ಕಂಚಿನ ಪದಕಕ್ಕೆ ಶ್ಯಾಮ್ ತೃಪ್ತಿ
ನವದೆಹಲಿ: ಭಾರತದ ಶ್ಯಾಮ್ ಕಕಾರ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಪಡೆಯಲಷ್ಟೇ ಶಕ್ತರಾಗಿದ್ದಾರೆ. ಇದರೊಂದಿಗೆ ಭಾರತ ಈ ಪಂದ್ಯಾವಳಿಯಲ್ಲಿ 1 ಕಂಚಿನ ಪದಕ ಪಡೆಯಲು ಮಾತ್ರ ಶಕ್ತವಾಗಿದೆ. ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ ಶ್ಯಾಮ್ ಕಕಾರ ಅವರು 49 ಕೆ.ಜಿ. ವಿಭಾಗದ ಸೆಮಿಫೈನಲ್ ಸೆಣಸಿನಲ್ಲಿಯೇ ಸೋಲನುಭವಿಸಿ ಕನಿಷ್ಠ ಪದಕಕ್ಕೆ ತೃಪ್ತಿ ಹೊಂದಿದರು. ಬುಧವಾರ ನಡೆದ ನಾಲ್ಕರಘಟ್ಟದ ಪೈಪೋಟಿಯಲ್ಲಿ ಕಜಕಿಸ್ತಾನದ ಶಲ್ಕರ್ ಐಖೈನ್ಬೇ 2-1 ಅಂಕಗಳ ಅಂತರದಲ್ಲಿ ಭಾರತೀಯ ಆಟಗಾರನನ್ನು ಮಣಿಸಿದರು. ಈಗಾಗಲೇ ಯೂತ್ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿರುವ ಶ್ಯಾಮ್ ಕಕಾರ, ಮೊದಲ ಸುತ್ತಿನ ಮುಖಾಬಲದಲ್ಲಿ ಸೋತು ಉತ್ತಮ ಆರಂಭ ಪಡೆಯಲು ವಿಫಲರಾದರು. ಆದರೆ, ಎರಡನೇ ಸುತ್ತನ್ನು ಗೆದ್ದುಕೊಂಡು ಎದುರಾಳಿಗೆ ತಿರುಗಿಬಿದ್ದರು. ಮೂರನೇ ಸುತ್ತಿನಲ್ಲಿ ಮತ್ತೆ ವೈಫಲ್ಯ ಅನುಭವಿಸಿದ ಪರಿಣಾಮ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.