ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಧೋನಿ, ಮಾಲಿಂಗ ಪಡೆ ಲಡಾಯಿ

ಒಂದೆಡೆ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಪಡೆ, ಇನ್ನೊಂದೆಡೆ...

Mainashree
Updated On : 5 Apr 2014, 10:50 am

ಮೀರ್‌ಪುರ: ಒಂದೆಡೆ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಪಡೆ, ಇನ್ನೊಂದೆಡೆ ಎರಡು ಬಾರಿ ಫೈನಲ್‌ನಲ್ಲಿ ಸೋತು, ಮೂರನೇ ಬಾರಿ ಫೈನಲ್ ಪ್ರವೇಶಿಸಿ ಪ್ರಶಸ್ತಿ ಗೆಲ್ಲುವ ಕಾತರದಲ್ಲಿರುವ ಶ್ರೀಲಂಕಾ ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ತುಣುಕು ಮಾದರಿಯ ಕ್ರಿಕೆಟ್‌ನ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಉಪಖಂಡದ ಉಭಯ ತಂಡಗಳು ಮೇಲುಗೈ ಸಾಧನೆಗೆ ಸಜ್ಜಾಗಿವೆ.ಗೆದ್ದರೆ ಧೋನಿ ದಾಖಲೆ: ಫೈನಲ್ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ, ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೊಸ ದಾಖಲೆ ಬರೆಯಲಿದ್ದಾರೆ. ತಂಡವೊಂದಕ್ಕೆ ಮೂರು ವಿಶ್ವಕಪ್ ಗೆದ್ದುಕೊಟ್ಟ ಗೌರವಕ್ಕೆ ಧೋನಿ ಪಾತ್ರರಾಗಲಿದ್ದಾರೆ. ಈಗ ಧೋನಿಯೊಂದಿಗೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್ ಅವರು ತಮ್ಮ ತಂಡಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ನಾಯಕರೆನಿಸಿದ್ದಾರೆ.
ಉಭಯ ತಂಡಗಳೂ ಸಮರ್ಥ ಆಟಗಾರರನ್ನು ಹೊಂದಿವೆ. ಆದರೆ, ಇತರ ಮಾದರಿಯ ಕ್ರಿಕೆಟ್‌ನಲ್ಲಿ ತಂಡಗಳ ಬಲಾಬಲವನ್ನು ಪರಾಮರ್ಶಿಸಬಹುದು. ಆದರೆ, ಟಿ20 ಎರಡು ಸಮರ್ಥ ತಂಡಗಳ ನಡುವಿನ ಜಯವನ್ನು ಸಮಯವೇ ನಿರ್ಧರಿಸುತ್ತದೆ.
ಭಾರತ ತಂಡ ಪಂದ್ಯಾವಳಿಯಲ್ಲಿ ಇದುವರೆಗೂ ಆಡಿದ ಎಲ್ಲ ಪಂದ್ಯಗಳಲ್ಲಿ ಜಯ ಕಾಣುವ ಮೂಲಕ ಪೈನಲ್ ಪ್ರವೇಶಿಸಿದೆ. ಆದರೆ, ಲಂಕಾ ಲೀಗ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದೆ.    ಯಾವುದೇ ಸವಾಲಿಗೆ ಭಾರತ ಸಿದ್ಧ: ಪಂದ್ಯಾವಳಿಯಲ್ಲಿ ಎದುರಾಳಿ ನೀಡಿದ ಗುರಿಯನ್ನು ಧೋನಿ ಪಡೆ ಇದುವರೆಗೂ ಸಮರ್ಥವಾಗಿ ಎದುರಿಸಿದೆ. ರವಿಚಂದ್ರನ್ ಅಶ್ವಿನ್ ನೇತೃತ್ವದ ಭಾರತದ ತಂಡದ ಸ್ಪಿನ್ ಬೌಲಿಂಗ್ ವಿಭಾಗ ತಮ್ಮ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಅಲ್ಲದೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿರುವುದು ಟೀಂ ಇಂಡಿಯಾ ಗೆಲವಿನ ದಡ ಸೇರಲು ಅನುಕೂಲವಾಗುತ್ತಿದೆ.ಅಲ್ಲದೆ, ಯುವ ಪಡೆಯೊಂದಿಗೆ ನಾಯಕ ಧೋನಿ ಸಹ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಧೋನಿ ಪ್ರಮುಖ ಪಾತ್ರ ವಹಿಸಿಲಿದ್ದಾರೆ. 2011ರ ವಿಶ್ವಕಪ್‌ನಲ್ಲಿ ನುವಾನ್ ಕುಲಶೇಖರನ್ ಅವರಿಗೆ ಧೋನಿ ಬಾರಿಸಿದ ಹೆಲಿಕಾಪ್ಟರ್ ಹೊಡೆತ ಮರೆಯುವ ಹಾಗೇ ಇಲ್ಲ. ಈಗ ಮೂರು ವರ್ಷಗಳ ನಂತರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅದೇ ಎರಡು ತಂಡಗಳು ಭಾಗವಹಿಸುತ್ತಿವೆ.ಜೋಗಿಂದರ್ ಬದಲು ಮೋಹಿತ್:2007ರಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಹರ್ಯಾಣದ ಜೋಗಿಂದರ್ ಶರ್ಮಾ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಮಾಂತ್ರಿಕ ಬೌಲಿಂಗ್ ಪ್ರದರ್ಶಿಸಿದ್ದರು. ಈಗ 2014ರಲ್ಲಿ ಹರ್ಯಾಣದ ಮತ್ತೊಬ್ಬ ಯುವ ಬೌಲರ್ ಮೋಹಿತ್ ಶರ್ಮಾ ಮತ್ತೊಂದು ಚಮತ್ಕಾರ ಮೆರೆಯಲಿದ್ದಾರೆಯೇ ಕಾದು ನೋಡಬೇಕಿದೆ.ರವಿಚಂದ್ರನ್ ಅಶ್ವಿನ್ ಪಂದ್ಯದಿಂದ ಪಂದ್ಯಕ್ಕೆ ಪ್ರದರ್ಶನದಲ್ಲಿ ಚೇತರಿಸಿಕೊಳ್ಳುತ್ತಿರುವುದು ತಂಡಕ್ಕೆ ಮತ್ತಷ್ಟು ಬಲ ತಂದಿದೆ. ಹೀಗಾಗಿಯೇ ಸೆಮಿಫೈನಲ್ ಪಂದ್ಯದಲ್ಲಿ ಹರಿಣಗಳ ವಿರುದ್ಧ ಅಮಿತ್ ಮಿಶ್ರಾ ಮತ್ತು ಭುವನೇಶ್ವರ ಕುಮಾರ್ ಅವರನ್ನು ಫಫ್ ಡು ಪ್ಲೆಸಿಸ್ ಮತ್ತು ಡುಮಿನಿ ದಂಡಿಸಿದರೂ, ಬ್ಯಾಟ್ಸ್‌ಮನ್‌ಗಳ ಮೇಲೆ ನಿಯಂತ್ರಣ ಸಾಧಿಸಲು, 22 ರನ್ ನೀಡಿ 3 ವಿಕೆಟ್ ಪಡೆದ ಅಶ್ವಿನ್ ಆಶ್ರಯವಾಗಿದ್ದರು.
ಲಂಕೆಗೆ ಅದೃಷ್ಟ ಪರೀಕ್ಷೆ: ಈ ಹಿಂದೆ 2009 ಮತ್ತು 2012ರಲ್ಲಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಶ್ರೀಲಂಕಾ ಸೋಲನುಭವಿಸಿತ್ತು. ಅಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ 2007 ಮತ್ತು 2011ರಲ್ಲಿ ಫೈನಲ್ ಪ್ರವೇಶಿಸಿ ಸೋಲನುಭವಿಸಿತ್ತು. ಕಳೆದ ಏಳು ವರ್ಷಗಳಲ್ಲಿ 5ನೇ ಬಾರಿ ಫೈನಲ್ ಪ್ರವೇಶಿಸಿ ತನ್ನ ಅದೃಷ್ಟ ಪರೀಕ್ಷೆಗಳಿದಿದೆ.  ಇನ್ನು ಲಂಕಾ ತಂಡದ ಖ್ಯಾತ ಆಟಗಾರರಾದ ಮಹೇಲ ಜಯವರ್ದನೆ ಮತ್ತು ಕುಮಾರ ಸಂಗಕ್ಕಾರ ಅವರಿಗಾಗಿ ಲಂಕಾ ತಂಡ ಫೈನಲ್ ಪಂದ್ಯದಲ್ಲಿ ಗೆಲ್ಲಲು ತುದಿಗಾಲಲ್ಲಿ ನಿಂತಿದೆ. ತಮ್ಮ ಬ್ಯಾಟಿಂಗ್ ಶೈಲಿಯಲ್ಲೇ ಬದಲಾವಣೆ ಮಾಡಿಕೊಂಡಿರುವ ಜಯವರ್ದನೆ ಫೈನಲ್‌ನಲ್ಲಿ ತಮ್ಮ ಕೊಡುಗೆ ನೀಡಲು ಎದುರು ನೋಡುತ್ತಿದ್ದಾರೆ. ಸಂಗಕ್ಕಾರ ಸಹ ಮಿಂಚುವ ಕಾತರದಲ್ಲಿದ್ದಾರೆ.
ಭಾರತದ ಸೆಮೀಸ್ ಹಾದಿ:
ಭಾರತ ತಂಡ ಲೀಗ್ ಹಂತದ ನಾಲ್ಕು ಪಂದ್ಯಗಳಲ್ಲಿ ಜಯಿಸಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಜಯ ಕಂಡಿತ್ತು. 3ನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 8 ವಿಕೆಟ್ ಅಂತರದಿಂದ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 73 ರನ್‌ಗಳಿಂದ ಜಯ. ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಅಂತರದಿಂದ ಜಯಿಸಿ ಫೈನಲ್‌ಗೆ.
ಲಂಕಾ ಸೆಮೀಸ್ ಹಾದಿ: ಲೀಗ್ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ರನ್‌ಗಳಿಂದ ಗೆದ್ದು ಶುಭಾರಂಭ. 2ನೇ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ 9 ವಿಕೆಟ್‌ಗಳಿಂದ ಜಯ. 3ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗಳಿಂದ ಸೋಲು. ನಂತರ ನ್ಯೂಜಿಲೆಂಡ್ 59 ರನ್‌ಗಳಿಂದ ವಿಜಯ. ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 27 ರನ್‌ಗಳಿಂದ ಜಯ.


ತಂಡಗಳು
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ವರುಣ್ ಎರಾನ್, ಸ್ಟುವರ್ಟ್ ಬಿನ್ನಿ, ಶಿಖರ್ ಧವನ್, ರವಿಂದ್ರ ಜಡೇಜಾ, ವಿರಾಟ್ ಕೊಹ್ಲಿ, ಭುವನೇಶ್ವರ ಕುಮಾರ, ಅಮಿತ್ ಮಿಶ್ರಾ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಸುರೇಶ್ ರೈನಾ, ಮೊಹ್ಮದ್ ಶಮಿ, ಮೋಹಿತ್ ಶರ್ಮಾ, ರೋಹಿತ್ ಶರ್ಮಾ, ಯುವರಾಜ್ ಸಿಂಗ್.
ಶ್ರೀಲಂಕಾ: ಲಸಿತ್ ಮಾಲಿಂಗ (ನಾಯಕ), ತಿಲಕರತ್ನೆ ದಿಲ್ಷಾನ್, ರಂಗನ ಹೆರಾತ್, ಮಹೇಲಾ ಜಯವರ್ದನೆ, ನುವಾನ್ ಕುಲಶೇಖರ, ಸುರಂಗಾ ಲಕ್ಮಲ್, ದಿನೇಶ್ ಚಾಂಡಿಮಲ್, ಆ್ಯಂಜಿಲೋ ಮ್ಯಾಥ್ಯೂಸ್, ಅಜಂತಾ ಮೆಂಡೀಸ್, ಕುಸಾಲ್ ಪೆರೇರಾ, ತಿಸರಾ ಪೆರೇರಾ, ಸೀಕ್ಕುಗೆ ಪ್ರಸನ್ನಾ, ಕುಮಾರ ಸಂಗಕ್ಕಾರ,ಸಚಿತ್ರಾ ಸೇನಾನಾಯಕೆ, ಲಹಿರು ತಿರಿಮನ್ನೆ.    

ಪಂದ್ಯದ ಸಮಯ: ಸಂಜೆ 6:30ರಿಂದ

ರ್ಯಾಂಕಿಂಗ್‌ಭಾರತ: ಅಗ್ರಸ್ಥಾನ (132 ರೇಟಿಂಗ್ ಪಾಯಿಂಟ್)
ಶ್ರೀಲಂಕಾ: ದ್ವಿತೀಯ ಸ್ಥಾನ (131 ರೇಟಿಂಗ್ ಪಾಯಿಂಟ್)


ದುಬೈ: ಇಂಗ್ಲೆಂಡ್‌ನ ಐಯಾನ್ ಗೌಲ್ಡ್ ಹಾಗೂ ರಿಚರ್ಡ್ ಕೆಟ್ಟೆಲ್‌ಬರೊಗ್ ಅವರನ್ನು ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮೈದಾನದ ಅಂಪೈರ್ ಆಗಿ ಆಯ್ಕೆ ಮಾಡಲಾಗಿದೆ.
ಭಾನುವಾರ ನಡೆಯಲಿರುವ ಭಾರತ ಹಾಗೂ ಶ್ರೀಲಂಕಾ ನಡುವಣ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಶನಿವಾರ ಐಸಿಸಿ ಅಂಪೈರ್ ಹಾಗೂ ಪಂದ್ಯದ ರೆಫ್ರಿಗಳನ್ನು ಆಯ್ಕೆ ಮಾಡಿತು. ಇದೇವೇಳೆ ಮಹಿಳೆಯರ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಆಯ್ಕೆ ಮಾಡಲಾಯಿತು.
ಪುರುಷರ ಫೈನಲ್ ಪಂದ್ಯಕ್ಕೆ ಐಯಾನ್ ಗೌಲ್ಡ್ ಹಾಗೂ ರಿಚರ್ಡ್ ಕೆಟ್ಟೆಲ್‌ಬರೊಗ್ ಅವರನ್ನು ಮೈದಾನದ ಅಂಪೈರ್ ಆಗಿ, ರಾಡ್ ಟಕ್ಕರ್ ಮೂರನೇ ಅಂಪೈರ್ ಹಾಗೂ ಬ್ರೂಸ್ ಆಕ್ಸೆನ್‌ಫೊರ್ಡ್ ಅವರವನ್ನು ನಾಲ್ಕನೇ ಅಂಪೈರ್, ಡೇವಿಡ್ ಬೂನ್ ಅವರನ್ನು ಪಂದ್ಯದ ರೆಫ್ರಿ ಆಗಿ ನೇಮಿಸಲಾಗಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಮಹಿಳೆಯರ ಫೈನಲ್ ಪಂದ್ಯಕ್ಕೆ ಅಲೀಮ್ ದಾರ್, ಮಾರಿಯಸ್ ಎರಸ್ಮುಸ್ ಅವರನ್ನು ಮೈದಾನದ ಅಂಪೈರ್, ಬಿಲ್ಲಿ ಬೌಡೆನ್ ಮತ್ತು ಎಸ್.ರವಿ ಅವರನ್ನು ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಅಂಪೈರ್ ಆಗಿ ಆಯ್ಕೆ ಮಾಡಲಾಗಿದೆ.


ಕೊಹ್ಲಿಗೆ ಒಂದು ಉತ್ತಮ ಎಸೆತ ಸಾಕು
ಮೀರ್‌ಪುರ:
ಭಾರತದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರ ಎಂದು ಒಪ್ಪಿಕೊಂಡಿರುವ ಶ್ರೀಲಂಕಾ ತಂಡದ ಹಂಗಾಮಿ ನಾಯಕ ಲಸಿತ್ ಮಾಲಿಂಗ, ಆತನ ವಿಕೆಟ್ ಪಡೆಯಲು ತಮ್ಮ ತಂಡದಲ್ಲಿ ಉತ್ತಮ ಬೌಲರ್‌ಗಳಿದ್ದಾರೆ ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರ ಎಂಬುದು ನಮ್ಮೆಲ್ಲರಿಗೂ ಗೊತ್ತು. ಆದರೆ ಎಂತಹ ಅತ್ಯುತ್ತಮ ಆಟಗಾರನಾದರೂ ಒಂದು ಉತ್ತಮ ಎಸೆತಕ್ಕೆ ವಿಕೆಟ್ ಒಪ್ಪಿಸಲೇಬೇಕು. ಆ ಉತ್ತಮ ಎಸೆತವನ್ನು ನಮ್ಮ ತಂಡ ಬೌಲರ್‌ಗಳು ಎಸೆದು ಕೊಹ್ಲಿ ವಿಕೆಟ್ ಪಡೆಯುವರು ಎಂಬ ವಿಶ್ವಾಸ ನನ್ನಲ್ಲಿದೆ ಎಂದು ಮಾಲಿಂಗ ಅಭಿಪ್ರಾಯಪಟ್ಟರು.
ನಾವು ಪಂದ್ಯದ 20 ಓವರ್‌ಗಳಿಗೂ ಯೋಜನೆ ರೂಪಿಸಬೇಕು. ಎದುರಾಳಿ ತಂಡದಲ್ಲಿ 6ರಿಂದ 7 ಉತ್ತಮ ಬ್ಯಾಟ್ಸ್‌ಮನ್‌ಗಳಿದ್ದಾರೆ. ಹಾಗಾಗಿ ನಾವು ಕೇವಲ ಒಬ್ಬ ಆಟಗಾರನ ಬಗ್ಗೆ ಗಮನ ಹರಿಸಿಲ್ಲ. ಇನಿಂಗ್ಸ್‌ನ 20 ಓವರ್‌ಗಳ ಕಾಲ ಉತ್ತಮ ಬೌಲಿಂಗ್ ಮಾಡಲು ರಣತಂತ್ರ ರೂಪಿಸುವ ಅವಶ್ಯಕತೆ ಇದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement