ಸಾಧನೆಯ ಮೆಲುಕು ಹಾಕಿದ ಸಾಧಕರು
ಭಾರತದ ಕಾಲ್ಚೆಂಡಿನ ಅತ್ಯಂತ ಶ್ರೇಷ್ಠ ಕಾಳಗವಾದ ಐ ಲೀಗ್ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ, ಮೊದಲ ಬಾರಿಗೆ ಕಣಕ್ಕಿಳಿದ ಬೆಂಗಳೂರು ಎಫ್ಸಿ ತಂಡ ಚಾಂಪಿಯನ್ ಆಗಿ ಮೆರೆಯುವ ಮೂಲಕ ಭಾರತ ಫುಟ್ಬಾಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.
ಇದೇ ಮೊದಲ ಬಾರಿಗೆ ಪಂದ್ಯಾವಳಿಗೆ ಕಾಲಿಟ್ಟರೂ, ಬೆಂಗಳೂರು ಎಫ್ಸಿ ತಂಡ, ತನ್ನ ಪರಿಶ್ರಮ, ಛಲ, ಹೋರಾಟದಿಂದ ತಮ್ಮ ಗುರಿಯನ್ನು ಮುಟ್ಟಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಬೆಂಗಳೂರು ಮೂಲದ ಕ್ಲಬ್ವೊಂದು ಐ ಲೀಗ್ ಸಾಮ್ರಾಜ್ಯದಲ್ಲಿ ಅಧಿಪತಿಯಾಗಿ ಮೆರೆದಿದ್ದು, ಕೇವಲ ಬೆಂಗಳೂರು ಮಾತ್ರವಲ್ಲದೇ ಈಡೀ ರಾಜ್ಯದ ಫುಟ್ಬಾಲ್ ಅಭಿಮಾನಿಗಳಿಗೆ ಕ್ರೀಡೆಯ ಮೇಲೆ ಮತ್ತಷ್ಟು ಆಸಕ್ತಿ ಕೆರಳಿಸುವಂತೆ ಮಾಡಿದೆ.
ಯುವ ಹಾಗೂ ಪ್ರತಿಭಾನ್ವಿತ ಆಟಗಾರರ ಪಡೆ ಆ್ಯಶ್ಲೆ ವೆಸ್ಟ್ವುಡ್ ಗರಡಿಯಲ್ಲಿ ಪಳಗುವ ಮೂಲಕ, ತಂಡ ಪಕ್ವತೆ ಪಡೆಯುತ್ತಾ ಸಾಗಿತು. ಪಂದ್ಯಾವಳಿಯ ಆರಂಭಿಕ ಹಂತದಿಂದಲೂ ಪ್ರಾಬಲ್ಯಯುತ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡಿದ್ದ ಬಿಎಫ್ಸಿ ಪಂದ್ಯಾವಳಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡಿದೆ.
ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಬಿಎಫ್ಸಿ ತಂಡ, ಪಂದ್ಯಾವಳಿಯಲ್ಲಿನ ಪಯಣವನ್ನು ಮೆಲಕು ಹಾಕಿಕೊಂಡಿತು. ಈ ವೇಳೆ ಮಾತನಾಡಿದ ಬಿಎಫ್ಸಿ ಸಿಇಒ ಪರ್ತ್ ಜಿಂದಾಲ್ ಎಎಫ್ಸಿ ಚಾಂಪಿಯನ್ಸ್ ಲೀಗ್ಗೆ ಅರ್ಹತೆ ಪಡೆಯುವುದು ನಮ್ಮ ಮುಂದಿನ ಗುರಿ ಎಂದು ತಿಳಿಸಿದರು. ತಂಡದ ಯಶಸ್ಸಿನ ಪ್ರಮುಖ ಆಧಾರ ಸ್ತಂಭಗಳಾಗ ಮುಖ್ಯ ಕೋಚ್ ಆ್ಯಶ್ಲೆ ವೆಸ್ಟ್ವುಡ್, ಸಹಾಯಕ ಕೋಚ್ ಹಾಗೂ ಕನ್ನಡಿಗ ಪ್ರದ್ಯುಮ್ನ ರೆಡ್ಡಿ ಹಾಗೂ ತಂಡದ ನಾಯಕ ಸುನಿಲ್ ಛೆಟ್ರಿ ತಮ್ಮ ಅಭಿಪ್ರಾಯವನ್ನು ಕನ್ನಡ ಪ್ರಭದೊಂದಿಗೆ ಹಂಚಿಕೊಂಡಿದ್ದಾರೆ.
ಸುನಿಲ್ ಛೆಟ್ರಿ ಪ್ರಶಸ್ತಿ ಗೆದ್ದ ಹಿರಿಮೆ
- ಪ್ರಶಸ್ತಿ ಗೆದ್ದ ಅನುಭವ
ಇದು ತಂಡದ ಮೊದಲ ವರ್ಷವಾಗಿದ್ದು, ಕಳೆದ ಒಂದು ವರ್ಷದ ಪಯಣ ಅತ್ಯದ್ಭುತವಾಗಿತ್ತು.ನಾವು ತಂಡವಾಗಿ ಆಡಿದೆವು. ಅಲ್ಲದೆ ತಂಡದ ಪ್ರದರ್ಶನ ತೃಪ್ತಿ ತಂದಿದೆ. ಈ ತಂಡದ ಭಾಗವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
- ನಿಮ್ಮ ಪ್ರದರ್ಶನದ ಬಗ್ಗೆ
ಈ ಬಾರಿ ನನ್ನ ಪ್ರದರ್ಶನ ಸಂತಸ ನೀಡಿದೆ. ತಂಡಕ್ಕೆ ಉತ್ತಮ ಕಾಣಿಕೆ ನೀಡಿರುವ ತೃಪ್ತಿ ಇದೆ. ನನ್ನ ಪ್ರದರ್ಶನದಲ್ಲಿ ಉತ್ತಮ ಬೆಳವಣಿಗೆ ಕಂಡುಕೊಂಡಿದ್ದೇನೆ. ಈ ಹಿಂದೆ ನಾನು ಕೇವಲ ಸ್ಟ್ರೈಕರ್ ಆಗಿ ಕಣಕ್ಕಿಳಿಯುತ್ತಿದ್ದೆ. ಈಗ ಡಿಫೆಂನ್ಸಿವ್ ವಿಭಾಗದಲ್ಲಿ ಆಡುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದೇನೆ.
- ತಂಡ ಸೇರ್ಪಡೆಯಾದಗ ಇದ್ದ ಸವಾಲು
ತಂಡವನ್ನು ಸೇರಿಕೊಡಾಗ ನಾವು ಚಾಂಪಿಯನ್ ಆಗತ್ತೇವೆ ಎಂದು ಭಾವಿಸಿರಲಿಲ್ಲ. ನಾವು ಹೊಸ ತಂಡವಾಗಿದ್ದು, ನಮ್ಮಿಂದಾದಷ್ಟು ಉತ್ತಮ ಪ್ರದರ್ಶನ ನೀಡುವ ಉದ್ದೇಶ ಹೊಂದಿದ್ದೆವು. ಅಲ್ಲದೆ ಈ ಬಾರಿ ಅಂಕಪಟ್ಟಿಯಲ್ಲಿ ಮಧ್ಯಭಾಗದಲ್ಲಿ ಸ್ಥಾನ ಪಡೆಯುವ ಬಗ್ಗೆ ಪ್ರಯತ್ನ ನಡೆಸಿದೆವು.
- ಈ ಗೆಲವಿನಿಂದ ಸಿಕ್ಕ ಸ್ಫೂರ್ತಿ
ಈ ಗೆಲವಿನಿಂದ ನನಗೆ ಮಾತ್ರವಲ್ಲ ಎಲ್ಲಾ ಆಟಗಾರರಿಗೂ ಅತ್ಯುತ್ತಮ ಸ್ಫೂರ್ತಿ ಲಭಿಸಿದೆ. ಈಗಾಲೇ ಪ್ರಶಸ್ತಿಯನ್ನು ಗೆದ್ದಿದ್ದು, ಮುಂದಿನ ವರ್ಷ ಎಎಫ್ಸಿ ಪಂದ್ಯಾವಳಿ ಆಡಲಿದ್ದೇವೆ. ಮುಂದಿನ ವರ್ಷದ ಐ ಲೀಗ್ನಲ್ಲೂ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದೇವೆ.
- ಕೋಚ್ ಆ್ಯಶ್ಲೆ ವೆಸ್ಟ್ವುಡ್ ಬಗ್ಗೆ
ಆ್ಯಶ್ಲೆ ವೆಸ್ಟ್ವುಡ್ ಅತ್ಯುತ್ತಮ ಕೋಚ್ ಆಗಿದ್ದಾರೆ. ನಾನು ಇದುವರೆಗೂ ಆಡಿರುವ ಕೋಚ್ಗಳಲ್ಲಿ ಇವರು ಅತ್ಯುತ್ತಮ. ಅವರ ತಾಂತ್ರಿಕ ಕೌಶಲ್ಯ ಪ್ರತಿಯೊಬ್ಬ ಆಟಗಾರನಿಗೆ ಹೆಚ್ಚು ಲಾಭದಾಯಕವಾಗಿದೆ.
ಆ್ಯಶ್ಲೆಗೆ ಹಸಿವು ಇಂಗಿಸಿದ ತೃಪ್ತಿ
-ತಂಡದ ಜವಾಬ್ದಾರಿ ಹೊತ್ತಾಗ ಇದ್ದ ಮನಃಸ್ಥಿತಿ
ತಂಡವನ್ನು ಸೇರಿಕೊಂಡಾಗ ಯಶಸ್ಸು ಸಾಧಿಸುವ ಹಸಿವಿತ್ತು, ಅಲ್ಲದೆ ಈ ಅವಕಾಶವನ್ನು ಬಳಸಿಕೊಳ್ಳಲು ಗಮನಹರಿಸಿದೆ. ಎಲ್ಲಾ ಯೋಜನೆಗಳು ಯಶಸ್ವಿಯಾದವು. ಒಟ್ಟಾರೆಯಾಗಿ ಈ ಪಯಣ ಅತ್ಯದ್ಭುತವಾಗಿತ್ತು.
- ತಂಡದ ಯಶಸ್ಸಿಗೆ ಪ್ರಮುಖ ಕಾರಣ
ತಂಡದಲ್ಲಿನ ಸ್ಫೂರ್ತಿ, ಈ ಯಶಸ್ಸಿಗೆ ಪ್ರಮುಖ ಕಾರಣ. ನಾವು ಕಠಿಣ ಪರಿಶ್ರಮ ಹಾಕಿ ಅಭ್ಯಾಸ ನಡೆಸಿದೆವು. ಒಬ್ಬರ ನೆರವಿಗೆ ಮತ್ತೊಬ್ಬರು ಸಹಕರಿಸುವ ಮೂಲಕ ತಂಡದಲ್ಲಿ ಉತ್ತಮ ಬಾಂಧವ್ಯ ಮೂಡಿತು. ಇದು ತಂಡದ ಯಶಸ್ಸಿಗೆ ಪ್ರಮುಖ ಅಂಶವಾಗಿದೆ ಎಂದರೆ ತಪ್ಪಿಲ್ಲ.
- ಸ್ಥಳೀಯ ಆಟಗಾರರ ಗುಣಮಟ್ಟ
ಸ್ಥಳೀಯ ಆಟಗಾರರಲ್ಲಿ ಪ್ರತಿಭೆ ಇದೆ. ಅಲ್ಲದೆ ಅವರಲ್ಲಿ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವ ಹಂಬಲವಿದೆ. ಅಲ್ಲದೆ ಹೊಸ ಅಂಶಗಳನ್ನು ಕಲೆಯಲು ಆಸಕ್ತಿ ತೋರುತ್ತಿದ್ದರಲ್ಲದೇ ಅದನ್ನು ಬೇಗನೆ ಕರಗತ ಮಾಡಿಕೊಳ್ಳುತ್ತಿದ್ದರು. ಇದು ಆ ಆಟಗಾರನ ಮೇಲೆ ಭರವಸೆ ಮೂಡುವಂತೆ ಮಾಡುತ್ತದೆ.
-ಐಎಸ್ಎಲ್ ಬಗೆಗಿನ ಅಭಿಪ್ರಾಯ
ನಾನು ಭಾರತಕ್ಕೆ ಆಗಮಿಸಿದಾಗಿನಿಂದಲೂ ಐಎಸ್ಎಲ್ ಆರಂಭವಾಗುವ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿದೆ. ಹಾಗಾಗಿ ಈಗಲೇ ಅದರ ಬಗ್ಗೆ ನಾನು ಏನನ್ನು ಪ್ರತಿಕ್ರಿಯೆ ನೀಡುವುದಿಲ್ಲ.
- ಪಂದ್ಯಾವಳಿಯಲ್ಲಿ ಒಂದು ಪಂದ್ಯ ಬಾಕಿ ಇದೆ
ಈ ಪಂದ್ಯವೂ ನಮ್ಮ ಪಾಲಿಗೆ ಮಹತ್ವದ್ದಾಗಿದೆ. ಈ ಕ್ರೀಡೆಯಲ್ಲಿ ನಾವು ಆಡುವ ಪ್ರತಿಯೊಂದು ಪಂದ್ಯವನ್ನು ಗೆಲ್ಲಲೇಬೇಕೆಂಬ ಉದ್ದೇಶ ಹೊಂದಿರಬೇಕು. ಪ್ರಶಸ್ತಿ ಲಭಿಸಿದ ಹಿನ್ನಲೆಯಲ್ಲಿ ಆ ಪಂದ್ಯವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.
ಯುವಶಕ್ತಿ ಮೇಲೆ ಪ್ರದ್ಯುಮ್ನಗೆ ನಂಬಿಕೆ
-ಆರಂಭದಲ್ಲಿನ ಗುರಿ
ನಾವು ಈ ಬಾರಿ ಯುವ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ತಂಡವನ್ನು ಕಟ್ಟುವತ್ತ ಗಮನ ಹರಿಸಿದ್ದೆವು. ಈ ಬಾರಿ ಅಂಕಪಟ್ಟಿಯಲ್ಲಿ ಮಧ್ಯಭಾಗದಲ್ಲಿ ಸ್ಥಾನ ಪಡೆದು, ಮುಂದಿನ ವರ್ಷ ಮೇಲ್ಬಾಗದಲ್ಲಿ ಸ್ಥಾನ ಪಡೆದು, ನಂತರ ಮೂರನೇ ವರ್ಷ ಪ್ರಶಸ್ತಿ ಪಡೆಯುವ ಗುರಿ ಇತ್ತು.
-ಈ ಬಾರಿ ಸ್ಥಳೀಯ ಆಟಗಾರರಿಗೆ ಅವಕಾಶ
ಈ ಬಾರಿ ಕರ್ನಾಟಕದ ಮಂಜು ಹಾಗೂ ವಿಶಾಲ್ ಕುಮಾರ್ ತಂಡದ ಪರ ಆಡಿದರಾದರೂ, ಹೆಚ್ಚಿನ ಅವಕಾಶ ಪಡೆಯಲಿಲ್ಲ. ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡಿ ಹೆಚ್ಚು ಅವಕಾಶ ಪಡೆಯಲಿದ್ದಾರೆ.
- ಸ್ಥಳೀಯ ಪ್ರತಿಭೆಗಳ ಅನಾವರಣ
ಕಳೆದ ದಶಕಗಳಿಂದ ಇಲ್ಲಿ ಮೂಲಸೌಕರ್ಯಗಳ ಕೊರತೆ ಇತ್ತು. ಈಗ ಆ ಸಮಸ್ಯೆ ಕ್ರಮೇಣ ಬಗೆ ಹರಿಯುತ್ತಿದ್ದು, ಬಿಎಫ್ಸಿ 19 ವರ್ಷದೊಳಗಿನ ತಂಡದಲ್ಲಿ ಬಹುತೇಕ ಸ್ಥಳೀಯ ಆಟಗಾರನ್ನೇ ಹೊಂದಿದೆ. ಅವರನ್ನು ಸರಿಯಾದ ಮಾರ್ಗದರ್ಶನದಿಂದ ಅವರಲ್ಲಿ ಆಟದ ಗುಣಮಟ್ಟವನ್ನು ಹೆಚ್ಚಿಸಲಿದ್ದೇವೆ.
-ಸ್ಥಳೀಯ ಆಟಗಾರರ ಸಮಸ್ಯೆಗಳು
ಭಾರತದ ಸ್ಥಳೀಯ ಆಟಗಾರರು ಫಿಟ್ನೆಸ್ ಹಾಗೂ ಗಾಯದ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಿದ್ದಾರೆ. ಅವರಿಗೆ ಮೂಲಭೂತ ಸೌಯಕರ್ಯಗಳ ಕೊರತೆಯಿಂದ ಈ ಸಮಸ್ಯೆ ಎದುರಾಗುತ್ತಿತ್ತು. ಆದರೆ ಈಗ ಕ್ರೀಡೆಗೆ ಹೆಚ್ಚು ಆರ್ಥಿಕ ನೆರವು ದೊರೆಯುತ್ತಿದ್ದು, ಉತ್ತಮ ಸೌಕರ್ಯ ನೀಡಲಾಗುತ್ತಿದೆ. ಚಿಕ್ಕ ವಯಸ್ಸಿನಿಂದಲೇ ಆಟಗಾರರಿಗೆ ಉತ್ತಮ ತರಬೇತಿ ನೀಡಿ ಅವರ ಫಿಟ್ನೆಸ್ ಮಟ್ಟವನ್ನು ಹೆಚ್ಚಿಸಬಹುದಾಗಿದೆ.
ಸೋಮಶೇಖರ ಪಿ. ಭದ್ರಾವತಿ