ವಿಶ್ವ ಬಿಲಿಯರ್ಡ್ಸ್: ಫೈನಲ್ನಲ್ಲಿ ಮುಗ್ಗರಿಸಿದ ಉಮಾದೇವಿ
ಲೀಡ್ಸ್: ರಾಷ್ಟ್ರೀಯ ಚಾಂಪಿಯನ್ಶಿಪ್ ಅನ್ನು ಮತ್ತೆ ಮುಡಿಗೇರಿಸಿಕೊಂಡು ಉತ್ತಮ ಲಯದಲ್ಲಿದ್ದ ಕರ್ನಾಟಕದ ಬಿಲಿಯರ್ಡ್ಸ್ ಆಟಗಾರ್ತಿ ಉಮಾದೇವಿ ನಾಗರಾಜ್, ಡಬ್ಲ್ಯೂಎಲ್ಬಿಎಸ್ಎ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ.
ಗುರುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಉಮಾ, ಏಳುಬಾರಿ ಚಾಂಪಿಯನ್ ಆಗಿದ್ದ ಎಮ್ಮಾ ಬೊನ್ನೆ ವಿರುದ್ಧ ಪರಾಭವಗೊಂಡರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಕಠಿಣ ಪಂದ್ಯದ ಮಹತ್ವದ ಹಂತದಲ್ಲಿ ಉಮಾ ತಮ್ಮ ನಿಯಂತ್ರಣ ಕಳೆದುಕೊಂಡರು. ಇದರ ಲಾಭ ಪಡೆದ ಎಮ್ಮಾ ಪಂದ್ಯವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
2012ರಲ್ಲಿ ಎಮ್ಮಾ ವಿರುದ್ಧ ಗೆಲವು ದಾಖಲಿಸಿದ್ದ ಉಮಾ, ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಆದರೆ ಈ ಬಾರಿ ಉಮಾ ವಿಫಲರಾಗಿದ್ದಾರೆ. ಗ್ರೂಪ್ ಆಫ್ 5 ಪಂದ್ಯವನ್ನಾಡಿದ್ದು, ಇದರಲ್ಲಿ ಎಮ್ಮೈ ಮೇಲುಗೈ ಸಾಧಿಸಿದರು. ಇದಕ್ಕೂ ಮುನ್ನ ಪಂದ್ಯಾವಳಿಯಲ್ಲಿ ಭಾರತದ ಚಿತ್ರಾ ಮಗಿಮೈರಾಜ್ ಹಿರಿಯ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಇನ್ನು ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ವಿಭಾಗದಲ್ಲಿ ಉಮಾ ಹಾಗೂ ಚಿತ್ರಾ ಇಬ್ಬರೂ ಪಂದ್ಯಾವಳಿಯಿಂದ ಹೊರಗುಳಿದಿದ್ದರು.