ಸೈನಾ, ಕಶ್ಯಪ್ ಕ್ವಾರ್ಟರ್ಗೆ
ಭಾರತದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರ ಪಿ.ಕಶ್ಯಪ್ ಇಂಡಿಯಾ ಓಪನ್ ಸೂಪರ್ ಸೀರೀಸ್ ಪಂದ್ಯಾವಳಿಯಲ್ಲಿ ಉತ್ತಮ...
ನವದೆಹಲಿ: ಭಾರತದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರ ಪಿ.ಕಶ್ಯಪ್ ಇಂಡಿಯಾ ಓಪನ್ ಸೂಪರ್ ಸೀರೀಸ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಎಂಟರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ.
ಗುರುವಾರ ಸಿರಿ ಫೋರ್ಟ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಕಶ್ಯಪ್, ಭಾರತದವರೇ ಆದ ಆರ್.ಎಂ.ವಿ ಗುರುಸಾಯಿದತ್ ವಿರುದ್ಧ ಗೆಲವು ದಾಖಲಿಸಿದ್ದಾರೆ.
59 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕಶ್ಯಪ್, 21-15, 16-21, 21-11 ಅಂಕಗಳ ಅಂತರದಿಂದ ಗುರುಸಾಯಿದತ್ ಅವರನ್ನು ಮಣಿಸಿದ್ದಾರೆ. ಈ ಮೂಲಕ ಗುರುಸಾಯಿದತ್ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲೂ ಕಶ್ಯಪ್ ಗೆಲವು ದಾಖಲಿಸಿದ್ದಾರೆ.
ಕಶ್ಯಪ್ ಮುಂದಿನ ಪಂದ್ಯದಲ್ಲಿ, ಅಗ್ರ ಶ್ರೇಯಾಂಕಿತ ಮಲೇಷ್ಯಾದ ಲೀ ಚಾಂಗ್ ವೀ ಅವರನ್ನು ಎದುರಿಸಲಿದ್ದಾರೆ. ಗುರುಸಾಯಿದತ್ ವಿರುದ್ಧ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕಶ್ಯಪ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರು. ಮೊದಲ ಸೆಟ್ನಲ್ಲಿ 21-15 ಅಂತರದ ಮುನ್ನಡೆ ಪಡೆದುಕೊಳ್ಳುವ ಮೂಲಕ ಕಶ್ಯಪ್ ಪಂದ್ಯದಲ್ಲಿ ನಿಯಂತ್ರಣ ಸಾಧಿಸಿದರು. ಆದರೆ ಎರಡನೇ ಸೆಟ್ನಲ್ಲಿ ತಿರುಗಿ ಬಿದ್ದ ಗುರುಸಾಯಿದತ್ 21-16 ಅಂತರದ ಮುನ್ನಡೆ ಪಡೆದುಕೊಂಡು ಪಂದ್ಯದಲ್ಲಿ ಸಮಬಲ ಸಾಧಿಸಿದರು.
ಇನ್ನು ಮೂರನೇ ಹಾಗೂ ಅಂತಿಮ ಸೆಟ್ನಲ್ಲಿ ಮತ್ತೆ ಚುರುಕಿನ ಪ್ರದರ್ಶನ ನೀಡಿದ ಕಶ್ಯಪ್ 21-11ರ ಮುನ್ನಡೆ ಪಡೆದು ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಸೈನಾ ಮುನ್ನಡೆ: ಇನ್ನು ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸಹ ತಮ್ಮ ಎದುರಾಳಿ ಥಾಯ್ಲೆಂಡ್ನ ನಾಟ್ಚಾ ಸೀಂಚೊಟೆ ವಿರುದ್ಧ ಗೆಲವು ದಾಖಲಿಸಿದ್ದಾರೆ.
ಕಳೆದ ಎರಡು ಬಾರಿ ಇಂಡಿಯಾ ಓಪನ್ ಪಂದ್ಯಾವಳಿಯಲ್ಲಿ ಸೈನಾ ಎಂಟರಘಟ್ಟಕ್ಕೆ ಪ್ರವೇಶ ಪಡೆಯುವಲ್ಲಿ ವಿಫಲರಾಗಿದ್ದರು. ಹಾಗಾಗಿ ಈ ಪಂದ್ಯದಲ್ಲಿನ ಗೆಲವು ಪ್ರಮುಖವಾಗಿದೆ. ಕೇವಲ 35 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೈನಾ 21-15, 21-12 ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಆರಂಭದಿಂದಲೂ ಎದುರಾಳಿ ಮೇಲೆ ಅತ್ಯುತ್ತಮ ಪ್ರದರ್ಶನ ನೀಡಿದ ಸೈನಾ, ಎದುರಾಳಿ ನಾಟ್ಚಾಗೆ ಪಂದ್ಯದ ಯಾವುದೇ ಹಂತದಲ್ಲೂ ಅವಕಾಶ ನೀಡಲಿಲ್ಲ.
ನಿರಾಸೆ ಮೂಡಿಸಿದ ಸೌರಭ್: ಇನ್ನು ಮಲೇಷ್ಯಾ ಓಪನ್ ಫೈನಲ್ ಪ್ರವೇಶಿಸಿ ಗಮನ ಸೆಳೆದಿದ್ದ ಸೌರಭ್ ವರ್ಮಾ ಅವರು ಮಾಜಿ ರಾಷ್ಟ್ರೀಯ ಚಾಂಪಿಯನ್ ತೃಪ್ತಿ ಮುರಗುಂಡೆ, ಸಯಾಲಿ ಗೋಖಲೆ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ತಮ್ಮ ಪಂದ್ಯಗಳಲ್ಲಿ ಪರಾಭವಗೊಂಡಿದ್ದು ನಿರಾಸೆ ಮೂಡಿಸಿದ್ದಾರೆ.
ಸೌರಬ್ ವರ್ಮಾ ತಮ್ಮ ಎದುರಾಳಿ ಲೀ ಚಾಂಗ್ ವೀ ವಿರುದ್ಧ 21-19, 21-6 ನೇರ ಸೆಟ್ಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸಯಾಲಿ ತಮ್ಮ ಎದುರಾಳಿ ಕೋರಿಯಾದ ಯಿಯಾನ್ ಜು ಬೈ ವಿರುದ್ಧ 21-15, 21-8 ಸೆಟ್ಗಳ ಅಂತರದಲ್ಲಿ ಮಣಿದರು.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಮಾಜಿ ರಾಷ್ಟ್ರೀಯ ಚಾಂಪಿಯನ್ ತೃಪ್ತಿ ಮುರ್ಗುಂಡೆ, ತಮ್ಮ ಎದುರಾಳಿ ಇಂಡೋನೇಷ್ಯಾದ ಅಪ್ರಿಲ್ಲಾ ಯುಶ್ವಾಂದರಿ ವಿರುದ್ಧ ಪರಾಭವಗೊಂಡಿದ್ದಾರೆ.
ಇನ್ನು ತೃಪ್ತಿ ತಮ್ಮ ಎದುರಾಳಿ ಇಂಡೋನೇಷ್ಯಾದ ಅಪ್ರಿಲ್ಲಾ ಮುರ್ಗುಂಡೆ ವಿರುದ್ಧ 13-21, 12-21 ನೇರ ಸೆಟ್ಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿಯು 13-21, 19-21 ಸೆಟ್ಗಳ ಅಂತರದಲ್ಲಿ ಚೀನಾದ ಕ್ವಿಂಗ್ ಟಿಯಾನ್ ಹಾಗೂ ಯುನ್ಲೈ ಜೌ ವಿರುದ್ಧ ಮಣಿದಿದೆ.
ಭಾರತದ ಇನ್ನೊಂದು ಜೋಡಿ ಧನ್ಯ ನಾಯರ್ ಹಾಗೂ ಮೊಹಿತಾ ಸಹದೇವ್ ಅಗ್ರ ಶ್ರೇಯಾಂಕಿತ ಡೆನ್ಮಾರ್ಕ್ನ ಕ್ರಿಶ್ಚಿಯಾನ ಪೆಡೆರ್ಸನ್ ಹಾಗೂ ಕಮಿಲ್ಲಾ ರೈಟರ್ ವಿರುದ್ಧ ಮುಖಭಂಗ ಅನುಭವಿಸಿತು.