ಲಂಕನ್ನರಿಗೆ ಪ್ರೋತ್ಸಾಹ ಧನ
ಕೊಲಂಬೊ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟಿ20 ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿರುವ ಸಿಂಹಳೀಯ ಆಟಗಾರರಿಗೆ, 1500 ಅಮೆರಿಕನ್ ಡಾಲರ್ ಪ್ರೋತ್ಸಾಹ ಧನ ನೀಡುವುದಾಗಿ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.
ಒಂದು ವೇಳೆ ಫೈನಲ್ ಪಂದ್ಯದಲ್ಲಿ ಲಂಕನ್ನರು ಜಯ ಸಾಧಿಸಿದರೆ, ಅದಕ್ಕೆ 1500 ಅಮೆರಿಕನ್ ಡಾಲರ್ ಪ್ರೋತ್ಸಾಹ ಧನ ಸೇರಿಸುವುದಾಗಿ ಸಹ ಅದು ಹೇಳಿದೆ. ಗುರುವಾರ ರಾತ್ರಿ ಮಳೆಯಿಂದ ಅರ್ಧಕ್ಕೆ ನಿಂತ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ವೆಸ್ಟ್ ಇಂಡೀಸ್ ವಿರುದ್ಧ 27 ರನ್ಗಳ ಅಂತರದಿಂದ ಜಯ ಸಾಧಿಸಿ ಫೈನಲ್ ಪ್ರವೇಶಿಸಿತ್ತು.
ಕಳೆದ ತಿಂಗಳು ಆಟಗಾರರು ಮತ್ತು ಲಂಕಾ ಕ್ರಿಕೆಟ್ ಸಂಸ್ಥೆ ನಡುವೆ ನಡೆದ ವಿವಾದದಲ್ಲಿ, ಆಟಗಾರರು ನೀಡುವ ಪ್ರದರ್ಶನದ ಆಧಾರದ ಮೇಲೆ ಪ್ರೋತ್ಸಾಹ ಧನ ನೀಡುವುದಾಗಿ ಲಂಕಾ ಕ್ರಿಕೆಟ್ ಸಂಸ್ಥೆ ಪ್ರಕಟಿಸಿತ್ತು.