ಇಂದಿನಿಂದ ದುಬೈ ಓಪನ್ ಚೆಸ್: ಗುಪ್ತಾ ಮೇಲೆ ನಿರೀಕ್ಷೆ
ದುಬೈ: ಗ್ರ್ಯಾಂಡ್ ಮಾಸ್ಟರ್ ಹಾಗೂ ಮಾಜಿ ವಿಶ್ವ ಕಿರಿಯ ಚಾಂಪಿಯನ್ ಅಭಿಜಿತ್ ಗುಪ್ತಾ ಇಂದಿನಿಂದ ಆರಂಭವಾಗಲಿರುವ ದುಬೈ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರ್ಯಾಂಕಿಂಗ್ ಪಡೆದ ಆಟಗಾನಾಗಿದ್ದು, ನಿರೀಕ್ಷೆಗಳು ಹೆಚ್ಚಿವೆ.
ಅಭಿಜಿತ್ 2011ರಲ್ಲಿ ನಡೆದ ದುಬೈ ಓಪನ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಗುಪ್ತಾ ಇತ್ತೀಚೆಗೆ ಯುಎಇಯಲ್ಲಿ ನಡೆದ ಅಲ್ ಐನ್ ಕ್ಲಾಸಿಕ್ ಪಂದ್ಯಾವಳಿಯಲ್ಲಿ ಗೆಲವು ದಾಖಲಿಸಿದ್ದಾರೆ. ಭಾರತದ ಆಟಗಾರ 12ನೇ ರ್ಯಾಂಕಿಂಗ್ ಪಡೆದಿದ್ದು, ಏಷ್ಯಾದ ಪ್ರಮುಖ ಪಂದ್ಯಾವಳಿಯಲ್ಲಿ ಬಲಿಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ಉಕ್ರೇನ್ನ ಅಂಟೊನ್ ಕೊರೊಬೊವ್ ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕದೊಂದಿಗೆ ಕಣಕ್ಕಿಳಿಯಲಿದ್ದಾರೆ.
ಕೊರೊಬೊವ್ ಕಳೆದ ವಿಶ್ವ ಚೆಸ್ ಕಪ್ ಹಾಗೂ 2012ರಲ್ಲಿ ದೆಹಲಿಯಲ್ಲಿ ನಡೆದ ಎಐಸಿಎಫ್-ಎಎಐ ಕಪ್ನಲ್ಲಿ ಗೆಲವು ದಾಖಲಿಸಿದ್ದರು.
ಉಲಿದಂತೆ ಅರ್ಮೇನಿಯಾದ ವ್ಲಾಡ್ಮಿರ್ ಅಕೊಪೈನ್, ಫ್ರೆಂಚ್ನ ರೊಮೈನ್ ಎಡೊರ್ಡಾ ಮತ್ತು ಆ್ಯಂಡ್ರೆ ಆಸ್ಟ್ರಾಟೆಸ್ಕು, ರೊಮೇನಿಯಾದ ಕಾಂಸ್ಟಾಂಟಿನ್ ಲುಪುಲೆಸ್ಕು ಮತ್ತು ಹಂಗೇರಿಯ ಸಾಬಾ ಬಾಲೌ ಇತರೆ ಪ್ರಮುಖ ಆಟಗಾರರಾಗಿದ್ದಾರೆ.
ಈ ಪಂದ್ಯಾವಳಿಯಲ್ಲಿ ಫಿಡೆಯ ಸ್ವಿಸ್ ನಿಯಮವನ್ನು ಬಳಸಲಾಗುತ್ತಿದ್ದು, ಒಂಬತ್ತು ಸುತ್ತುಗಳಲ್ಲಿ ಆಡಲಾಗುವುದು. ಇನ್ನು 16ನೇ ಆವೃತ್ತಿಯ ದುಬೈ ಓಪನ್ ಪಂದ್ಯಾವಳಿ ಎಂದಿನಂತೆ ವಿವಿಧ ಭಾರತೀಯ ಆಟಗಾರರಿಂದ ಆಕರ್ಷಣೆ ಪಡೆದುಕೊಂಡಿದೆ.
ಈ ಬಾರಿ ಪಂದ್ಯಾವಳಿಯಲ್ಲಿ 160 ಆಟಗಾರರು ಭಾಗವಹಿಸುತ್ತಿದ್ದು, ಅದರಲ್ಲಿ 30 ಆಟಗಾರರು ಭಾರತದವರಾಗಿದ್ದಾರೆ. ಇನ್ನು ಪಂದ್ಯಾವಳಿಯಲ್ಲಿ 40 ಗ್ರ್ಯಾಂಡ್ ಮಾಸ್ಟರ್ಗಳು, 22 ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್, ಎಂಟು ಮಹಿಳಾ ಗ್ರ್ಯಾಂಡ್ ಮಾಸ್ಟರ್ ಮತ್ತು ಮೂವರು ಮಹಿಳಾ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಗಳು ಸೇರಿದಂತೆ ಒಟ್ಟು 70 ಆಟಗಾರರು ಈ ಹಿಂದೆ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಭಾರತದ ಆಟಗಾರರ ಪಟ್ಟಿಯಲ್ಲಿ ಅಭಿಜಿತ್ ಗುಪ್ತಾ ಜತೆಗೆ ಗ್ರ್ಯಾಂಡ್ ಮಾಸ್ಟರ್ಗಳಾದ ಎಂ.ಆರ್ ಲಲಿತ್ ಬಾಬು, ದೆಬಶಿಶ್ ದಾಸ್, ಎಂ. ಶ್ಯಾಮ್ ಸುಂದರ್ ಮತ್ತು ಶಹಜ್ ಗ್ರೊವರ್ ಭಾಗವಹಿಸಲಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಗಳಾದ ದೀಪ್ತಯಾನ್ ಘೋಶ್, ಸ್ವಪ್ನಿಲ್ ದೊಪಾಡೆ ಮತ್ತು ಅಶ್ವಿನಿ ಜಯರಾಮ್ ಸಹ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ.