ಗೆಲವಿನ ನಿರೀಕ್ಷೆಯಲ್ಲಿ ಬಿಎಫ್ಸಿ
ಕೋಲ್ಕತಾ: ಪ್ರಸಕ್ತ ಐ ಲೀಗ್ ಪಂದ್ಯಾವಳಿಯಲ್ಲಿ ಪದಾರ್ಪಣೆ ಮಾಡಿರುವ ಬೆಂಗಳೂರು ಎಫ್ಸಿ ತಂಡ ಪ್ರಶಸ್ತಿ ಗೆಲವಿನ ಹೊಸ್ತಿಲಲ್ಲಿದ್ದು, ಉಳಿದಿರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಹಾಗಾಗಿ ಬೆಂಗಳೂರು ಎಫ್ಸಿ ತಮ್ಮ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಮೊಹನ್ ಬಗಾನ್ ವಿರುದ್ಧ ಸೆಣೆಸಲು ಸಜ್ಜಾಗಿದೆ.
ಬಿಎಫ್ಸಿ ಆಡಿರುವ 21 ಪಂದ್ಯಗಳಲ್ಲಿ 11 ಗೆಲವು, 5 ಡ್ರಾ ಹಾಗೂ 5 ಸೋಲಿನ ಫಲಿತಾಂಶ ಪಡೆದಿದ್ದು, ಒಟ್ಟು 38 ಅಂಕಗಳನ್ನು ಪಡೆದಿದೆ. ಇನ್ನು ಪ್ರಶಸ್ತಿಯ ರೇಸ್ನಲ್ಲಿರುವ ಸಲ್ಗಾಂವ್ಕರ್ ತಂಡ ಆಡಿರುವ 22 ಪಂದ್ಯಗಳಲ್ಲಿ 11 ಗೆಲವು, 4 ಡ್ರಾ ಹಾಗೂ 7 ಪಂದ್ಯಗಳಲ್ಲಿ ಸೋಲನುಭವಿಸಿದ್ದು, 37 ಅಂಕ ಹೊಂದಿದೆ.
ಹಾಗಾಗಿ ಬಿಎಫ್ಸಿ ತಂಡ ಕೇವಲ 1 ಅಂಕದಿಂದ ಮುನ್ನಡೆ ಸಾಧಿಸಿದ್ದು, ಈ ಅಂತರವನ್ನು ಹೆಚ್ಚಿಸಿಕೊಳ್ಳಲು ಇಂದಿನ ಪಂದ್ಯ ಬಿಎಫ್ಸಿ ಪಾಲಿಗೆ ಮಹತ್ವದ್ದಾಗಲಿದೆ. ಇನ್ನು ಮೊಹನ್ ಬಗಾನ್ ತಂಡವನ್ನು ನೋಡುವುದಾದರೆ, ತಂಡದ ಪ್ರದರ್ಶನ ಹೇಳಿಕೊಳ್ಳುವ ಮಟ್ಟದಲಿಲ್ಲ. ಏಕೆಂದರೆ ಆಡಿರುವ 21 ಪಂದ್ಯಗಳಲ್ಲಿ 5ರಲ್ಲಿ ಗೆಲವು, 9ರಲ್ಲಿ ಡ್ರಾ ಹಾಗೂ 7ರಲ್ಲಿ ಸೋಲನುಭವಿಸಿದ್ದು, ಕೇವಲ 24 ಅಂಕಗಳನ್ನು ಪಡೆದಿದೆ. ಆದರೆ ಬಗಾನ್ ತಂಡ ಈ ಪಂದ್ಯವನ್ನು ತವರಿನಲ್ಲಿ ಆಡುತ್ತಿರುವುದರಿಂದ ಅಭಿಮಾನಿಗಳ ಬೆಂಬಲ ಸಿಗಲಿದೆ.
ಬಿಎಫ್ಸಿ ತಂಡ ಈ ಪಂದ್ಯದ ನಂತರ ಡೆಂಪೊ ಸ್ಫೋರ್ಟಿಂಗ್ ವಿರುದ್ಧ ಏ.21ರಂದು ಕಡೇಯ ಪಂದ್ಯವನ್ನಾಡಲಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಬಿಎಫ್ಸಿ ಗೆಲವು ದಾಖಲಿಸಿದರೆ, ಬಹುತೇಕ ಪ್ರಶಸ್ತಿಯನ್ನು ಕೈವಶ ಮಾಡಿಕೊಂಡಂತಾಗುತ್ತದೆ. ಹಾಗಾಗಿ ಬಿಎಫ್ಸಿ ತಂಡದ ಆಟಗಾರರು ಈ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.