ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಶ್ವಗುಂಪಿಗೆ ಪ್ರವೇಶಿಸಿದ ಭಾರತ

ತವರಿನ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸೋಮದೇವ್ ದೇವವರ್ಮನ್ ಮೊದಲ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ...

Mainashree
Updated On : 6 Apr 2014, 10:33 am

ಬೂಸಾನ್ (ಕೊರಿಯಾ): ತವರಿನ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸೋಮದೇವ್ ದೇವವರ್ಮನ್ ಮೊದಲ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಆಟಗಾರನ ವಿರುದ್ಧ ಗೆಲವು ದಾಖಲಿಸುತ್ತಲೇ ಭಾರತ ತಂಡ ಡೇವಿಸ್ ಕಪ್ ವಿಶ್ವಗುಂಪಿನ ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.
ಭಾನುವಾರ ನಡೆದ ಮೊದಲ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ಸೋಮದೇವ್, 6-4, 5-7, 6-3, 6-1 ಸೆಟ್‌ಗಳಿಂದ ಯಂಗ್ ಕ್ಯೂ ಲಿಮ್ ಅವರನ್ನು ಸೋಲಿಸಿದರು. ಇದರೊಂದಿಗೆ ಭಾರತ ಡೇವಿಸ್ ಕಪ್ ತಂಡ ಏಷಿಯಾ-ಓಶೆನಿಯಾ ಗುಂಪು-1ರ ಎರಡನೇ ಸುತ್ತಿನ ಪಂದ್ಯದಲ್ಲಿ ಕೊರಿಯಾ ವಿರುದ್ಧ 3-1 ಗೆಲವಿನ ಅಂತರದಲ್ಲಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಹಾಗಾಗಿ, ಅನಗತ್ಯ ಎನಿಸಿದ ಎರಡನೇ ರಿವರ್ಸ್ ಸಿಂಗಲ್ಸ್ ಪಂದ್ಯವನ್ನು ರದ್ದುಪಡಿಸಲಾಯಿತು.
ಮೊದಲ ದಿನ ಮೊದಲ ಸಿಂಗಲ್ಸ್ ಪಂದ್ಯದಲ್ಲೂ ಗೆಲುವು ದಾಖಲಿಸಿದ್ದ ಸೋಮದೇವ್ ಭಾರತದ ಶುಭಾರಂಭಕ್ಕೆ ಕಾರಣರಾಗಿದ್ದರು. ಆದರೆ, ಎರಡನೇ ಸಿಂಗಲ್ಸ್‌ನಲ್ಲಿ ಸನಮ್ ಸಿಂಗ್ ಸೋತಿದ್ದರಿಂದ ಉಭಯ ತಂಡಗಳು 1-1 ಸಮಗೌರವ ಸಾಧಿಸಿದ್ದವು. ನಿನ್ನೆ ನಡೆದ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಸಾಕೇತ್ ಮೈನೇನಿ ಗೆಲವು ದಾಖಲಿಸಿ ಪುನಃ ಭಾರತಕ್ಕೆ 2-1 ಮುನ್ನಡೆ ತಂದುಕೊಟ್ಟರು.
ಹಾಗಾಗಿ, ಭಾನುವಾರ ಎರಡು ರಿವರ್ಸ್ ಸಿಂಗಲ್ಸ್ ಪಂದ್ಯಗಳು ಕುತೂಹಲ ಕೆರಳಿಸಿದ್ದವು. ನಿರೀಕ್ಷೆಯಂತೆ ಸೋಮದೇವ್ ಮೊದಲ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ನಾಲ್ಕು ಸೆಟ್‌ಗಳ ರೋಚಕ ಕಾದಾಟದಲ್ಲಿ ಅತ್ಯುತ್ತಮ ಆಟ ಸಂಘಟಿಸಿ ವಿಜಯಲಕ್ಷ್ಮಿ ಒಲಿಸಿಕೊಂಡರು.
ಪಂದ್ಯದ ನಂತರ ಭಾರತ ತಂಡದ ಸದಸ್ಯ ಸನಮ್ ಸಿಂಗ್, ಸೋಮದೇವ ಮತ್ತು ಬೋಪಣ್ಣ ಬಗ್ಗೆ ಟ್ವೀಟ್ ಮಾಡಿ ಅವರ ಆಟದ ಕೌಶಲ್ಯವನ್ನು ಹೊಗಳಿದರು.
ಈ ಗೆಲವಿನೊಂದಿಗೆ ಭಾರತ ಡೇವಿಸ್ ಕಪ್ ಇತಿಹಾಸದಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಸಾಧನೆಯನ್ನು 4-6ರ ಅಂತರದಲ್ಲಿ ಕೊಂಚ ಉತ್ತಮ ಪಡಿಸಿಕೊಂಡರು. ಅಲ್ಲದೇ ಕಳೆದ 2013ರಲ್ಲಿ ಹೊಸದೆಹಲಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಕೊರಿಯಾ ಎದುರು 1-4ರಿಂದ ದಯನೀಯ ಸೋಲು ಕಂಡಿದ್ದ ಭಾರತ, ಇಲ್ಲಿ ಅದಕ್ಕೆ ತಕ್ಕ ಸೇಡು ತೀರಿಸಿಕೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement