀಕ್ಷೆಗಳಿವೆ. ಅಲ್ಲದೆ, ಕಳೆದ ವರ್ಷ ನಡೆದ ಸರಣಿಯಲ್ಲಿ ಭಾರತದ ವಿರುದ್ಧ ಸತತ ಮೂರು ಶತಕ ಸಿಡಿಸಿದ ಮಿಂಚಿದ್ದ ಡಿ ಕಾಕ್ ಪ್ರದರ್ಶನವನ್ನೂ ನಾವು ಮರೆಯುವಂತಿಲ್ಲ.
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ವರುಣ್ ಎರಾನ್, ಸ್ಟುವರ್ಟ್ ಬಿನ್ನಿ, ಶಿಖರ್ ಧವನ್, ರವಿಂದ್ರ ಜಡೇಜಾ, ವಿರಾಟ್ ಕೊಹ್ಲಿ, ಭುವನೇಶ್ವರ ಕುಮಾರ, ಅಮಿತ್ ಮಿಶ್ರಾ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಸುರೇಶ್ ರೈನಾ, ಮೊಹ್ಮದ್ ಶಮಿ, ಮೋಹಿತ್ ಶರ್ಮಾ, ರೋಹಿತ್ ಶರ್ಮಾ, ಯುವರಾಜ್ ಸಿಂಗ್.
ದಕ್ಷಿಣ ಆಫ್ರಿಕಾ: ಫಫ್ ಡು ಪ್ಲೆಸಿಸ್ (ನಾಯಕ), ಹಶೀಂ ಆಮ್ಲಾ, ಖಿಂಟಾನ್ ಡಿ ಕಾಕ್, ಎಬಿ ಡಿವಿಲಿಯರ್ಸ್, ಫರ್ಹಾನ್ ಬೆಹ್ರಾಡೀನ್, ಜೆಪಿ ಡುಮಿನಿ, ಡೇವಿಡ್ ಮಿಲ್ಲರ್, ಅಲ್ಬೀ ಮಾರ್ಕೆಲ್, ಮಾರ್ನ್ ಮಾರ್ಕೆಲ್, ಡೇಲ್ ಸ್ಟೇಯ್ನ್, ಇಮ್ರಾನ್ ತಾಹೀರ್, ಬೇವುರಾನ್ ಹೆಂಡ್ರಿಕ್ಸ್, ವೇಯ್ನ್ ಪಾರ್ನೆಲ್, ಲೋನ್ವಾಬೊ ಸೊಸೊಬೆ, ಆ್ಯರೋನ್ ಫಂಗಿಸೋ.
ವಿಶ್ವಟಿ20 ಪಂದ್ಯಗಳ ಫಲಿತಾಂಶದಿನಾಂಕ ಕ್ರೀಡಾಂಗಣ ಟಾಸ್ ಜಯ ಅಂತರ
ಸೆಪ್ಟೆಂಬರ್ 20, 2007 ಡರ್ಬನ್ ಭಾರತ ಭಾರತ 37 ರನ್
ಜೂನ್ 16, 2009 ನಾಟಿಂಗ್ಹ್ಯಾಮ್ ದ. ಆಫ್ರಿಕಾ ದ. ಆಫ್ರಿಕಾ 12 ರನ್
ಮೇ 2, 2010 ಗ್ರಾಸ್ ಐಸ್ಲೆಟ್ ದ. ಆಫ್ರಿಕಾ ಭಾರತ 14 ರನ್
ಟಿ20ಯಲ್ಲಿ ಮುಖಾಮುಖಿ
ಒಟ್ಟು ಪಂದ್ಯಗಳು 7
ಭಾರತಕ್ಕೆ ಜಯ 5
ಆಫ್ರಿಕಾಕ್ಕೆ ಜಯ 2
ವಿಶ್ವ ಟಿ20ಇತಿಹಾಸ
ಒಟ್ಟು ಪಂದ್ಯಗಳು 4
ಭಾರತಕ್ಕೆ ಜಯ 3
ಆಫ್ರಿಕಾಕ್ಕೆ ಜಯ 1