ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮುನ್ನಡೆ ತಂದ ಬೋಪಣ್ಣ- ಮೈನೆನಿ

Mainashree
Updated On : 5 Apr 2014, 10:51 am

ಬೂಸಾನ್: ಡೇವಿಸ್ ಕಪ್ ವಿಶ್ವ ಗುಂಪಿನ ಪ್ಲೇ ಆಫ್ ಹಂತ ಪ್ರವೇಶಕ್ಕೆ ಭಾರತ ತಂಡ ಇನ್ನೊಂದೇ ಹೆಜ್ಜೆ ಇಡಬೇಕಾಗಿದೆ.
 ಶನಿವಾರ ನಡೆದ ಏಷ್ಯಾ ಓಶೆನಿಯಾ ಮೊದಲ ಹಂತದ ಡಬಲ್ಸ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಸಾಕೆತ್ ಮೈನೆನಿ ಜೋಡಿ, ದಕ್ಷಿಣ ಕೊರಿಯಾದ ಹ್ಯೂಂಗ್-ಟೈಕ್ ಲೀ ಮತ್ತು ಲಿಮ್ ಯಂಗ್ ಕೂ ಜೋಡಿ ವಿರುದ್ಧ ಜಯ ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ ಭಾರತಕ್ಕೆ 2-1 ಅಂತರದ ಮುನ್ನಡೆ ತಂದುಕೊಟ್ಟಿದೆ.
ಬೋಪಣ್ಣ ಮತ್ತು ಮೈನೆನಿ ಜೋಡಿ ದಕ್ಷಿಣ ಕೊರಿಯಾ ಜೋಡಿಯನ್ನು 7-6 (4), 5-7, 7-6 (2), 6-3 ಸೆಟ್‌ಗಳಿಂದ ಪರಾಭವಗೊಳಿಸಿತು. ಹೀಗಾಗಿ ಶುಕ್ರವಾರ ನಡೆದ ಮೊದಲೆರಡು ಸಿಂಗಲ್ಸ್ ಪಂದ್ಯಗಳಲ್ಲಿ 1-1ರಿಂದ ಸಮಬಲ ಸಾಧಿಸಿದ್ದ ಭಾರತ ತಂಡ, ಈಗ ಮುನ್ನಡೆ ಪಡೆದುಕೊಂಡಿದೆ.
'ಅದ್ಭುತ ಪ್ರದರ್ಶನ ನೀಡಿದ ರೋಹನ್ ಬೋಪಣ್ಣ ಮತ್ತು ಸಾಕೆತ್ ಮೈನೆನಿ ಅವರು ಭಾರತ ತಂಡಕ್ಕೆ 2-1 ಅಂತರದಿಂದ ಮುನ್ನಡೆ ತಂದುಕೊಟ್ಟಿದ್ದಾರೆ. ಇದು ತಂಡದ ಜಯದ ಹಾದಿಯನ್ನು ಸುಗಮಗೊಳಿಸಿದೆ' ಎಂದು ಸಿಂಗಲ್ಸ್ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತದ ಸನಮ್ ಸಿಂಗ್ ಪಂದ್ಯದ ನಂತರ ಟ್ವೀಟ್ ಮಾಡಿದ್ದಾರೆ.  ತಮ್ಮ ವೃತ್ತಿ ಜೀವನದಲ್ಲಿ ಎರಡನೇ ಬಾರಿಗೆ ಜೊತೆಯಾಗಿ ಆಡಿದ ಬೋಪಣ್ಣ ಮತ್ತು ಮೈನೆನಿ ಅವರು ಕೊರಿಯಾದ ಹ್ಯೂಂಗ್-ಟೈಕ್ ಲೀ ಮತ್ತು ಲಿಮ್ ಯಂಗ್ ಕೂ ಜೋಡಿ ನೀಡಿದ ಸವಾಲನ್ನು ಸಮರ್ಥವಾಗಿ ಎದುರಿಸಿದರು.
ಇದರೊಂದಿಗೆ ಭಾರತ ಈಗ ತವರಿನಿಂದ ಹೊರಗೆ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಕೊರಿಯಾ ತಂಡದ ವಿರುದ್ಧ ಜಯದ ಹೊಸ್ತಿಲಲ್ಲಿ ನಿಂತಿದೆ.
 ಪಂದ್ಯದಲ್ಲಿ ಭಾರತ ಗೆದ್ದರೆ, ಕೊರಿಯಾ ವಿರುದ್ಧ ಜಯದ ಸಂಖ್ಯೆಯಲ್ಲೂ ಚೇತರಿಸಿಕೊಳ್ಳಬಹುದಾಗಿದೆ.
ಕಳೆದಬಾರಿ 2013ರಲ್ಲಿ ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಹಿರಿಯ ಆಟಗಾರರ ಅಲಭ್ಯತೆಯ ಕಾರಣ ಭಾರತ ತಂಡ ಕೊರಿಯಾ ವಿರುದ್ಧ 4-1 ಅಂತರದಿಂದ ಸೋಲನುಭವಿಸಿತ್ತು. ಆ ಸಮಯದಲ್ಲಿ ಭಾರತದ ಎಲ್ಲ ಹಿರಿಯ ಆಟಗಾರರು ಭಾರತೀಯ ಟೆನಿಸ್ ಸಂಸ್ಥೆ ವಿರುದ್ಧ ಬಂಡೆದ್ದಿದ್ದರು.
ಭಾರತ ತಂಡ ತೈಪೇ ವಿರುದ್ಧ 5-0 ಅಂತರದಿಂದ ಗೆಲವು ಸಾಧಿಸಿದ ಮೇಲೆ ಈಗ ಕೊರಿಯಾ ವಿರುದ್ಧ ಸೆಣಸುತ್ತಿದೆ. ಆದರೆ, ಅಗ್ರ ಶ್ರೇಯಾಂಕದ ತಂಡಗಳಲ್ಲೊಂದಾಗಿರುವ ಆತಿಥೇಯ ಕೊರಿಯಾ ತಂಡ ಮೊದಲ ಪಂದ್ಯದಲ್ಲಿ ಬೈ ಪಡೆಯುವ ಮೂಲಕ ಭಾರತದ ವಿರುದ್ಧ ಸೆಣಸುತ್ತಿದ್ದು, 2008ರ ನಂತರ ಇದೇ ಮೊದಲ ಬಾರಿಗೆ ವಿಶ್ವ ಗುಂಪಿನ ಪ್ಲೇ ಆಫ್ ಪ್ರವೇಶಿಸಲು ಎದುರು ನೋಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement