ಭಾರತ ಜೂನಿಯರ್ ಹಾಕಿ ತಂಡದ ಕೋಚ್ ಹರೇಂದ್ರ ಸಿಂಗ್
ನವದೆಹಲಿ: ರಾಷ್ಟ್ರೀಯ ಹಿರಿಯರ ತಂಡದ ಮಾಜಿ ಕೋಚ್ ಹರೇಂದ್ರ ಸಿಂಗ್ ಅವರನ್ನು ಭಾರತ ಜೂನಿಯರ್ ತಂಡದ ತರಬೇತುದಾರರನ್ನಾಗಿ ಹಾಕಿ ಇಂಡಿಯಾ ನೇಮಕ ಮಾಡಿದೆ.
ದೇಶದಲ್ಲೇ 2016ರಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿ ಚಾಂಪಿಯನ್ಶಿಪ್ಗಾಗಿ ಭಾರತ ಜೂನಿಯರ್ ತಂಡವನ್ನು ಅವರು ಪಳಗಿಸಬೇಕಾಗಿದೆ.
ಹರೇಂದ್ರ ಸಿಂಗ್ ಏಪ್ರಿಲ್ 25ರಂದು ತಂಡದ ತರಬೇತಿ ಶಿಬಿರವನ್ನು ಕೂಡಿಕೊಳ್ಳಲಿದ್ದಾರೆ. ಅವರ ಅನುಭವ ತಂಡದ ಆಟಗಾರರಿಗೆ ಉತ್ತಮ ರೀತಿಯಲ್ಲಿ ನೆರವಾಗುವ ವಿಶ್ವಾಸವಿದೆ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ನರೇಂದ್ರ ಬಾತ್ರಾ ತಿಳಿಸಿದ್ದಾರೆ.
ಒಬ್ಬ ಆಟಗಾರರಾಗಿ ಮತ್ತು ಕೋಚ್ ಆಗಿ ಹರೇಂದ್ರ ಸಿಂಗ್ ಉತ್ತಮ ಸಾಧನೆ ಮಾಡಿದ್ದಾರೆ. ಅವರೊಬ್ಬ ಬಹುಮೂಲ್ಯ ಪ್ರತಿಭೆಯಾಗಿದ್ದು, ಅವರ ಗರಡಿಯಲ್ಲಿ ಪಳಗಲಿರುವ ಭಾರತದ ಕಿರಿಯ ಆಟಗಾರರು ವಿಶ್ವಕಪ್ಗಾಗಿ ಉತ್ತಮ ರೀತಿಯಲ್ಲಿ ತಯಾರಿ ಪಡೆಯಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ಬಾತ್ರಾ ಪ್ರತಿಕ್ರಿಯಿಸಿದ್ದಾರೆ. ಈ ಮುನ್ನ ಅವರು ಹಿರಿಯರ ತಂಡದ ಕೋಚ್ ಆಗಿ ಹಲವಾರು ಪ್ರಮುಖ ಟೂರ್ನಿಗಳಿಗೆ ಆಟಗಾರರನ್ನು ಉತ್ತಮ ರೀತಿಯಲ್ಲಿ ಸಿದ್ಧಗೊಳಿಸಿದ್ದರು ಎಂದು ಹೇಳಿದ್ದಾರೆ.
ಹರೇಂದ್ರ ಸಿಂಗ್ ಪ್ರತಿಕ್ರಿಯಿಸಿ, ಹೊಸ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದಾಗಿ ಹೇಳಿದ್ದಾರೆ.
ಬಾಕ್ಸಿಂಗ್: ಶ್ಯಾಮ್ಗೆ ಖಚಿತವಾದ ಪದಕ
ನವದೆಹಲಿ: ಕೌಶಲ್ಯಯುತ ಪ್ರದರ್ಶನ ನೀಡಿದ ಭಾರತದ ಯುವ ಬಾಕ್ಸರ್ ಶ್ಯಾಮ್ ಕಕಾರಾ ಅವರು ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಪದಕ ಖಚಿತಪಡಿಸಿಕೊಂಡಿದ್ದು, ಈ ವರ್ಷ ನಡೆಯಲಿರುವ ಯೂತ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಶ್ಯಾಮ್ ಈ ಸಾಧನೆ ಮಾಡಿದರು.ಆಂಧ್ರಪ್ರದೇಶದ ಬಾಕ್ಸರ್ 49ಕೆಜಿ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವೇನೆಜ್ಯೂಯಲಾದ ಯೋಲ್ ಫಿನೋಲ್ ಅವರನ್ನು 2-1 ಅಂಕಗಳಿಂದ ಪರಾಭವಗೊಳಿಸಿದರು.
ಇದರೊಂದಿಗೆ ಚೀನಾದಲ್ಲಿ ಈ ವರ್ಷ ಆಗಸ್ಟ್ 16ರಿಂದ 28ರವರೆಗೆ ನಡೆಯಲಿರುವ ಯೂತ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅವರು ಅರ್ಹತೆ ಪಡೆದುಕೊಂಡರು. ಇದಕ್ಕೆ ಶ್ಯಾಮ್ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.
ಆರಂಭದಿಂದಲೇ ಆಕ್ರಮಣಕಾರಿ ದಾಳಿ ನಡೆಸಿದ ಭಾರತದ ಬಾಕ್ಸರ್ ಪಂದ್ಯದಲ್ಲಿ ಎದುರಾಳಿ ಮೇಲೆ ನಿಯಂತ್ರಣ ಸಾಧಿಸಿದರು. ಆದರೆ, ನಂತರ ಎದುರಾಳಿ ಸಮಬಲದ ಹೋರಾಟ ನೀಡಿದರು. ಅಂತಿಮವಾಗಿ ಮೇಲುಗೈ ಸಾಧಿಸುವಲ್ಲಿ ಭಾರತದ ಶ್ಯಾಮ್ ಯಶಸ್ವಿಯಾದರು.
ಚಿತ್ರಾ, ಉಮಾ ಹೋರಾಟ ಅಂತ್ಯ
ಲೀಡ್ಸ್ (ಯುಕೆ): ಭಾರತದ ಭರವಸೆಯ ಮಹಿಳಾ ಸ್ನೂಕರ್ ತಾರೆಗಳಾದ ಚಿತ್ರಾ ಮಗಿಮೈರಾಜ್ ಮತ್ತು ಉಮಾದೇವಿ ನಾಗರಾಜ್ ಅವರು ವಿಶ್ವ ಮಹಿಳಾ ಸ್ನೂಕರ್ ಚಾಂಪಿಯನ್ಶಿಪ್ನಿಂದ ಹೊರಗುಳಿದಿದ್ದಾರೆ.
ಕರ್ನಾಟಕದ ಚಿತ್ರಾ, ಲೀಗ್ ಹಂತವನ್ನು ದಾಟಲಾಗದೇ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಚಿತ್ರಾ ಈ ಹಿಂದೆ ಇದೇ ಪಂದ್ಯಾವಳಿಯಲ್ಲಿ 11 ಬಾರಿ ನಾಕೌಟ್ ಹಂತಕ್ಕೆ ಪ್ರವೇಶಿಸಿದ್ದರು. 41 ವರ್ಷದ ಚಿತ್ರಾ ಜೈಗು ಐಫನ್ ವಿರುದ್ಧ 0-2, ವೆಂಡಿ ಜಾನ್ಸ್ ವಿರುದ್ಧ 1-1, ಹಾಗೂ ಅನಿತಾ ಮಾಫ್ಲಿನ್ ವಿರುದ್ಧ 0-2 ಅಂತರದಲ್ಲಿ ಹಿನ್ನಡೆ ಅನುಭವಿಸಿ ನಿರಾಸೆ ಮೂಡಿಸಿದರು.
ಕರ್ನಾಟಕದವರೇ ಆದ ಉಮಾದೇವಿ ನಟಾಲಿಯಾ ಕಜ್ಲುಸ್ಕಟಾ ವಿರುದ್ಧ 2-0ಯಿಂದ ಗೆಲವು ದಾಖಲಿಸಿದರೂ ನಂತರ ಆನ್ ಯೀ ವಿರುದ್ಧ 0-2, ಅನ್ನಾ ಪ್ರಿಸಾಂಜುಕ್ ವಿರುದ್ಧ 0-2ರಿಂದ ಸೋಲನುಭವಿಸಿದರು.
ಶಿವಾಲಾಲ್ ಸಂಬಂಧಿ ಪಟೇಲ್?
ಮುಂಬೈ: ಐಪಿಎಲ್ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಲು ಬಿಸಿಸಿಐ ಸೂಚಿಸಿರುವ ರವಿ ಶಾಸ್ತ್ರೀ ಬಗ್ಗೆ ಭಾನುವಾರ ಅಪಸ್ವರ ಕೇಳಿಬಂದಿತ್ತು. ಈಗ ಸೋಮವಾರ ಸಮಿತಿಯಲ್ಲಿರುವ ನಿವೃತ್ತ ನ್ಯಾ. ಜೆ.ಎನ್ ಪಟೇಲ್ ಬಗ್ಗೆಯೂ ಅಪಸ್ವರ ಕೇಳಿಬಂದಿದೆ.ಐಪಿಎಲ್ ಫಿಕ್ಸಿಂಗ್ ಪ್ರಕರಣದ ತನಿಖೆಗಾಗಿ ಬಿಸಿಸಿಐ ಸೂಚಿಸಿರುವ ನಿವೃತ್ತ ನ್ಯಾಯಮೂರ್ತಿ ಜೆ.ಎನ್ ಪಟೇಲ್ ಅವರು ಮಂಡಳಿಯ ಹಂಗಾಮಿ ಅಧ್ಯಕ್ಷ ಶಿವಾಲಾಲ್ ಯಾದವ್ ಅವರ ಸಂಬಂಧಿಯಾಗಿದ್ದರೆ, ಅದನ್ನು ಬಹಿರಂಗಪಡಿಸಬೇಕು ಎಂದು ಬಿಸಿಸಿಐನ ಮಾಜಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದರು.
ಇನ್ನು ಭಾರತ ತಂಡದ ಮಾಜಿ ನಾಯಕ ರವಿ ಶಾಸ್ತ್ರೀ ಅವರನ್ನು ಸಮಿತಿಗೆ ನೇಮಕ ಮಾಡಿರುವ ಕುರಿತು ಸಹ ಶರದ್ ಪವಾರ್ ಅಪಸ್ವರ ಎತ್ತಿದ್ದಾರೆ.
'ಒಂದು ವೇಳೆ ನ್ಯಾಯಮೂರ್ತಿ ಪಟೇಲ್ ಅವರು ಬಿಸಿಸಿಐನ ಹಂಗಾಮಿ ಅಧ್ಯಕ್ಷ ಶಿವಾಲಾಲ್ ಯಾದವ್ ಸಂಬಂಧಿಯಾಗಿದ್ದರೆ, ಅದನ್ನು ಅವರು ಬಹಿರಂಗಪಡಿಸಬೇಕು. ಒಂದು ವೇಳೆ ಅದು ಸುಳ್ಳಾಗಿದ್ದರೆ, ಬಿಸಿಸಿಐ ಇಂತಹ ವಿಷಯಗಳ ಕುರಿತು ಚರ್ಚೆ ನಡೆಸಲು ಅವಕಾಶ ನೀಡಬಾರದು' ಎಂದು ಪವಾರ್ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೋಲ್ಕತಾ ಹೈಕೋರ್ಟ್ನ ನಿವೃತ್ತ ಮಖ್ಯ ನ್ಯಾಯಮೂರ್ತಿ ಪಟೇಲ್, ಶಾಸ್ತ್ರೀ ಹಾಗೂ ಸಿಬಿಐ ಮಾಜಿ ನಿರ್ದೇಶಕ ಆರ್.ಕೆ ರಾಘವನ್ ಅವರನ್ನು ತನಿಖಾ ತಂಡದ ಸದಸ್ಯರನ್ನಾಗಿ ಬಿಸಿಸಿಐ ಭಾನುವಾರ ತನ್ನ ತುರ್ತು ಸಭೆಯಲ್ಲಿ ಸೂಚಿಸಿತ್ತು. ಅಲ್ಲದೆ, ಸಮಿತಿಗೆ ಅನುಮತಿ ಕೇಳಿ ಸುಪ್ರೀಂ ಕೋರ್ಟ್ಗೆ ಅವರ ಹೆಸರನ್ನೂ ಕಳುಹಿಸಲಾಗಿದೆ.
ಜಯಕ್ಕೆ ಮರಳುತ್ತೇವೆ
ಶಾರ್ಜಾ: ಉತ್ತಮ ಪ್ರದರ್ಶನದ ಹೊರತಾಗಿಯೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋಲನುಭವಿಸಿದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಸಂಜುಸ್ಯಾಮ್ಸನ್, ಈ ಸೋಲಿನಿಂದ ನಿರಾಸೆಯಾಗಿದ್ದು ಮತ್ತೆ ಗೆಲವಿನ ಲಯಕ್ಕೆ ಮರಳುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.ಪಂಜಾಬ್ ತಂಡದ ವಿರುದ್ಧ ಸ್ಯಾಮ್ಸನ್ (52) ಆಕರ್ಷಕ ಅರ್ಧಶತಕ ದಾಖಲಿಸಿ ತಂಡ 191 ರನ್ ದಾಖಲಿಸಿತ್ತಾದರೂ, ಗ್ಲೆನ್ ಮ್ಯಾಕ್ಸ್ವೆಲ್ (89) ಹಾಗೂ ಡೇವಿಡ್ ಮಿಲ್ಲರ್ (ಅಜೇಯ 51) ಅಬ್ಬರದ ಬ್ಯಾಟಿಂಗ್ನಿಂದ ಸೋಲನುಭವಿಸಿತ್ತು.
ಪಿಚ್ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ನೆರವಾಗುತ್ತಿತ್ತು. ಹಾಗಾಗಿ ಒಂದು ತಂಡ 190ಕ್ಕೂ ಹೆಚ್ಚಿನ ಗುರಿ ನೀಡಿದರೂ ಪಂದ್ಯ ಜೀವಂತವಾಗಿರಲಿದೆ. ಈ ಪಂದ್ಯದಲ್ಲಿ ಎದುರಾಳಿ ತಂಡದ ಎಲ್ಲಾ ಪ್ರಯತ್ನಗಳು ಯಶಸ್ವಿಯಾದವು, ಅಲ್ಲದೆ ಎದುರಾಳಿ ತಂಡದ ಪ್ರದರ್ಶನಕ್ಕೆ ಗೆಲವಿನ ಶ್ರೇಯ ಸಲ್ಲಬೇಕು ಎಂದು ತಿಳಿಸಿದರು.
ಎಂದಿಗೂ ರಾಜಸ್ಥಾನ ರಾಯಲ್ಸ್ ಪರ ಆಡಲು ಇಚ್ಛಿಸುತ್ತೇನೆ. ನಾನು ತಂಡಕ್ಕೆ ಸಮರ್ಥ ರೀತಿಯಲ್ಲಿ ಕಾಣಿಕೆ ನೀಡಿ ತಂಡ ಉತ್ತಮ ಮೊತ್ತ ದಾಖಲಿಸುತ್ತಿರುವುದು ಸಂತಸ ತಂದಿದೆ. ಆದರೆ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಸೋಲನುಭವಿಸಿರುವುದು ನೋವು ತಂದಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ರಾಜಸ್ಥಾನ ಪರ ಹೆಚ್ಚಿನ ಪಂದ್ಯಗಳಲ್ಲಿ ಆಡಲು ಎದುರುನೋಡುತ್ತಿದ್ದೇನೆ. ಹಾಗಾಗಿ ಯೋಜನೆಗೆ ತಕ್ಕಂತೆ ಆಡಲು ಪ್ರಯತ್ನಿಸುತ್ತೇನೆ. ಇದುವರೆಗೂ ಈ ಪ್ರಯತ್ನದಲ್ಲಿ ಯಶ ಕಂಡಿದ್ದು, ಅದನ್ನೇ ಮುಂದುವರಿಸುತ್ತೇನೆ ಎಂದು ತಿಳಿಸಿದರು.