ಕುಮಾರ-ಮಹೇಲಾಗೆ ಶುಭ ವಿದಾಯ; ಕೊಹ್ಲಿ ಆರ್ಭಟದ ಮಧ್ಯೆಯೂ ಭಾರತಕ್ಕೆ ಸೋಲೇ ಗತಿ
ಕುಮಾರ-ಮಹೇಲಾಗೆ ಶುಭ ವಿದಾಯ; ಕೊಹ್ಲಿ ಆರ್ಭಟದ ಮಧ್ಯೆಯೂ ಭಾರತಕ್ಕೆ ಸೋಲು
ಮೀರ್ಪುರ: ಮೊದಲಿಗೆ ಟಾಸ್ ಸೋತಿದ್ದೇ ಮಹೀ ಪಡೆಗೆ ದೊಡ್ಡ ಹಿನ್ನಡೆಯಾಯಿತು. ಪಂದ್ಯಕ್ಕೆ ಮುನ್ನ ಬಿದ್ದ ಮಳೆಯಿಂದಾಗಿ ತೇವಗೊಂಡಿದ್ದ ಮೈದಾನದಲ್ಲಿ ವೇಗವಾಗಿ ಸಾಗದ ಚೆಂಡು, ಪಿಚ್ ಮೇಲೆ ನಿರೀಕ್ಷಿತ ಮಟ್ಟದಲ್ಲಿ ಪುಟಿತವಿಲ್ಲದೆ ಮತ್ತು ಈ ಲಾಭದಾಯಕ ಅಂಶಗಳನ್ನು ಸಮರ್ಥವಾಗಿ ಬಳಸಿಕೊಂಡ ಶ್ರೀಲಂಕಾ ಬೌಲರ್ಗಳು ಆಫ್ ಸ್ಟಂಪಿನಿಂದಾಚೆಗೆ ಎಸೆಯತೊಡಗಿದ ಯಾರ್ಕರ್ ಎಸೆತಗಳಿಗೆ ಉತ್ತರಿಸಲು ಸಾಧ್ಯವಾಗದ ಸಮಸ್ಯೆ ಮತ್ತೊಂದೆಡೆ.
ಈ ಎಲ್ಲ ವಿರುದ್ಧವಾಗಿದ್ದ ಸಂಗತಿಗಳ ಮಧ್ಯೆ ದಿಕ್ಕು ತೋಚದಂತಾದ ಭಾರತದ ಆಟಗಾರರು, ವಿಶ್ವಕಪ್ ಟಿ-20 ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎದುರು ದಯನೀಯ ಸೋಲನುಭವಿಸಿ ವಿಶ್ವ ಆಧಿಪತ್ಯದಿಂದ ಜಾರಿಬಿದ್ದಿದ್ದಾರೆ. ಬಾಂಗ್ಲಾದೇಶದ ಮೀರ್ಪುರ್ನಲ್ಲಿರುವ ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕನ್ನರು 6 ವಿಕೆಟ್ಗಳಿಂದ ಜಯಘೋಷ ಮೊಳಗಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಚೊಚ್ಚಲ ಬಾರಿಗೆ ವಿಶ್ವಕಪ್ ಟಿ-20 ಪಂದ್ಯಾವಳಿ ಗೆದ್ದ ಸಾಧನೆಯೊಂದಿಗೆ ತಮ್ಮ ಸಾಮ್ರಾಜ್ಯ ಸ್ಥಾಪಿಸಿದ್ದಾರೆ. ಜೊತೆಗೆ ಜೀವನದ ಕೊನೆಯ ಟಿ-20 ಪಂದ್ಯವಾಡಿದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ದನೆ ಅವರಿಗೆ ಲಂಕಾ ಆಟಗಾರರು ವಿಶ್ವಕಪ್ ಪ್ರಶಸ್ತಿಯ ಮೂಲಕ ಅದ್ಧೂರಿ ಉಡುಗೊರೆಯನ್ನೂ ನೀಡಿದ್ದಾರೆ. ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 130 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ 17.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 134 ರನ್ ದಾಖಲಿಸಿ ಗೆಲವಿನ ಸಂಭ್ರಮ ಪಟ್ಟಿತು.
ಪಂದ್ಯಕ್ಕೂ ಮುನ್ನ ಮಳೆ ಬಿದ್ದ ಪರಿಣಾಮ ಪಿಚ್ ಮಂದಗತಿ ಪಡೆಯಿತು. ಚೆಂಡು ನಿರೀಕ್ಷಿತ ಮಟ್ಟದಲ್ಲಿ ಪುಟಿತ ಪಡೆಯುತ್ತಿರಲಿಲ್ಲ. ಹಾಗಾಗಿ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಹರ ಸಾಹಸಪಡಬೇಕಾಯಿತು. ಪಿಚ್ನ ಲಾಭಪಡೆದ ಶ್ರೀಲಂಕಾ ತಂಡದ ಬೌಲರ್ಗಳು ಆಫ್ ಸ್ಟಂಪ್ನ ಹೊರಕ್ಕೆ ಯಾರ್ಕರ್ ಎಸೆತಗಳ ಮೂಲಕ ಭಾರತೀಯ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸಿದರು. ಈ ಮುನ್ನ ಕಳೆದ 7 ವರ್ಷಗಳಲ್ಲಿ ಏಕದಿನ ಹಾಗೂ ಟಿ20 ಸೇರಿದಂತೆ ಶ್ರೀಲಂಕಾ ತಂಡ 4 ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಎಡವಿತ್ತು. ಆದರೆ ಈ ಬಾರಿ ಶ್ರೀಲಂಕಾ ತಂಡ ಪ್ರಶಸ್ತಿಯನ್ನು ಎತ್ತಿ ಹಿಡಿಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಯಿತು.
ಅಂತಿಮ ಹಂತದಲ್ಲ್ಲಿ ಬ್ರೇಕ್: ಭಾರತ ತಂಡ ಅಂತಿಮ ನಾಲ್ಕು ಓವರ್ಗಳಲ್ಲಿ ಬೃಹತ್ ಮೊತ್ತ ದಾಖಲಿಸಬಹುದು ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಪಿಚ್ ಮಂದಗತಿಯಿಂದ ಕೂಡಿದ ಹಿನ್ನಲೆಯಲ್ಲಿ ಹಾಗೂ ಈ ಅವಕಾಶವನ್ನು ಬಳಸಿಕೊಂಡ ಲಂಕಾ ಬೌಲರ್ಗಳು ಭಾರತ ಬ್ಯಾಟ್ಸ್ಮನ್ಗಳ ಓಟಕ್ಕೆ ಲಗಾಮು ಹಾಕಿದರು. ಹಾಗಾಗಿ ಭಾರತ ಅಂತಿಮ ನಾಲ್ಕು ಓವರ್ ಕೇವಲ 19 ರನ್ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಅಲ್ಲದೆ ಈ ಓವರ್ಗಳಲ್ಲಿ ಉತ್ತಮ ಲಯದಲ್ಲಿದ್ದ ಕೊಹ್ಲಿ ಕೇವಲ 7 ಎಸೆತಗಳನ್ನು ಎದುರಿಸಿದರು. ಹಾಗೆಯೇ ಈ ಓವರ್ಗಳಲ್ಲಿ ಯಾವುದೇ ಬೌಂಡರಿಗಳು ಬರದ ಕಾರಣ ತಂಡದ ರನ್ ಓಟ ಕುಂಠಿತವಾಯಿತು. 17ನೇ ಓವರ್ನಲ್ಲಿ 4ರನ್, 18ನೇ ಓವರ್ನಲ್ಲಿ 4, 19ನೇ ಓವರ್ನಲ್ಲಿ 4 ಹಾಗೂ 20ನೇ ಓವರ್ನಲ್ಲಿ 7 ರನ್ ದಾಖಲಿಸಲಷ್ಟೇ ಶಕ್ತವಾಯಿತು.
ಆರಂಭಿಕ ಕುಸಿತ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಆಗಮಿಸಿದ ಭಾರತ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಆರಂಭ ನೀಡಲಿಲ್ಲ.
ತಂಡ 4 ರನ್ ಗಳಿಸಿದ್ದಾಗಲೇ ರಹಾನೆ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ನಂತರ ಬಂದ ವಿರಾಟ್ ಕೊಹ್ಲಿ ಭಾರತದ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತರು. ಎರಡನೇ ವಿಕೆಟ್ಗೆ ರಕ್ಷಣಾತ್ಮಕ ಆಟ ಪ್ರದರ್ಶಿಸಿ 60 ರನ್ಗಳ ಜತೆಯಾಟ ನೀಡಲಾಯಿತು. ರೋಹಿತ್ ಶರ್ಮಾ 29 ರನ್ ದಾಖಲಿಸಿ ಉತ್ತಮ ಆರಂಭ ಪಡೆದರಾದರೂ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
ನಂತರ ಬಂದ ಯುವರಾಜ್ 21 ಎಸೆತಗಳಲ್ಲಿ ಕೇವಲ 11 ರನ್ಗಳಿಸಿದರು. ಹಾಗಾಗಿ ಭಾರತ ತಂಡದ ರನ್ ವೇಗಕ್ಕೆ ಮತ್ತಷ್ಟು ಕಡಿವಾಣ ಬಿತ್ತು.
ಆಸರೆಯಾದ ಕೊಹ್ಲಿ: ಆದರೆ ಭಾರತ ತಂಡಕ್ಕೆ ಆಸರೆಯಾಗಿ ನಿಂತ ವಿರಾಟ್ ಕೊಹ್ಲಿ ಮತ್ತೊಮ್ಮೆ ಭಾರತ ತಂಡದ ಬೆನ್ನೆಲುಬು ಎಂಬುದನ್ನು ತಮ್ಮ ಆಟದ ಮೂಲಕ ಸಾಬೀತು ಪಡಿಸಿದರು. 58 ಎಸೆತಗಳನ್ನು ಎದುರಿಸಿದ ಕೊಹ್ಲಿ 5 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ನೆರವಿನಿಂದ 77 ರನ್ಗಳಿಸಿದರು. ಇನಿಂಗ್ಸ್ನ ಕಡೇ ಎಸೆತದಲ್ಲಿ ರನೌಟ್ ಆದರು.
ಸಂಗಕ್ಕಾರ ಸ್ಮರಣೀಯ ಇನಿಂಗ್ಸ್: ಭಾರತ ನೀಡಿದ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಕುಮಾರ ಸಂಗಕ್ಕಾರ ಇನಿಂಗ್ಸ್ ಮಹತ್ವದ ಕಾಣಿಕೆಯಾಯಿತು. 35 ಎಸೆತಗಳನ್ನು ಎದುರಿಸಿದ ಸಂಗಕ್ಕಾರ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 52 ರನ್ ದಾಖಲಿಸಿದರು. ಸಂಗಕ್ಕಾರ ಅವರಿಗೆ ಉತ್ತಮ ರೀತಿಯಲ್ಲಿ ಸಾಥ್ ನೀಡಿದ ತಿಸಾರ ಪೆರೇರಾ 14 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 23 ರನ್ ದಾಖಲಿಸಿದರು. ಉಳಿದಂತೆ ಜಯವರ್ದನೆ 24, ದಿಲ್ಷಾನ್ 18 ರನ್ ದಾಖಲಿಸಿದರೆ, ಕುಶಾಲ ಪೆರೇರಾ 5, ತಿರಿಮಾನೆ 7 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಇದೇ ವೇಳೆ ಸೋಲಿಗೆ ಯುವಿ ಕಾರಣವೆಂದು ಅಭಿಮಾನಿಗಳು ಚಂಡೀಗಡ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಸ್ಕೋರ್ ವಿವರ
ಭಾರತ 20 ಓವರ್ಗಳಲ್ಲಿ 4 ವಿಕೆಟ್ಗೆ 130
ರನ್ ಎಸೆತ 4 6
ರೋಹಿತ್ ಸಿ ಸೇನನಾಯಕೆ ಬಿ ಹೆರಾತ್ 29 26 3 0
ರಹಾನೆ ಬಿ ಮ್ಯಾಥ್ಯೂಸ್ 3 8 0 0
ಕೊಹ್ಲಿ ರನೌಟ್ (ಸೇನನಾಯಕೆ) 77 58 5 4
ಯುವರಾಜ್ ಸಿ ಪೆರೇರಾ ಬಿ ಕುಲಶೇಖರ 11 21 0 0
ಧೋನಿ ಅಜೇಯ 4 7 0 0
ಇತರೆ: (ಬೈ 2, ಎಲ್ಬಿ 2, ವೈಡ್ 2) ಒಟ್ಟು 6.
ವಿಕೆಟ್ ಪತನ: 1-4, 2-64, 3-119, 4-130.
ಬೌಲಿಂಗ್: ಕುಲಶೇಖರ 4-0-29-1, ಮ್ಯಾಥ್ಯೂಸ್ 4-0-25-1, ಸೇನನಾಯಕೆ 4-0-22-0, ಮಾಲಿಂಗ 4-0-27-0, ಹೆರಾತ್ 4-0-23-1
ಶ್ರೀಲಂಕಾ 17.5 ಓವರ್ಗಳಲ್ಲಿ 4 ವಿಕೆಟ್ಗೆ 134
ರನ್ ಎಸೆತ 4 6
ಪೆರೇರಾ ಸಿ ಜಡೇಜಾ ಬಿ ಮೊಹಿತ್ 5 7 1 0
ದಿಲ್ಷಾನ್ ಸಿ ಕೊಹ್ಲಿ ಬಿ ಅಶ್ವಿನ್ 18 16 4 0
ಜಯವರ್ದನೆ ಸಿ ಅಶ್ವಿನ್ ಬಿ ರೈನಾ 24 24 4 0
ಸಂಗಕ್ಕಾರ ಅಜೇಯ 52 35 6 1
ತಿರಿಮಾನೆ ಸಿ ಧೋನಿ ಬಿ ಮಿಶ್ರಾ 7 11 1 0
ತಿಸಾರ ಪೆರೇರಾ ಅಜೇಯ 23 14 0 3
ಇತರೆ: (ಎಲ್ಬಿ 2, ವೈಡ್ 3) ಒಟ್ಟು 5.
ವಿಕೆಟ್ ಪತನ: 1-5, 2-41, 3-65, 4-78
ಬೌಲಿಂಗ್ ವಿವರ: ಭುವನೇಶ್ವರ್ 3-0-18-0, ಮೊಹಿತ್ 2-0-18-1, ಅಶ್ವಿನ್ 3.5-0-29-1, ಅಮಿತ್ ಮಿಶ್ರಾ 4-0-32-1, ರೈನಾ 4-0-24-1, ಜಡೇಜಾ 1-0-11-0.
ಸರಣಿಶ್ರೇಷ್ಠ : ವಿರಾಟ್ ಕೊಹ್ಲಿ
ಪಂದ್ಯಶ್ರೇಷ್ಠ : ಕುಮಾರ ಸಂಗಕ್ಕಾರ