ಹ್ಯಾಟ್ರಿಕ್ನತ್ತ ಕಾಂಗರೂ ಚಿತ್ತ
ಢಾಕಾ: ಕಳೆದೆರಡು ಬಾರಿ ಪ್ರಶಸ್ತಿ ಗೆದ್ದು ಹಾಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ವನಿತೆಯರ ತಂಡ ಈ ಬಾರಿಯೂ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಗೆದ್ದುಕೊಳ್ಳುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಲು ಸಜ್ಜಾಗಿದೆ. ಸತತ ಕಳೆದೆರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಕಾಂಗರೂ ಪಡೆ ಈ ಬಾರಿಯ ಪ್ರಶಸ್ತಿ ಸುತ್ತಿನಲ್ಲಿ ಪ್ರಬಲ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಹಾಗಾಗಿ ಭಾನುವಾರ ನಡೆಯಲಿರುವ ಪಂದ್ಯ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಎರಡು ತಿಂಗಳ ಹಿಂದೆಯಷ್ಟೇ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ವಶಪಡಿಸಕೊಂಡರೆ, ಸೀಮಿತ ಮಾದರಿಗಳಾದ ಏಕದಿನ ಹಾಗೂ ಟಿ20 ಸರಣಿಯನ್ನು ಆಸ್ಟ್ರೇಲಿಯಾ ಕೈವಶ ಮಾಡಿಕೊಂಡಿತ್ತು. ಆದರೆ ಈ ಬಾರಿ ಉಭಯ ತಂಡಗಳು ವಿಶ್ವಕಪ್ ಪ್ರಶಸ್ತಿಗಾಗಿ ಕಾದಾಟ ನಡೆಸುತ್ತಿರುವುದು ಪಂದ್ಯ ರೋಚಕವಾಗಿರುವ ನಿರೀಕ್ಷೆಗಳಿವೆ.
ಉಭಯ ತಂಡಗಳು ಸತತ ನಾಲ್ಕು ಪಂದ್ಯಗಳಲ್ಲಿ ಗೆಲವು ದಾಖಲಿಸುವ ಮೂಲಕ ಉತ್ತಮ ಲಯದಲ್ಲಿವೆ. ಆಸ್ಟ್ರೇಲಿಯಾ ಈ ಹಿಂದೆ 2010ರಲ್ಲಿ ನಡೆದ ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೇಲುಗೈ ಸಾಧಿಸಿದ್ದರೆ, 2012ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಶ್ರೀಲಂಕಾ ವಿರುದ್ಧ ಗೆಲವು ದಾಖಲಿಸಿತ್ತು. ಇನ್ನು ಇಂಗ್ಲೆಂಡ್ ತಂಡ 2009ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಅನ್ನು ಗೆದ್ದುಕೊಂಡಿತ್ತು.
ಇಂಗ್ಲೆಂಡ್ ತಂಡದ ಪರ ಚಾರ್ಲೊಟೆ ಎಡ್ವರ್ಡ್ಸ್, ಸಾರಾ ಟೇಲರ್, ಅನ್ಯ ಶ್ರೂಬ್ಸೊಲೆ, ಆ್ಯಮಿ ಜೋನ್ಸ್, ರೆಬೆಕ್ಕಾ ಗ್ರುಂಡೈ ಪ್ರಮುಖ ಆಟಗಾರ್ತಿಯರಾದರೆ, ಆಸ್ಟ್ರೇಲಿಯಾಕ್ಕೆ ಮೆಗ್ ಲ್ಯಾನಿಂಗ್, ಎಲ್ಲಿಸ್ ಪೆರ್ರಿ, ಅಲೆಕ್ಸ್ ಬ್ಲ್ಯಾಕ್ವೆಲ್, ಹೊಲಿ ಫೆರ್ಲಿಂಗ್, ಬೆತ್ ಮೂನಿ ತಂಡದ ಆಧಾರವಾಗಿದ್ದಾರೆ. ಒಟ್ಟಿನಲ್ಲಿ ಉಭಯ ತಂಡಗಳು ಅತ್ಯುತ್ತಮ ಆಟಗಾರ್ತಿಯರನ್ನು ಹೊಂದಿದ್ದು, ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುವರು ಎಂಬ ಕುತೂಹಲಮೂಡಿದೆ.