ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತದ ಪಾಲಿಗೆ ಇದೊಂದು ಕೆಟ್ಟ ದಿನ

Mainashree
Updated On : 7 Apr 2014, 10:22 am

ಭಾರತದ ಪಾಲಿಗೆ ಇದೊಂದು ಕೆಟ್ಟ ದಿನವಾಗಿತ್ತು. ವಿಶ್ವಕಪ್ ಟಿ-20 ಪಂದ್ಯಾವಳಿಯನ್ನು ಎರಡನೇ ಬಾರಿಗೆ ಗೆದ್ದುಕೊಳ್ಳುವ ಅತ್ಯುತ್ತಮ ಅವಕಾಶವೊಂದು ಕೈಜಾರಿ ಹೋಯಿತಲ್ಲ ಎಂಬ ಕೊರಗು ಪ್ರತಿಯೊಬ್ಬರಲ್ಲೂ ಮೂಡಿದ್ದರೆ ತಪ್ಪಲ್ಲ. ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ಭಾರತದ ಸೋಲಿಗೆ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ ಯುವರಾಜ್ ಸಿಂಗ್ ಮೂಲ ಕಾರಣ ಎಂಬ ಟೀಕೆಗಳು ವ್ಯಕ್ತವಾಗಿದ್ದರಲ್ಲಿ ಆಶ್ಚರ್ಯವೂ ಅಲ್ಲ.
ಭಾರತ ದೇಶದಲ್ಲಿ ಇಂತಹುದು ಸಹಜ ಕೂಡ. ಏಕೆಂದರೆ, ಕ್ರಿಕೆಟ್ ನಮ್ಮ ಧರ್ಮ ಎಂಬಂತಾಗಿದೆ. ಕ್ರಿಕೆಟ್ ನಮ್ಮ ಉಸಿರು...ಕ್ರಿಕೆಟಿಗರು ನಮ್ಮ ಆರಾಧ್ಯದೈವ... ಎಂಬುದೇ ಇಲ್ಲಿ ಸತ್ಯ.   ಗೆದ್ದಾಗ ಬೀಗುವಷ್ಟು ಸೋತಾಗಲೂ ಭಾರತೀಯರು ಮಮ್ಮಲ ಮರಗುತ್ತಾರೆ. ಉತ್ತಮವಾಗಿ ಆಡಿ ತಂಡವನ್ನು ಗೆಲ್ಲಿಸಿದ ಆಟಗಾರನನ್ನು ಹೊತ್ತು ಮೆರೆಯುತ್ತಾರೆ. ಅದೇ ಆಟಗಾರ ಸೋಲಿಗೆ ಕಾರಣನಾದಲ್ಲಿ ಟೀಕೆಗಳ ಸುರಿಮಳೆಯನ್ನೇ ಹರಿಸುತ್ತಾರೆ.
ಆದರೆ, ಇದೆಲ್ಲವೂ ಕ್ಷಣಿಕವಾಗಿರುತ್ತದೆ. ಮತ್ತೊಂದು ಸಂಭ್ರಮದ ಕ್ಷಣ ಬಂದಾಗ ಎಲ್ಲವನ್ನೂ ಮರೆತು ಬಿಡುತ್ತೇವೆ.
ಭಾರತ ಈ ಬಾರಿ ಟಿ-20 ವಿಶ್ವಕಪ್‌ನಲ್ಲಿ ಚಾಂಪಿಯನ್ ಎನಿಸಿಕೊಳ್ಳುವುದು ಸುಲಭ ಅಥವಾ ಕಷ್ಟವಾಗೇನೂ ಇರಲಿಲ್ಲ. ಫೈನಲ್‌ನಲ್ಲಿ ಎದುರಾದ ಶ್ರೀಲಂಕಾ ಕೂಡ ಸಮರ್ಥ ಎದುರಾಳಿಯೇ ಆಗಿತ್ತು. ಅಂತಿಮವಾಗಿ ಗೆಲ್ಲುವ ಅದೃಷ್ಟ ನಮ್ಮದಾಗಿರಲಿಲ್ಲ ಅಷ್ಟೇ. ವಿಶ್ವಕಪ್ ಆರಂಭಕ್ಕೂ ಮುನ್ನ ಏಷ್ಯಾ ಕಪ್‌ನಲ್ಲಿ ದಯನೀಯ ಪ್ರದರ್ಶನ. ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಅನುಭವಿಸಿದ ಕೆಟ್ಟ ಕಹಿ ನೆನಪಿಸಿಕೊಂಡರೆ, ವಿಶ್ವಕಪ್‌ನಲ್ಲಿ ಭಾರತ ನೀಡಿದ ಪ್ರದರ್ಶನ ಮೆಚ್ಚುವಂತದ್ದಾಗಿತ್ತು. ತಂಡದಲ್ಲಿ ಬೌಲರ್‌ಗಳೇ ಇಲ್ಲದ ಕೊರಗು ಮನೆಮಾಡಿತ್ತು. ಆದರೆ, ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನು ಫೈನಲ್‌ಗೆ ತಲುಪಿಸಿದ್ದು ಇದೇ ಬೌಲರ್‌ಗಳು ಎಂಬುದನ್ನು ನೆನಪಿಟ್ಟುಕೊಳ್ಳಬೇಕು.  
ಟಾಸ್ ಸೋತಿದ್ದು ಟೀಂ ಇಂಡಿಯಾಗೆ ಮುಳುವಾಯಿತು. ಪಂದ್ಯಕ್ಕೆ ಮುನ್ನ ಸುರಿದ ಮಳೆಯಿಂದಾಗಿ ಮೈದಾನ ತೇವಗೊಂಡಿತ್ತು. ಪ್ರತಿಕೂಲ ಸನ್ನಿವೇಶದಲ್ಲಿ ಮೊದಲು ಬ್ಯಾಟ್ ಮಾಡುವಂತಹ ಪರಿಸ್ಥಿತಿ ಎದುರಾಗಿದ್ದು ಮತ್ತೊಂದು ದುರ್ದೈವ. ಚೆಂಡು ನಿರೀಕ್ಷಿತ ಮಟ್ಟದಲ್ಲಿ ಪುಟಿಯಲಿಲ್ಲ. ಇದನ್ನೇ ಲಾಭ ಮಾಡಿಕೊಂಡ ಶ್ರೀಲಂಕಾ ಬೌಲರ್‌ಗಳು ಬರೀ ಆಫ್‌ಸ್ಟಂಪಿನಿಂದಾಚೆಗೆಯೇ ಯಾರ್ಕರ್ ಎಸೆತಗಳನ್ನು ಪ್ರಯೋಗಿಸುತ್ತ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದರು.
ಆದರೂ, ಲಂಕಾ ದಾಳಿಕಾರರ ಯಾವ ತಂತ್ರಗಾರಿಕೆಗೂ ಜಗ್ಗದ ಕೊಹ್ಲಿ, ನೈಜ ಆಟದಿಂದ ಅವರನ್ನು ಕಠೋರವಾಗಿಯೇ ಶಿಕ್ಷಿಸಿದರು. ಮೈದಾನದ ಪ್ರತಿ ಮೂಲೆಗೂ ರನ್ ಮಳೆ ಹರಿಸಿದರು. ಆದರೆ, ಯುವರಾಜ್ ಸಿಂಗ್ ಸ್ಫೋಟಿಸುವಲ್ಲಿ ವಿಫಲರಾಗಿ, ಪುಕ್ಕಟೆ ಎಸೆತಗಳನ್ನು ತಿಂದಿದ್ದು ಭಾರತಕ್ಕೆ ದುಬಾರಿ ಬೆಲೆ ತಂದುಕೊಟ್ಟಿತು. ಆಡಿದ 21 ಎಸೆತಗಳಲ್ಲಿ ಗಳಿಸಿದ್ದು ಕೇವಲ 11 ರನ್. ಇದರಲ್ಲಿ ಬೌಂಡರಿ ಅಥವಾ ಸಿಕ್ಸರ್ ಕೂಡ ಇರಲಿಲ್ಲ.
ಯುವಿ ಒಂದೆಡೆ ಚೆಂಡನ್ನು ವ್ಯರ್ಥಗೊಳಿಸುತ್ತಲೇ ಇದ್ದರೆ, ಕೊಹ್ಲಿ ಮೂಕಪ್ರೇಕ್ಷಕರಾಗಿ ನೋಡುತ್ತಲೇ ಇದ್ದರು. ಲಂಕಾ ಬೌಲರ್‌ಗಳ ಮೇಲೆ ಗುಡುಗುತ್ತಿದ್ದ ಕೊಹ್ಲಿಗೆ, ಕೊನೆಯಲ್ಲಿ ಹೆಚ್ಚು ಚೆಂಡುಗಳನ್ನು ಎದುರಿಸಲು ಅವಕಾಶವೇ ಸಿಗಲಿಲ್ಲ.
ಸೋಲಿಗೆ ನಿಜವಾದ ಕಾರಣ ಯುವರಾಜ್ ಎಂಬ ಟೀಕೆಗಳನ್ನು ಅಲ್ಲಗಳೆಯಲಾಗದು. ಹಾಗೆಂದು, ಆತನ ಕ್ರಿಕೆಟ್ ಭವಿಷ್ಯವನ್ನೇ ಪ್ರಶ್ನಿಸುವುದು ಅಸಂಬದ್ಧ ಎನಿಸುತ್ತದೆ. ಈ ಹಿಂದೆ ತಂಡ ನಿರಂತರ ವೈಫಲ್ಯ ಕಂಡಾಗ ಧೋನಿಯನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸುವ ಮಾತುಗಳು ಕೇಳಿಬಂದಿದ್ದವು. ಈಗ ಯುವರಾಜ್ ಭವಿಷ್ಯ ಡೋಲಾಯಮಾನ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿಯೊಬ್ಬ ಆಟಗಾರನ ಜೀವನದಲ್ಲೂ ಈ ರೀತಿಯ ಏಳು-ಬೀಳುಗಳು ಸಹಜ. ಒಬ್ಬ ಆಟಗಾರನ ಕೆಟ್ಟ ಪ್ರದರ್ಶನದಿಂದ ತಂಡ ಸೋತಾಗ ಆತನ ಭವಿಷ್ಯವೇ ಕಗ್ಗತ್ತಲಿಗೆ ಸರಿಯುತ್ತದೆ. ಈಗ ಯುವರಾಜ್ ಸ್ಥಿತಿಯೂ ಹಾಗೇ ಆಗಿದೆ.
2007ರ ಚೊಚ್ಚಲ ಟಿ-20 ವಿಶ್ವಕಪ್ ಹಾಗೂ 2011ರಲ್ಲಿ 50 ಓವರುಗಳ ವಿಶ್ವಕಪ್ ಟೂರ್ನಿಯನ್ನು ಭಾರತ ಗೆದ್ದುಕೊಳ್ಳುವಲ್ಲಿ ಯುವರಾಜ್ ಮುಖ್ಯ ಕಾರಣರಾಗಿದ್ದರು ಎಂಬುದು ನೆನಪಿರಲಿ. ಅದೆಷ್ಟೋ ಸಂದರ್ಭಗಳಲ್ಲಿ ಆತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿ, ಗೆಲವು ತಂದುಕೊಟ್ಟಿದ್ದುಂಟು. ಆದರೆ, ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ತೋರಿದ ಪ್ರದರ್ಶನ ಯುವಿ ಪಾಲಿಗೆ ಒಂದು ಬ್ಯಾಡ್ ಡೇ ಆಗಿತ್ತು. ಅದು ತಂಡಕ್ಕೂ ಕೂಡ ಬ್ಯಾಡ್ ಡೇ ಆಯಿತು ಎಂಬುದೇ ದುರದೃಷ್ಟಕರ
ಭಾರತ ಎರಡನೇ ಬಾರಿಗೆ ವಿಶ್ವಕಪ್‌ನಲ್ಲಿ (ಈ ಹಿಂದೆ 2003ರಲ್ಲಿನ 50 ಓವರುಗಳ ವಿಶ್ವಕಪ್) ಸೋತಿದೆ. ಆದರೆ, ಶ್ರೀಲಂಕಾ ಈ ಮುನ್ನ 4 ಬಾರಿ ವಿಶ್ವಕಪ್ ಫೈನಲ್‌ನಲ್ಲಿಯೇ ಮುಗ್ಗರಿಸಿತ್ತು (50 ಓವರುಗಳ ಮಾದರಿಯೂ ಸೇರಿ). ಆಗ ಅದರ ಮನಸ್ಥಿತಿ ಹೇಗಾಗಿರಬಾರದು. ಈಗ ಐದನೇ ಬಾರಿಯ ಫೈನಲ್‌ನಲ್ಲಿ ವಿಶ್ವಕಪ್ ಎತ್ತಿ ಹಿಡಿಯುವ ಮೂಲಕ 18 ವರ್ಷಗಳ ನಂತರ ಇಂತಹ ಮಹತ್ವದ ಪ್ರಶಸ್ತಿಯೊಂದು ಅದು ಗೆದ್ದುಕೊಂಡಿದೆ.
ಭಾರತ, ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್ ಹಾಗೂ ಟಿ-20 ವಿಶ್ವಕಪ್‌ಗಳನ್ನು ಗೆದ್ದುಕೊಳ್ಳಲಾಗದೇ ಹಿಂತಿರುಗಿದ್ದು ನೋವಿನ ಸಂಗತಿ ನಿಜ.
ಇತ್ತೀಚಿನ ಕೆಲವು ಟೂರ್ನಿಗಳಲ್ಲಿ ಭಾರತ ತೋರಿದ ಪ್ರದರ್ಶನ ಗಮನಿಸಿ 2015ರಲ್ಲಿ ನಡೆಯಲಿರುವ 50 ಓವರುಗಳ ವಿಶ್ವಕಪ್‌ಗೆ ಸದೃಢ ಪಡೆ ಸಿದ್ಧಗೊಳಿಸಲು ಈಗಿನಿಂದಲೇ ಕಾರ್ಯತಂತ್ರ ರೂಪಿಸುವುದು ಉಚಿತವೆನಿಸುತ್ತದೆ.
ಮುಖ್ಯವಾಗಿ ಭಾರತವನ್ನು ಕಾಡುತ್ತಿರುವುದು ಆರಂಭಿಕ ಜೊತೆಯಾಟದ ಸಮಸ್ಯೆ. ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಅಜಿಂಕ್ಯಾ ರಹಾನೆ ಆರಂಭಿಕರಾಗಿ ಯಶಸ್ಸು ಕಾಣುತ್ತಿಲ್ಲ. ಇವರ ಅಸ್ಥಿರ ಬ್ಯಾಟಿಂಗ್‌ನಿಂದಾಗಿ ಮಧ್ಯಮ ಕ್ರಮಾಂಕದ ಮೇಲೆ ಬೀಳುತ್ತಿರುವ ಹೊರೆಯನ್ನು ಕೊಹ್ಲಿ ಒಬ್ಬರೇ ನಿಭಾಯಿಸುತ್ತಿದ್ದಾರೆ.  ಹಾಗೆಯೇ, ವೇಗದ ದಾಳಿ ಕೂಡ ನಂಬುವಂತಹ ಪ್ರದರ್ಶನ ನೀಡುತ್ತಿಲ್ಲ. ವಿಶ್ವಕಪ್ ಬಿಟ್ಟರೆ, ಅದಕ್ಕೂ ಮುನ್ನ ನಡೆದ ಪಂದ್ಯಾವಳಿಗಳಲ್ಲಿ ಭಾರತಕ್ಕೆ ಬೌಲರ್‌ಗಳದ್ದೇ ದೊಡ್ಡ ತಲೆನೋವಾಗಿತ್ತು.   ಆದರೆ, ಸ್ಪಿನ್ ವಿಭಾಗ ಮಾತ್ರ ತಕ್ಕಮಟ್ಟಿಗೆ ಬಲಿಷ್ಠವಾಗಿದೆ. ತಮಗೆ ದೊರೆತ ಅವಕಾಶವನ್ನು ಅಮಿತ್ ಮಿಶ್ರಾ ಸಫಲಪಡಿಸಿಕೊಂಡಿದ್ದರೆ, ಅಶ್ವಿನ್ ಮತ್ತು ರವೀಂದ್ರ ಜಡೇಜಾ ಕೂಡ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.  
ಇನ್ನು ಕೆಲವು ದಿನಗಳ ನಂತರ 7ನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿ ಆರಂಭವಾಗಲಿದೆ. ಮತ್ತೊಂದು ಹೊಸ ಜ್ವರ ಭಾರತೀಯ ಅಭಿಮಾನಿಗಳಲ್ಲಿ ಮನೆಮಾಡಲಿದೆ. ಆದರೆ, ಈ ಬಾರಿಯ ಐಪಿಎಲ್ ಪಂದ್ಯಾವಳಿ ತನಗಂಟಿರುವ ಬೆಟ್ಟಿಂಗ್-ಪಿಕ್ಸಿಂಗ್ ಕೊಳೆ ತೊಳೆದುಕೊಂಡು ಸ್ವಚ್ಛಂದ ಟೂರ್ನಿಯಾಗಿ ಮೂಡಿಬರಲಿ ಎಂಬುದೇ ಎಲ್ಲರ ಆಶಯ.

 ಮೈಲಾರಲಿಂಗ ದಿಂಡಲಕೊಪ್ಪ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement