ಫಿಕ್ಸಿಂಗ್ ತನಿಖೆಗೆ ಮದ್ಗಲ್ ಸಮಿತಿ ಕೇಳಿದ ಸುಪ್ರೀಂ
ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಕುರಿತು ತನಿಖೆ ನಡೆಸಲು ಬಿಸಿಸಿಐ ಸೂಚಿಸಿದ್ದ ಮೂವರು ಸದಸ್ಯರ ಸಮಿತಿ ಬಗ್ಗೆ ಅಪಸ್ವರ ಕೇಳಿಬರುತ್ತಿದ್ದಂತೆಯೇ, ಪ್ರಕರಣದಲ್ಲಿರುವ ಎನ್. ಶ್ರೀನಿವಾಸನ್ ಮತ್ತು ಇತರ 12 ಜನರ ವಿರುದ್ಧ ತನಿಖೆ ನಡೆಸಲು ಸಿದ್ಧವೇ? ಎಂದು ಮುಕುಲ್ ಮುದ್ಗಲ್ ಸಮಿತಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೇಳಿದೆ.
ಮುಕುಲ್ ಮುದ್ಗಲ್ ಸಮಿತಿ ವಿಚಾರಣೆ ನಡೆಸಲು ಒಪ್ಪಿಕೊಂಡರೆ, ಅದಕ್ಕೆ ತನಿಖಾ ಸಂಸ್ಥೆಗಳಿಂದ ನೆರವು ನೀಡಲಾಗುವುದು ಎಂದು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ ಪಟ್ನಾಯಕ್ ನೇತೃತ್ವದ ನ್ಯಾಯಪೀಠ ತಿಳಿಸಿತು.
ಮುಕುಲ್ ಮುದ್ಗಲ್ ಈ ಮುನ್ನ ನಡೆಸಿದ ತನಿಖೆಯಲ್ಲಿ 13 ಜನ ಆರೋಪಿಗಳ ಹೆಸರುಗಳು ಕೇಳಿಬಂದಿವೆ. ಆದರೆ, ಆ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ.
ವಿಚಾರಣೆಯ ಸಂದರ್ಭ, ತಾನು ಪ್ರಕರಣದ ಕುರಿತು ತನಿಖೆ ನಡೆಸಲು ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲು ತೀರ್ಮಾನಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತು. ಮುದ್ಗಲ್ ಸಮಿತಿಯಿಂದ ಪ್ರತಿಕ್ರಿಯೆ ಬಂದ ನಂತರ ಎಲ್ಲರ ಸಮ್ಮತಿಯನ್ನು ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಬಿಸಿಸಿಐ ತಿಳಿಸಿದೆ.
ಭಾರತ ತಂಡದ ಮಾಜಿ ಆಲ್ರೌಂಡ್ ಆಟಗಾರ ರವಿ ಶಾಸ್ತ್ರೀ, ಕೋಲ್ಕತಾ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎನ್ ಪಟೇಲ್ ಹಾಗೂ ಸಿಬಿಐ ಮಾಜಿ ನಿರ್ದೇಶಕ ಆರ್.ಕೆ ರಾಘವನ್ ಅವರನ್ನು ತನಿಖಾ ಸಮಿತಿಯ ಸದಸ್ಯರನ್ನಾಗಿ, ಬಿಸಿಸಿಐ ಏಪ್ರಿಲ್ 20ರಂದು ನಡೆದ ತನ್ನ ತುರ್ತು ಸಭೆಯಲ್ಲಿ ತೀರ್ಮಾನಿಸಿತ್ತು.
ನ್ಯಾಯಮೂರ್ತಿ ಮುದ್ಗಲ್ ಸಮಿತಿ ಶ್ರೀನಿವಾಸನ್, ಎಂ.ಎಸ್ ಧೋನಿ ಹಾಗೂ ಐಪಿಎಲ್ 7ನೇ ಆವೃತ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ರಾಮನ್ ಅವರೊಂದಿಗೆ ನಡೆಸಿದ ಸಂವಾದದ ಕೆಲ ಭಾಗವನ್ನು ಕೇಳಲು ಶ್ರೀನಿವಾಸನ್ ಮತ್ತು ಬಿಸಿಸಿಐಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಸುಪ್ರೀಂ ಕೋರ್ಟ್ನಲ್ಲಿ ತನಿಖಾ ಸಮಿತಿ ಟೇಪ್ಗಳನ್ನು ಕೇಳಲು ಬಿಸಿಸಿಐ ಮತ್ತು ಶ್ರೀನಿವಾಸನ್ ವಕೀಲರಿಗೆ ವ್ಯವಸ್ಥೆ ಮಾಡಲಿರುವ ಸುಪ್ರೀಂ ಕೋರ್ಟ್ನ ಪ್ರಧಾನ ಕಾರ್ಯದರ್ಶಿಗೆ, ಧ್ವನಿ ಮುದ್ರಿತ ದಾಖಲೆಗಳನ್ನು ಒದಗಿಸುವಂತೆ ತನಿಖಾ ಸಮಿತಿಗೆ ಕೋರ್ಟ್ ತಿಳಿಸಿದೆ.
ಆದರೆ, ತಾವು ತಿಳಿದುಕೊಂಡ ಮಾಹಿತಿಯ ವಿಷಯ ಮತ್ತು ಆಡಿಯೋ ಟೇಪ್ಗಳನ್ನು ಯಾರಿಗೂ ಸೋರಿಕೆ ಮಾಡದಂತೆ, ಸಂಪೂರ್ಣವಾಗಿ ರಹಸ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದೆ.'ಧ್ವನಿಮುದ್ರಣದ ಯಾವುದೇ ರೀತಿಯ ವಿಷಯ ಸೋರಿಕೆಯಾದರೆ, ದೇಶದಲ್ಲಿ ಕ್ರಿಕೆಟ್ ಕಣ್ಣುಮುಚ್ಚಿಕೊಳ್ಳಲಿದೆ' ಎಂದು ನ್ಯಾಯಪೀಠ ತಿಳಿಸಿದೆ.ಶ್ರೀನಿವಾಸನ್ ಪರ ವಕೀಲರಾದ ಅಮಿತ್ ಸಿಬಲ್ ಮತ್ತು ಬಿಸಿಸಿಐ ಪರ ವಕೀಲರಾದ ರೋಹಿಣಿ ಮುಸಾ ಅವರು, ಸುಪ್ರೀಂ ಕೋರ್ಟ್ನ ಪ್ರಧಾನ ಕಾರ್ಯದರ್ಶಿ ಅವರ ಉಪಸ್ಥಿತಿಯಲ್ಲೇ ಧ್ವನಿಮುದ್ರಣಗಳನ್ನು ಕೇಳಿಸಿಕೊಳ್ಳಲಿದ್ದಾರೆ.ಏಪ್ರಿಲ್ 16ರಂದು ಐಪಿಎಲ್ ಪ್ರಕರಣದಲ್ಲಿ ಎಸ್ಐಟಿ ಅಥವಾ ಸಿಬಿಐ ತನಿಖೆ ನಡೆಸುವುದನ್ನು ಸರ್ವೋಚ್ಚ ನ್ಯಾಯಾಲಯ ಕಾಯ್ದಿರಿಸಿತ್ತು. ಅಲ್ಲದೆ, ಸ್ವಯತ್ತ ಸಂಸ್ಥೆಯಾಗಿರುವ ಬಿಸಿಸಿಐ ಪ್ರಕರಣದ ಕುರಿತು ತನಿಖೆ ನಡೆಸಲು ತಾನೇ ಸಮಿತಿಯನ್ನು ರಚಿಸಬೇಕು ಎಂದು ಹೇಳಿತ್ತು. ಹಗರಣದ ಕುರಿತು ಮುಕುಲ್ ಮುದ್ಗಲ್ ಸಮಿತಿ ಮಾಡಿರುವ ಆರೋಪಗಳ ಕುರಿತು ನ್ಯಾಯಾಲಯ ಕಣ್ಣುಮುಚ್ಚಿಕೊಳ್ಳುವುದಿಲ್ಲ. ಪ್ರಕರಣದಲ್ಲಿ ಮಹತ್ವದ ಆಟಗಾರರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಬೇಕು ಎಂದು ನ್ಯಾಯಾಲಯ ತಿಳಿಸಿತ್ತು.