ಹಾದಿ ಯಾವುದಯ್ಯ ಹೈದರಾಬಾದ್ ಗೆಲವಿಗೆ?
ದುಬೈ: ಸತತ ಎರಡು ಸೋಲುಗಳೊಂದಿಗೆ ಆರಂಭಿಕ ಆಘಾತ ಅನುಭವಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಸ್ಥಿರ ಪ್ರದರ್ಶನ ನೀಡುವಲ್ಲಿ ಒದ್ದಾಡುತ್ತಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳು ಶುಕ್ರವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಹೋರಾಟ ನಡೆಸಲಿವೆ.
ಕಳೆದ ಬಾರಿ ಪದಾರ್ಪಣೆ ವರ್ಷದಲ್ಲೇ ಪ್ಲೇ ಆಫ್ ಹಂತ ಪ್ರವೇಶಿಸಿದ್ದ ಹೈದರಾಬಾದ್, ಆ ವರ್ಷ ಆರಂಭದಿಂದಲೇ ಆಘಾತ ಅನುಭವಿಸುತ್ತಿದೆ. ಈ ಬಾರಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್ ಅಂತರದಿಂದ ಸೋಲನುಭವಿಸಿದ್ದ ಹೈದರಾಬಾದ್, ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 72 ರನ್‌ಗಳ ಅಂತರದಿಂದ ಸೋಲನುಭವಿಸಿತ್ತು. ಇನ್ನೊಂದೆಡೆ ಡೆಲ್ಲಿ ತಂಡ ಸೋಲು ಮತ್ತು ಗೆಲವು ಮಿಶ್ರಫಲಗಳೊಂದಿಗೆ ಪಂದ್ಯಾವಳಿಯನ್ನು ಆರಂಭಿಸಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ವಿಕೆಟ್ ಅಂತರಿದಂದ ಸೋಲನುಭವಿಸಿದ್ದ ಡೆಲ್ಲಿ, ನಂತರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಜಯ ಕಂಡುಕೊಂಡಿತ್ತು. ಆನಂತರ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 93 ರನ್‌ಗಳ ಅಂತರದಂದ ಸೋಲನುಭವಿಸಿದೆ. ಕೆವಿನ್ ಪೀಟರ್ಸನ್ ಅಲಭ್ಯರಾಗಿರುವುದು ಡೆಲ್ಲಿ ತಂಡಕ್ಕೆ ಕೊಂಚ ಹಿನ್ನಡೆಯಾಗಿ ಪರಿಣಮಿಸಿದೆ. ಪೀಟರ್ಸನ್, ತಂಡ ಇದುವರೆಗೂ ಆಡಿದ ಮೂರೂ ಪಂದ್ಯಗಳಿಗೂ ಅಲಭ್ಯರಾಗಿದ್ದಾರೆ. ಕಳೆದ ತಿಂಗಳು ಓವೆಲ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವಾಗ ಬೆರಳಿಗೆ ಗಾಯ ಮಾಡಿಕೊಂಡಿರುವ ಕೆವಿನ್ ಪೀಟರ್ಸನ್ ಅವರು ಡೆಲ್ಲಿ ತಂಡಕ್ಕೆ ಅಲಭ್ಯರಾಗಿದ್ದಾರೆ. ಈಗ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಅವರು ಮುನ್ನಡೆಸಲಿದ್ದು, ತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ.ಹೈದರಾಬಾದ್ ತಂಡ ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿದೆ. ಶಿಖರ್ ಧವನ್ ನಾಯಕತ್ವದ ತಂಡ ತನ್ನ ಮೊದಲ ಪಂದ್ಯದಲ್ಲಿ ಉತ್ತಮ ರನ್ ಗಳಿಸುವಲ್ಲಿ ವೈಫಲ್ಯ ಕಂಡಿತ್ತು. ನಂತರ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೈಚೆಲ್ಲಿತ್ತು. ಪಂಜಾಬ್ ವಿರುದ್ಧ ಸೋಲನುಭವಿಸಿದ ನಂತರ ತಮ್ಮ ತಂಡದ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ವೈಫಲ್ಯದ ಬಗ್ಗೆ ಧವನ್ ಮಾತನಾಡಿದ್ದರು. ಹೀಗಾಗಿ ಈಗ ಆ ಎಲ್ಲ ಸಮಸ್ಯೆಗಳಿಗೆ ಹೈದರಾಬಾದ್ ತಂಡ ಪರಿಹಾರ ಕಂಡುಕೊಂಡಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಹೈದರಾಬಾದ್ ತಂಡದಲ್ಲಿದ್ದಾರೆ. ಆದರೆ, ನಾಯಕ ಧವನ್ ಇನ್ನೂ ಮಿಂಚಬೇಕಾಗಿದೆ.ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್ ಮತ್ತು ವೈ. ವೇಣುಗೋಪಾಲ್ ಅವರು ವೈಫಲ್ಯ ಕಾಣುತ್ತಿದ್ದಾರೆ. ಅಲ್ಲದೆ, ರಾಜಸ್ಥಾನದ ವಿರುದ್ದ ಹೈದಾರಾಬಾದ್ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಪಂಜಾಬ್‌ನ ಮ್ಯಾಕ್ಸ್‌ವೆಲ್ ಅವರನ್ನು ಕಟ್ಟಿಹಾಕುವಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡಿದ್ದಾರೆ. ಭುವನೇಶ್ವರ ಕುಮಾರ್ ಮತ್ತು ಡೇಲ್ ಸ್ಟೇಯ್ನ್ ಅವರು ಸ್ಥಿರ ಪ್ರದರ್ಶನ ಹೊಂದಿದ್ದಾರೆ. ಇನ್ನು ಅಮಿತ್ ಮಿಶ್ರಾ ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಪಡೆದಿದ್ದಾರೆ. ಆದರೆ, ಅವರೂ ಸಹ ಮ್ಯಾಕ್ಸ್‌ವೆಲ್ ವಿರುದ್ಧ ರನ್ ಸೋರಿಕೆ ಮಾಡಿದ್ದಾರೆ. ಇನ್ನು ಡೆಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ವೇಗಿ ಮೊಹ್ಮದ್ ಶಮಿ ವಹಿಸಿಕೊಂಡಿದ್ದಾರೆ. ಅಲ್ಲದೆ, ಜಯದೇವ್ ಉನಾದ್ಕತ್ ಸಹ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಆಸ್ಟ್ರೇಲಿಯಾದ ನಥಾನ್ ಕಟ್ಲರ್ ನೀಲ್ ಅನುಪಸ್ಥಿತಿ, ಡೆಲ್ಲಿ ಬೌಲಿಂಗ್ ವಿಭಾಗವನ್ನು ಕಾಡುತ್ತಿದೆ. ಚೆನ್ನೈ ವಿರುದ್ಧ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೊಳಗಾಗಿದ್ದ ಅವರು ತಂಡಕ್ಕೆ ಅಲಭ್ಯರಾಗಿದ್ದಾರೆ.ಆದರೆ, ತಂಡದ ಸ್ಪಿನ್ನರ್‌ಗಳಾದ ಶಹಬಾಜ್ ನದೀಂ ಅಥವಾ ಜೆ.ಪಿ ಡುಮಿನಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ವೈಫಲ್ಯ ಕಾಣುತ್ತಿದ್ದಾರೆ.