ನಾಕೌಟ್ ಪ್ರವೇಶಕ್ಕೆ ಪುಣೆ ಪ್ರಯತ್ನ
ನೇಯ್ ಪೈ ತಾವ್: ಎಎಫ್‌ಸಿ ಕಪ್ ಫುಟ್ಬಾಲ್ ಪಂದ್ಯಾವಳಿಯ ನಾಕೌಟ್ ಹಂತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವ ಪುಣೆ ಎಫ್‌ಸಿ ತಂಡ ಇಂದು ಮಯನ್ಮಾರ್ ವಿರುದ್ಧ ಕಾದಾಟ ನಡೆಸಲಿದೆ.
ಮಂಗಳವಾರ ಪೌಂಗ್ ಲೌಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎಚ್ ಗುಂಪಿನ 5ನೇ ಸುತ್ತಿನ ಪಂದ್ಯದಲ್ಲಿ ಪುಣೆ ಎಫ್‌ಸಿ ಗೆಲವು ದಾಖಲಿಸುವ ಮೂಲಕ ಎಎಫ್‌ಸಿ ಕಪ್ ಪಂದ್ಯಾವಳಿಯ ನಾಕೌಟ್ ಹಂತಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಎದುರು ನೋಡುತ್ತಿದೆ.
ಪುಣಎ ಎಫ್‌ಸಿ ತಂಡ ಕಳೆದ ಎರಡು ಪಂದ್ಯಗಳಲ್ಲಿ ಸತತ ಸೋಲನುಭವಿಸಿದ್ದು, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅಲ್ಲದೆ ಉಪಖಂಡಗಳ ಹಂತದಲ್ಲಿ ಮೊದಲ ಗೆಲವನ್ನು ದಾಖಲಿಸಲು ಕಾಯುತ್ತಿದೆ.
ಸತತ ಸೋಲಿನ ಹಿನ್ನೆಲೆಯಲ್ಲಿ ಪುಣೆ ತಂಡದ ನಾಕೌಟ್ ಹಂತದ ಹಾದಿ ಸಂಕುಚಿತವಾಗಿದೆ. ಪುಣೆ ಕೇವಲ 2 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದು, ಪಂದ್ಯಾವಳಿಯಲ್ಲಿ ಮರು ಹೋರಾಟ ನಡೆಸಲು ಸಿದ್ಧತೆ ನಡೆಸಿದೆ. ಇನ್ನು ನೇಯ್ ಪೈ ತಾವ್ ತಂಡವು ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಕಳೆದ ಪಂದ್ಯದಲ್ಲಿ ಸೋಲಿನ ಕಹಿ ಸವಿದಿದೆ.
ನಾಕೌಟ್ ಹಂತಕ್ಕೆ ಪ್ರವೇಶಿಸಲು ತಮ್ಮ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಲು ಉಭಯ ತಂಡಗಳು ಪ್ರಯತ್ನಿಸುತ್ತಿವೆ. ಹಾಗಾಗಿ ಇಂದು ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ಹೆಚ್ಚಿನ ಮಹತ್ವದ್ದಾಗಿದೆ.