ಪಾಕಿಸ್ತಾನ ಅಭಿಮಾನಿಗೆ ಟಿಕೆಟ್ ನೀಡಿದ ಧೋನಿ
ಮೀರ್ಪುರ: ತಮ್ಮ ವಿಶಿಷ್ಠ ಕಾರ್ಯತಂತ್ರ ಮತ್ತು ಸಮರ್ಥ ನಾಯಕತ್ವಕ್ಕೆ ಹೆಸರಾಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಭಾರತ-ಶ್ರೀಲಂಕಾ ನಡುವಿನ ಫೈನಲ್ ಪಂದ್ಯಕ್ಕೆ ಆಗಮಿಸಿದ್ದ ಪಾಕಿಸ್ತಾನದ ಅಭಿಮಾನಿಯೊಬ್ಬ ಟಿಕೆಟ್ ಬೇಡಿಕೆಯನ್ನು ಈಡೇರಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಎಷ್ಟೇ ದ್ವೇಷವಿರಬಹುದು. ಪಾಕಿಸ್ತಾನದ ವಿರುದ್ಧ ಪಂದ್ಯ ನಡೆದಾಗ ಭಾರತದ ಆಟಗಾರರು ವೀರಾವೇಷದಿಂದ ಹೋರಾಡಬಹುದು. ಆದರೆ, ಅಲ್ಲಿನ ಅಭಿಮಾನಿಯೊಬ್ಬರಿಗೆ ತಮ್ಮ ಪಾಲಿನ ಟಿಕೆಟ್ ನೀಡುವ ಮೂಲಕ ಧೋನಿ ಹೃದಯವಂತಿಕೆ ಮೆರೆದಿದ್ದಾರೆ. ಪಾಕ್ನ ಕಟ್ಟಾ ಅಭಿಮಾನಿ ಮೊಹ್ಮದ್ ಬಶೀರ್ ಎಂಬುವವರಿಗೆ ಧೋನಿ ಟಿಕೆಟ್ ನೀಡಿದ್ದಾರೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡವನ್ನು ಬೆಂಬಲಿಸಲು ಶಿಕಾಗೋದಿಂದ ಬಂದ ಬಶೀರ್ಗೆ ಧೋನಿ ಟಿಕೆಟ್ ನೀಡಿದ್ದಾರೆ.
'ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಪಂದ್ಯಕ್ಕೂ ಮುನ್ನ ಧೋನಿ ಅವರು ನನ್ನನ್ನು ನೋಡಿದ್ದರು. ಹೀಗಾಗಿ ಅವರಿಗೆ ನನ್ನ ಮುಖಪರಿಚಯವಿತ್ತು. ಫೈನಲ್ ವೀಕ್ಷಿಸಲು ನನ್ನ ಬಳಿ ಟಿಕೆಟ್ ಇರಲಿಲ್ಲ. ಶನಿವಾರ ಭಾರತದ ಅಭ್ಯಾಸ ವೀಕ್ಷಿಸಿದ ವೇಳೆ ಫೈನಲ್ ಪಂದ್ಯವನ್ನು ನೋಡಲು ನನ್ನ ಬಳಿ ಟಿಕೆಟ್ ಇಲ್ಲ ಎಂದು ನಾನು ಧೋನಿಗೆ ಹೇಳಿದೆ. ಆಗ ತಂಡದ ಟ್ರೈನರ್ ರಮೇಶ್ ಮಾನೆ ಎಂಬುವವರನ್ನು ಕರೆದ ಧೋನಿ ಅವರು ನನಗೆ ಟಿಕೆಟ್ ನೀಡಲು ಸೂಚಿಸಿದರು' ಎಂದಿದ್ದಾರೆ ಬಶೀರ್.