ರೈಡರ್ಸ್ ರೈಡ್‌ಗೆ ಆರ್‌ಸಿಬಿ ಹೊಂಚು
ಶಾರ್ಜಾ: ಮೊದಲೆರಡೂ ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಪ್ರಸಕ್ತ ಸಾಲಿನ ಏಳನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್‌ನಲ್ಲಿ ಭರ್ಜರಿ ಆರಂಭ ಕಂಡುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸತತ ಮೂರನೇ ಜಯದ ಕನಸು ಕಟ್ಟಿಕೊಂಡಿದೆ.
ಶಾರ್ಜಾದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಮೊದಲ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ನಂತರದ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಗೆಲವು ದಾಖಲಿಸಿರುವ ಬೆಂಗಳೂರು, ಕೆಕೆಆರ್ ವಿರುದ್ಧವೂ ಸೋಲರಿಯದ ತಂಡವಾಗಿ ಮುನ್ನಡೆಯುವ ಅತ್ಯುತ್ಸಾಹದಲ್ಲಿ ಪುಟಿಯುತ್ತಿದೆ.
ಗೌತಮ್ ಗಂಭೀರ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋತು ಆಘಾತದಲ್ಲಿದೆ.
ಬೆಂಗಳೂರು ತಂಡದಲ್ಲಿ ಎದುರಾಳಿ ಪಡೆಗೆ ಭಯ ಹುಟ್ಟಿಸುವಂತಹ ದಾಂಡಿಗರಿದ್ದಾರೆ. ಇವರ ನೆರವಿಂದಲೇ ಆರ್‌ಸಿಬಿ ಮೊದಲೆರಡೂ ಪಂದ್ಯಗಳಲ್ಲಿ ನಿಚ್ಚಳ ಗೆಲವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ತಂಡದ ಪ್ರಮುಖ ಬ್ಯಾಟಿಂಗ್ ಶಕಿ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಯ್ಲ್ ಈವರೆಗೂ ಅಖಾಡಕ್ಕೆ ಧುಮುಕಿಲ್ಲ. ಬೆನ್ನು ನೋವಿನಿಂದಾಗಿ ಆರಂಭದ ಎರಡೂ ಪಂದ್ಯಗಳಿಂದ ಹೊರಗುಳಿದ್ದ ಗೇಯ್ಲ್, ಇದೀಗ ಚೇತರಿಸಿಕೊಂಡಿದ್ದು,ನಾಳಿನ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆಯಿದೆ.
ಗೇಯ್ಲ್ ಅನುಪಸ್ಥಿತಿಯಲ್ಲಿ ಯುವರಾಜ್ ಸಿಂಗ್, ಪಾರ್ಥಿವ್ ಪಟೇಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ, ನಾಯಕ ವಿರಾಟ್ ಕೊಹ್ಲಿ ಇನ್ನಷ್ಟೇ ಸಿಡಿಯಬೇಕಾಗಿದೆ. ಕೋಲ್ಕತಾ ಸಹ ಆರ್‌ಸಿಬಿ ದಾಳಿಗೆ ಸಡ್ಡು ಹೊಡೆದು ನಿಲ್ಲುವಂತಹ ಪ್ರತಿಭಾಶಾಲಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಕರ್ನಾಟಕ ಮೂಲಕ ಆಟಗಾರರಾದ ಮನೀಷ್ ಪಾಂಡೆ ಮತ್ತು ರಾಬಿನ್ ಉತ್ತಪ್ಪ ಲಯ ತೋರುವ ಮೂಲಕ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ.
ನಾಯಕ ಗೌತಮ್ ಗಂಭೀರ್, ಅನುಭವಿ ಆಲ್‌ರೌಂಡರ್, ದಕ್ಷಿಣ ಆಫ್ರಿಕಾ ದಂತಕತೆ ಜಾಕ್ ಕಾಲಿಸ್, ಆಲ್‌ರೌಂಡರ್ ಯೂಸುಫ್ ಪಠಾಣ್, ಶಕೀಬ್ ಅಲ್ ಹಸನ್‌ರಂತಹ ಬಲಾಢ್ಯ ಬ್ಯಾಟ್ಸ್‌ಮನ್‌ಗಳು ಕೋಲ್ಕತಾ ತಂಡದಲ್ಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬೌಲಿಂಗ್ ವಿಭಾಗ ಕೂಡ ಗುಣಮಟ್ಟದಿಂದ ಕೂಡಿದೆ. ಮಿಚೆಲ್ ಸ್ಟಾರ್ಕ್, ಅಲ್ಬಿ ಮಾರ್ಕೆಲ್, ವರುಣ್ ಏರಾನ್ ಅದ್ಭುತ ದಾಳಿ ಸಂಘಟಿಸುತ್ತಿದ್ದಾರೆ. ಈ ಮೂವರು ಬೌಲ್‌ಗಳು ಕೆಕೆಆರ್ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಸವಾಲಾಗಿದ್ದಾರೆ.