ಫುಟ್ಬಾಲ್ನಲ್ಲೂ ಫಿಕ್ಸಿಂಗ್: ಇಂಗ್ಲೆಂಡ್ನಲ್ಲಿ ಏಳು ಆಟಗಾರರ ಬಂಧನ
ಲಂಡನ್: ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ವಾಯುವ್ಯ ಇಂಗ್ಲೆಂಡ್ನ ಫುಟ್ಬಾಲ್ ಲೀಗ್ ಕ್ಲಬ್ನ ಏಳು ಆಟಗಾರರನ್ನು ಬಂಧಿಸಲಾಗಿದೆ. ಬಂಧಿತ ಎಲ್ಲ ಫುಟ್ಬಾಲ್ ಆಟಗಾರರು 18ರಿಂದ 30 ವಯಸ್ಸಿನವರು ಎಂದು ಇಂಗ್ಲೆಂಡ್ ಕ್ರೈಮ್ ಏಜೆನ್ಸಿ ತಿಳಿಸಿದೆ. ಫಿಕ್ಸಿಂಗ್ ಪ್ರಕರಣದ ಶಂಕೆ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ನಲ್ಲೇ ಆರು ಫುಟ್ಬಾಲ್ ಆಟಗಾರರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈಗ ಪ್ರಕರಣವನ್ನು ಕೆದಕಿರುವ ಪೋಲೀಸರು ಮತ್ತೆ ಅವರನ್ನು ಬಂಧಿಸಿದ್ದಾರೆ ಎಂದು ಕ್ರೈಮ್ ಏಜೆನ್ಸಿ ಹೇಳಿದೆ. ಆರೋಪ ಎದುರಿಸುತ್ತಿರುವ ಎಲ್ಲ 13 ಆಟಗಾರರನ್ನು ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಕುರಿತು ಪೋಲಿಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಆಟಗಾರರು ಪಂದ್ಯದಲ್ಲಿ ನಿರ್ಧಿಷ್ಟ ಪ್ರಕರಣವೊಂದು ಘಟಿಸಲು ಪ್ರಭಾವ ಬೀರುವುದನ್ನು ಗಮಿನಿಸಿದಾಗ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಅಗತ್ಯವಿಲ್ಲದೆ ಹಳದಿ ಕಾರ್ಡ್ ಪಡೆಯುವುದು ಮತ್ತು ಗೋಲು ಗಳಿಸುವ ಅಗತ್ಯವಿದ್ದಾಗ ಯಾವುದೇ ಪ್ರಯತ್ನ ಮಾಡದೆ ತಂಡದ ಸೋಲಿಗೆ ಕಾರಣವಾಗುವಂತಹ ಘಟನೆಗಳು ಇದಕ್ಕೆ ಕಾರಣವಾಗಿವೆ.'ಫಿಕ್ಸಿಂಗ್ ಪ್ರಕರಣಗಳಿಂದ, ವಿಶೇಷವಾಗಿ ಸ್ಪಾಟ್ ಫಿಕ್ಸಿಂಗ್ನಂತಹ ಘಟನೆಗಳು ಕ್ರೀಡೆಯ ಪ್ರಮಾಣಿಕತೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ' ಎಂದು ಇಂಗ್ಲೆಂಡ್ ಕ್ರೀಡಾ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.