ಸೋಮ್ ಮೇಲೆ ಅವಲಂಬನೆ
ಬೂಸಾನ್ (ಕೊರಿಯಾ): ಭಾರತ ತನ್ನ ಎರಡನೇ ಉತ್ತಮ ಸಿಂಗಲ್ಸ್ ಆಟಗಾರನ ಸೇವೆಯಿಂದ ವಂಚಿತವಾಗಿದ್ದರೂ ಸಹ ಸ್ಪರ್ಧಾ ಕಣದಲ್ಲಿರುವ ಇತರೆ ಆಟಗಾರರು ಹೆಚ್ಚು ಪ್ರತಿಭಾನ್ವಿತರೇ ಆಗಿರುವುದರಿಂದ ಡೇವಿಸ್ ಕಪ್ನಲ್ಲಿ ಶುಕ್ರವಾರ ಎದುರಾಗಲಿರುವ ದಕ್ಷಿಣ ಕೊರಿಯಾ ವಿರುದ್ಧ ಗೆಲ್ಲುವ ಉತ್ತಮ ಆವಕಾಶವನ್ನೇ ಹೊಂದಿದೆ.
ಭಾರತ ಮತ್ತು ಆತಿಥೇಯ ದಕ್ಷಿಣ ಕೊರಿಯಾ ಒಟ್ಟು ಐದು ಪಂದ್ಯಗಳ ಪೈಪೋಟಿಯಲ್ಲಿ ಮುಖಾಮುಖಿಯಾಗಲಿದ್ದು, ಗೆಲವು ದಾಖಲಿಸುವ ಮೂಲಕ ವಿಶ್ವಗುಂಪು ಪ್ಲೇ-ಆಫ್ ಸುತ್ತಿಗೆ ಪ್ರವೇಶಿಸುವ ಕನಸು ಕಟ್ಟಿಕೊಂಡಿವೆ.
ಪಾದದ ನೋವಿನಿಂದಾಗಿ ತಂಡದಿಂದ ಹೊರಗುಳಿದಿರುವ ಯುಕಿ ಭಾಂಬ್ರಿ ಅನುಪಸ್ಥಿತಿ ಭಾರತದ ಪಾಳಯದಲ್ಲಿ ಸ್ವಲ್ಪ ನಿರಾಸೆ ಮೂಡಿಸಿದೆ. ಆದರೂ, ತವರಿನ ಸವಾಲನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಸೋಮದೇವ್ ದೇವವರ್ಮನ್, ಸನಮ್ ಸಿಂಗ್, ರೋಹನ್ ಬೋಪಣ್ಣ ಮತ್ತು ಸಾಕೇತ್ ಮೈನೇನಿ ತಂಡದಲ್ಲಿದ್ದಾರೆ.
ಸೋಮದೇವ್ ಮೇಲೆ ಭಾರತ ಅತಿಯಾದ ನಂಬಿಕೆಯನ್ನಿಟ್ಟಿದೆ. ವಿಶ್ವದ 88ನೇ ಕ್ರಮಾಂಕದ ಆಟಗಾರರಾಗಿರುವ ಅವರು, ನಾಳೆ ಮೊದಲ ಸಿಂಗಲ್ಸ್ ಪಂದ್ಯದಲ್ಲಿ 377ನೇ ಕ್ರಮಾಂಕದ ಚಂಗ್ ಹ್ಯೂಯಾನ್ರನ್ನು ಎದುರಿಸಲಿದ್ದಾರೆ. ಇನ್ನು ಯುಕಿ ಭಾಂಬ್ರಿ ಅನುಪಸ್ಥಿತಿಯಲ್ಲಿ ಸನಮ್ ಸಿಂಗ್ಗೆ ಸಿಂಗಲ್ಸ್ನಲ್ಲಿ ಆಡುವ ಅವಕಾಶ ನೀಡಲಾಗಿದೆ. ಸಾಕೇತ್ಗಿಂತಲೂ (256ನೇ ಕ್ರಮಾಂಕ) ಸನಮ್ (371ನೇ ಕ್ರಮಾಂಕ) ಕೆಳ ಕ್ರಮಾಂಕ ಹೊಂದಿದ್ದರೂ ಸಹ ಅನುಭವದ ದೃಷ್ಟಿಯಿಂದ ಆತನಿಗೆ ಅವಕಾಶ ನೀಡಲು ಅಮೃತ್ರಾಜ್ ನಿರ್ಧರಿಸಿದ್ದಾರೆ. ನಾಳೆಯೇ ನಡೆಯಲಿರುವ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಸನಮ್ ಅವರು, ಕೊರಿಯಾದ ನಂಬರ್ ಒನ್ ಆಟಗಾರ ಲಿಮ್ ಯಂಗ್-ಕ್ಯು ಅವರನ್ನು ಎದುರಿಸಲಿದ್ದಾರೆ. ಡಬಲ್ಸ್ ಪಂದ್ಯದಲ್ಲಿ ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಸಾಕೇತ್ ಅವರು ಭಾರತದ ಸವಾಲು ಮುನ್ನಡೆಸಲಿದ್ದಾರೆ.
ಇತಿಹಾಸದ ಪುಟ ತಿರುವಿ ನೋಡಿದರೆ, ಕೊರಿಯಾ ವಿರುದ್ಧ ಭಾರತ ಹೊರಸ್ಥಳಗಳಲ್ಲಿ ಗೆದ್ದ ಉದಾಹರಣೆಗಳೇ ಇಲ್ಲ. ಒಟ್ಟಾರೆ ಪರಸ್ಪರ ಮುಖಾಮುಖಿಯಲ್ಲಿ ಭಾರತ 3-6ರ ಹಿನ್ನಡೆ ಹೊಂದಿದೆ. ಕಳೆದ ಭಾರಿ 2013ರಲ್ಲಿ ಹೊಸದೆಹಲಿಯಲ್ಲಿ ಉಭಯ ತಂಡಗಳು ಸೆಣಸಿದಾಗ ಕೊರಿಯಾ 4-1ರಿಂದ ಭಾರತವನ್ನು ಮಣಿಸಿತ್ತು.