'ಅವಕಾಶ ಬಳಕೆಯೇ ಕೊಹ್ಲಿ ಸಾಮರ್ಥ್ಯ'
ಮೀರ್‌ಪುರ: ಶ್ರೀಲಂಕಾ ವಿರುದ್ಧದ ಮಹತ್ವದ ಟಿ20 ವಿಶ್ವಕಪ್ ಫೈನಲ್‌ಗೆ ಸಜ್ಜಾಗಿರುವ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ಆಟಗಾರ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನೂ ವಿಭಿನ್ನ ಶೈಲಿಯ ಆಟ ಹೊಂದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅವರನ್ನು ಇತರೆ ಆಟಗಾರರಾದ ರೋಹಿತ್ ಶರ್ಮಾ, ಸುರೇಶ್ ರೈನಾ, ಯುವರಾಜ್ ಸಿಂಗ್ ಜತೆಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ವಿರಾಟ್ ಕಳೆದ ಹಲವು ವರ್ಷಗಳಿಂದ ಭಾರತ ತಂಡಕ್ಕೆ ಅತ್ಯುತ್ತಮ ಕಾಣಿಕೆ ನೀಡುತ್ತಿದ್ದಾರೆ ಎಂದು ಧೋನಿ ತಿಳಿಸಿದರು. ಕೊಹ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಅದೇ ಆತನ ಬಲವಾಗಿದೆ. ನಾವು ಹೆಚ್ಚಾಗಿ ನೋಡುವ ಆಟಗಾರರು ಐದು ಪಂದ್ಯಗಳಲ್ಲಿ ಅವಕಾಶ ಸಿಕ್ಕರೆ ಮತ್ತೆರಡು ಪಂದ್ಯಗಳಲ್ಲಿ ಅವಕಾಶ ನೀಡಬೇಕಿತ್ತು ಎಂದು ಕೇಳುತ್ತಾರೆ. ಆದರೆ ವಿರಾಟ್ ಕೊಹ್ಲಿ ಈ ವಿಚಾರದಲ್ಲಿ ವಿಭಿನ್ನ. ಆತ ಪಡೆದ ಮೊದಲನೇ ಅವಕಾಶದಿಂದಲೂ ಎರಡೂ ಕೈಗಳಿಂದ ಬಾಚಿಕೊಳ್ಳುತ್ತಿದ್ದಾರೆ. ಆತ ತಂಡಕ್ಕೆ ಆಗಮಿಸಿದ ಆರಂಭಿಕ ಪಂದ್ಯಗಳಲ್ಲಿ ವಿರಾಟ್ ಉತ್ತಮ ಆರಂಭ ಪಡೆದು 50, 60 70ರ ಗಡಿಯಲ್ಲಿ ಔಟಾಗುತ್ತಿದ್ದರು.
ಆ ಸಮಯದಲ್ಲೂ ಕೊಹ್ಲಿ ಬೇಸರಗೊಳ್ಳುತ್ತಿದ್ದರು. ಸಿಕ್ಕ ಆರಂಭವನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸುವ ಕಡೆ ಹೆಚ್ಚು ಗಮನ ಹರಿಸಿದರು. ಹಾಗಾಗಿ ಕೊಹ್ಲಿ ಇಂದು ಈ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ. ಆತನ ಹೊಡೆತಗಳು, ರನ್‌ಗಳಿಸುವ ವೇಗ, ಇತರೆ ಆಟಗಾರರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಧೋನಿ ಮುಡಿಗೆ ಏಷ್ಯಾ ಪ್ರಶಸ್ತಿ
ಲಂಡನ್: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿ ಪ್ರಶಸ್ತಿ ಗೆಲ್ಲುವ ಸಂಭ್ರಮದಲ್ಲಿದ್ದಾರೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ. ಈ ಸಂಭ್ರಮಕ್ಕೆ ಮತ್ತೊಂದು ಸಂತಸದ ಸುದ್ದಿ ಸೇರಿಕೊಂಡಿದೆ. ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದ ಧೋನಿ 2014ರ ಏಷ್ಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.