ಸಿಂಧು, ಕಶ್ಯಪ್, ಗುರುಸಾಯಿದತ್ ಶುಭಾರಂಭ
ನವದೆಹಲಿ: ಭಾರತದ ಭರವಸೆಯ ಶಟ್ಲರ್‌ಗಳಾದ ಪಿ.ವಿ. ಸಿಂಧು, ಪರುಪಳ್ಳಿ ಕಶ್ಯಪ್ ಮತ್ತು ಆರ್‌ಎಂವಿ ಗುರುಸಾಯಿದತ್, ಕೊರಿಯಾದ ಗಿಮ್‌ಚಾನ್‌ನಲ್ಲಿ ನಡೆಯುತ್ತಿರುವ 2 ಲಕ್ಷ ಡಾಲರ್ ಬಹುಮಾನ ಮೊತ್ತದ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಮೊದಲ ಸುತ್ತಿನ ಪಂದ್ಯಗಳನ್ನು ಗೆದ್ದುಕೊಂಡು ಶುಭಾರಂಭ ಮಾಡಿದ್ದಾರೆ.
ಆದರೆ, ತವರಿನ ಪಾಲಿಗೆ ಆಘಾತಕಾರಿ ಫಲಿತಾಂಶವೆಂದರೆ, ಉದಯೋನ್ಮುಖ ಪ್ರತಿಭೆ ಕಿಡಂಬಿ ಶ್ರೀಕಾಂತ್, ಮೊದಲ ಸುತ್ತಿನಲ್ಲಿಯೇ ಸೋಲಿನ ಕಹಿ ಉಂಡಿದ್ದು. ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ ಅವರು 7-21, 14-21ರ ನೇರ ಅಂಕಗಳ ಅಂತರದಲ್ಲಿ ಚೀನಾದ ಹಿರಿಯ ಆಟಗಾರ ಲಿನ್ ಡ್ಯಾನ್ ಎದುರು ಸೋಲನುಭವಿಸಿದರು.
ಈ ಮಧ್ಯೆ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ 10ನೇ ಶ್ರೇಯಾಂಕಿತೆ ಪಿ.ವಿ. ಸಿಂಧು, 21-15, 15-21, 21-8 ಅಂಕಗಳಿಂದ ಹಾಂಕಾಂಗ್‌ನ ಚುಂಗ್ ಗಾನ್ ಯೀ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಹೆಜ್ಜೆ ಹಾಕಿದರು. ಪುರುಷರ ವಿಭಾಗದಲ್ಲಿ ಪರುಪಳ್ಳಿ ಕಶ್ಯಪ್ ಮೊದಲ ಸುತ್ತಿನ ಸಿಂಗಲ್ಸ್‌ನಲ್ಲಿ ಮಲೇಷಿಯಾದ ಗೋ ಸೂನ್ ಹೌತ್ ವಿರುದ್ಧ 21-14, 21-17ರಿಂದ ಗುರುಸಾಯಿದತ್ 22-20, 23-21ರಿಂದ ಥಾಯ್ಲೆಂಡ್‌ನ ಫೆಟಪ್ರದಾಬ್ ಖೋಸಿಟ್ ವಿರುದ್ಧ ಜಯಗಳಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ21-18, 21-15ರಿಂದ ಸಿಂಗಾಪುರದ ಪೂ ಮಿಂಗ್ಟೇನ್ ಮತ್ತು ನಿಯೋ ಯು ಯಾನ್ ವೆನೆಸಾರನ್ನು ಸೋಲಿಸಿ 2ನೇ ಸುತ್ತು ತಲುಪಿದರು.