ಕೆಕೆಆರ್ಗೆ ರೋಚಕ ಜಯ
ಶಾರ್ಜಾ: ತೀವ್ರ ರೋಚಕವಾಗಿಕೂಡಿದ್ದ ಪಂದ್ಯದಲ್ಲಿ ಕರ್ನಾಟಕದ ವಿನಯ್ ಕುಮಾರ್ ಪಂದ್ಯದ ಕಡೆಯ ಓವರ್ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಕೋಲ್ಕತಾ ನೈಟ್ರೈಡರ್ಸ್ ತಂಡ ಐಪಿಎಲ್ 7ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಚಕ ಗೆಲವು ದಾಖಲಿಸುವಂತೆ ಮಾಡಿದರು.
ಗುರುವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ವಿರುದ್ಧ ಕೆಕೆಆರ್ ತಂಡ ಕೇವಲ 2 ರನ್ಗಳ ಅಂತರದಿಂದ ಗೆಲವು ಸಾಧಿಸಿತು.
ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಂತರ ಕೋಲ್ಕತಾ ನೈಟ್ರೈಡರ್ಸ್ ತಂಡ 20 ಓವರ್ಗಳಿಗೆ 6 ವಿಕೆಟ್ ಕಳೆದುಕೊಂಡು 150 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 148 ರನ್ ದಾಖಲಿಸಿತು.
ಚೇಸಿಂಗ್ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಆರ್ಸಿಬಿ, ಈ ಪಂದ್ಯದಲ್ಲೂ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರ್ಸಿಬಿ ತಂಡ ನಿಕ್ ಮ್ಯಾಡಿನ್ಸನ್ ಬದಲಿಗೆ ಸ್ಪಿನ್ನರ್ ಮುತ್ತಯ್ಯ ಮುರಳಿಧರನ್ ಹಾಗೂ ಸಚಿನ್ ರಾಣಾ ಬದಲಿಗೆ ಯೋಗೇಶ್ ಟಕವಾಲೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿತು.
ಇನ್ನು ಕೆಕೆಆರ್ ತಂಡದ ಪರ ಪಿಯೂಶ್ ಚಾವ್ಲಾ ಬದಲಿಗೆ ಉಮೇಶ್ ಯಾದವ್ ಹಾಗೂ ಶಕಿಬ್ ಅಲ್ ಹಸನ್ ಬದಲಿಗೆ ಕ್ರಿಸ್ ಲಿನ್ ಅವರನ್ನು ಕಣಕ್ಕಿಳಿಸಿತು.
ಆರಂಭಿಕ ಕುಸಿತ: ಆರಂಭಿಕರಾಗಿ ಕಣಕ್ಕಿಳಿದ ನಾಯಕ ಗೌತಮ್ ಗಂಭೀರ್ ಮತ್ತೊಮ್ಮೆ ಶೂನ್ಯ ಸಂಪಾದನೆಗೆ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಮನೀಷ್ ಪಾಂಡೆ ಸಹ ಕೇವಲ 5 ರನ್ ಗಳಿಸಿ ಆಲ್ಬಿ ಮಾರ್ಕೆಲ್ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಆಲೌಟ್ ಆದರು. ಈ ಮೂಲಕ ಕೆಕೆಆರ್ ತಂಡ 10 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆಸರೆಯಾದ ಕಾಲಿಸ್, ಲಿನ್: ಆರಂಭಿಕ ಆಘಾತ ಎದುರಿಸಿದ್ದ ಕೆಕೆಆರ್ ತಂಡಕ್ಕೆ ಆಸರೆಯಾಗಿದ್ದು, ಜಾಕ್ ಕಾಲಿಸ್ ಹಾಗೂ ಕ್ರಿಸ್ ಲಿನ್. ಈ ಜೋಡಿ ಮೂರನೇ ವಿಕೆಟ್ಗೆ 80 ರನ್ ಕಲೆಹಾಕಿದರು.
31 ಎಸೆತಗಳಲ್ಲಿ ಅಬ್ಬರದ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದ್ದ ಕ್ರಿಸ್ ಲಿನ್ಗೆ ವರುಣ್ ಪೆವಿಲಿಯನ್ ಹಾದಿ ತೋರಿದರು. ಅದೇ ಓವರ್ನಲ್ಲಿ ಬಂದ ಯೂಸುಫ್ ಪಠಾಣ್ ಸಹ ರನ್ ದಾಖಲಿಸದೇ ವಿಕೆಟ್ ಒಪ್ಪಿಸಿದ್ದು, ತಂಡದ ಹಿನ್ನಡೆಗೆ ಕಾರಣವಾಯಿತು. ಇದಾದ ನಂತರ ಇನಿಂಗ್ಸ್ ಕಟ್ಟುತ್ತಿದ್ದ ಜಾಕ್ ಕಾಲಿಸ್ ಸಹ 42 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 43 ರನ್ ದಾಖಲಿಸಿ ಚಾಹಲ್ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಕೆಕೆಆರ್ 107 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಬಂದ ಸೂರ್ಯಕುಮಾರ್ ಅಜೇಯ 24 ರನ್ ದಾಖಲಿಸಿದರೆ, ಉತ್ತಪ್ಪ 22, ವಿನಯ್ 4 ರನ್ ಗಳಿಸಿ ಔಟಾದರು.
ವ್ಯರ್ಥವಾದ ಉತ್ತಮ ಆರಂಭ: ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿಗೆ ಆರಂಭಿಕರಾದ ಪಾರ್ಥಿವ್ ಪಟೇಲ್ (21) ಹಾಗೂ ಯೋಗೇಶ್ ಟಕವಾಲೆ (40) ಅವರಿಂದ 67 ರನ್ಗಳ ಉತ್ತಮ ಆರಂಭ ದೊರಕಿತು.
ನಂತರ ಬಂದ ವಿರಾಟ್ ಕೊಹ್ಲಿ (31) ಹಾಗೂ ಯುವರಾಜ್ ಸಿಂಗ್ (31) ಪಂದ್ಯದ ಮಹತ್ವದ ಹಂತದಲ್ಲಿ ವಿಕೆಟ್ ಕೈಚೆಲ್ಲಿದರು.
ರೋಚಕ ಕಡೇಯ ಓವರ್: ಆರ್ಸಿಬಿ ತಂಡದ ಗೆಲವಿಗೆ ಕಡೇಯ ಓವರ್ನಲ್ಲಿ ಕೇವಲ 9 ರನ್ಗಳ ಅಗತ್ಯವಿತ್ತು. ಈ ವೇಳೆ ದಾಳಿಗಿಳಿದ ಕರ್ನಾಟಕದ ವಿನಯ್ ಕುಮಾರ್ ಪಂದ್ಯದ ಫಲಿತಾಂಶವನ್ನೇ ಬದಲಿಸಿದರು. ಮೊದಲ ಮೂರು ಎಸೆತದಲ್ಲಿ ಆರ್ಸಿಬಿ ತಂಡ 3 ರನ್ ದಾಖಲಿಸಿತು. ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮುಂದಾದ ಎಬಿ ಡಿವಿಲಿಯರ್ಸ್ (11) ಕ್ರಿಸ್ ಲಿನ್ ಅವರ ಅಮೋಘ ಕ್ಯಾಚ್ಗೆ ಬಲಿಯಾದರು. ನಂತರ ಐದನೇ ಎಸೆತದಲ್ಲಿ ಎರಡು ರನ್ ದಾಖಲಿಸಿದರು. ಈ ಮೂಲಕ ಆರ್ಸಿಬಿಗೆ ಕೊನೆಯ ಎಸೆತದಲ್ಲಿ 4 ರನ್ ಅಗತ್ಯವಿದ್ದಾಗ ಮಾರ್ಕೆಲ್ (ಅಜೇಯ 6) ಚೆಂಡನ್ನು ಬೌಂಡರಿ ಗೆರೆ ದಾಟುವಂತೆ ಮಾಡುವಲ್ಲಿ ವಿಫಲರಾದರು. ಈ ಮೂಲಕ ಗೆಲವಿನ ಹೊಸ್ತಿಲಲ್ಲಿ ಆರ್ಸಿಬಿ ಪಂದ್ಯವನ್ನು ಕೈಚೆಲ್ಲಿತು.
ಸ್ಕೋರ್ ವಿವರ
ಕೋಲ್ಕತಾ ನೈಟ್ರೈಡರ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 150
ಜಾಕ್ ಕಾಲಿಸ್ ಸಿ ಟಕವಾಲೆ ಬಿ ಚಾಹಲ್ 43, ಗೌತಮ್ ಗಂಭೀರ್ ಎಲ್ಬಿ ಸ್ಟಾರ್ಕ್ 0, ಮನೀಷ್ ಪಾಂಡೆ ಸಿ ಕೊಹ್ಲಿ ಬಿ ಮಾರ್ಕೆಲ್ 5, ಕ್ರಿಸ್ ಲಿನ್ ಸಿ ಡಿವಿಲಿಯರ್ಸ್ ಬಿ ವರುಣ್ 45, ಯೂಸುಫ್ ಸಿ ಕೊಹ್ಲಿ ಬಿ ವರುಣ್ 0, ಉತ್ತಪ್ಪ ಸಿ ಸ್ಟಾರ್ಕ್ ಬಿ ವರುಣ್ 22, ಸೂರ್ಯಕುಮಾರ್ ಅಜೇಯ 24, ವಿನಯ್ ಕುಮಾರ್ ಸಿ ಮಾರ್ಕೆಲ್ ಬಿ ಸ್ಟಾರ್ಕ್ 4
ಇತರೆ: (ಬೈ 1, ಲೆಗ್ಬೈ 2, ವೈಡ್ 4) ಒಟ್ಟು 7
ವಿಕೆಟ್ ಪತನ: 1-1, 2-10, 3-90, 4-90, 5-107, 6-129, 7-150
ಬೌಲಿಂಗ್ ವಿವರ
ಮಿಚೆಲ್ ಸ್ಟಾರ್ಕ್ 4-0-33-2
ಆಲ್ಬಿ ಮಾರ್ಕೆಲ್ 2-0-21-1
ವರುಣ್ ಎರಾನ್ 4-0-16-3
ಮುರಳಿಧರನ್ 2-0-25-0
ಚಾಹಲ್ 4-0-26-1
ಅಶೋಕ್ ದಿಂಡಾ 4-0-26-0
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ 5 ವಿಕೆಟ್ಗೆ 148
ಪಾರ್ಥಿವ್ ಸಿ ಕ್ರಿಸ್ ಬಿ ವಿನಯ್ 21, ಟಕತವಾಲೆ ಎಲ್ಬಿ ಕಾಲಿಸ್ 40, ಕೊಹ್ಲಿ ಬಿ ನಾರಾಯಣ್ 31, ಯುವರಾಜ್ ಸಿ ಪಠಾಣ್ ಬಿ ಉಮೇಶ್ 31, ಡಿವಿಲಿಯರ್ಸ್ ಸಿ ಲಿನ್ ಬಿ ವಿನಯ್ 11, ಮಾರ್ಕೆಲ್ ಅಜೇಯ 6, ಸ್ಟಾರ್ಕ್ ಅಜೇಯ 0.
ಇತರೆ: (ಲೆಗ್ಬೈ 5, ವೈಡ್ 2, ನೊಬಾಲ್ 1) ಒಟ್ಟು 8
ವಿಕೆಟ್ ಪತನ: 1-67, 2-67, 3-122, 4-141, 5-145
ಬೌಲಿಂಗ್ ವಿವರ
ಉಮೇಶ್ ಯಾದವ್ 4-0-40-1 ಮಾರ್ನ್ ಮಾರ್ಕೆಲ್ 4-0-34-0
ನಾರಾಯಣ್ 4-0-17-1 ವಿನಯ್ ಕುಮಾರ್ 4-0-26-2
ಜಾಕ್ ಕಾಲಿಸ್ 4-0-26-1