ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ನೈಟ್ ರೈಡರ್ಸ್‌ಗೆ ಮ್ಯಾಕ್ಸ್‌ವೆಲ್ ಆತಂಕ

Vishwanath S
Updated On : 26 Apr 2014, 1:09 am

ದುಬೈ: ಐಪಿಎಲ್ ಏಳನೇ ಆವೃತ್ತಿಯಲ್ಲಿ ಮಿಂಚುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಡೇವಿಡ್ ಮಿಲ್ಲರ್ ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡದ ನಿದ್ದೆ ಕೆಡಿಸಿದ್ದಾರೆ. ಕಾರಣ, ಶನಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ಮತ್ತು ಪಂಜಾಬ್ ತಂಡ ತಂಡಗಳು ಪರಸ್ಪರ ಸೆಣಸಲಿವೆ.ಎದುರಾಳಿ ಬೌಲರ್‌ಗಳಿಗೆ ಬೆವರಿಳಿಸುತ್ತಿರುವ ಮ್ಯಾಕ್ಸ್‌ವೆಲ್, ಈ ಆವೃತ್ತಿ ಆರಂಭವಾದಾಗಿನಿಂದ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಹೀಗಾಗಿ ಈಗ ನೈಟ್ ರೈಡರ್ಸ್ ತಂಡದ ಬೌಲಿಂಗ್ ವಿಭಾಗ ಮ್ಯಾಕ್ಸ್‌ವೆಲ್ ಆತಂಕದಲ್ಲಿದೆ.ಇದುವರೆಗೂ ಆಡಿರುವ ಮೂರು ಪಂದ್ಯಗಳಿಂದ 93 ಸರಾಸರಿಯಲ್ಲಿ ಒಟ್ಟು 279 ರನ್ ಗಳಿಸಿರುವ ಆಸ್ಟ್ರೇಲಿಯಾ ಆಟಗಾರ, 17 ಸಿಕ್ಸರ್ ಮತ್ತು 28 ಬೌಂಡರಿ ದಾಖಲಿಸಿದ್ದಾರೆ.ಆದರೆ, ಕೋಲ್ಕತಾ ತಂಡದಲ್ಲಿರುವ ಚತುರ ಸ್ಪಿನ್ನರ್ ಸುನಿಲ್ ನಾರಾಯಣ ವಿರುದ್ಧವೂ ಮ್ಯಾಕ್ಸ್‌ವೆಲ್ ಇದೇ ರೀತಿಯಾದ ರನ್ ಮಳೆ ಸುರಿಸುವರೇ ಎಂಬುದು ಈಗ ಕುತೂಹಲ ಮೂಡಿಸಿದೆ. ನಾರಾಯಣ ಅವರೊಂದಿಗೆ ಕೋಲ್ಕತಾ ತಂಡ ಪ್ರತಿಭಾನ್ವಿತ ಮತ್ತು ಅನುಭವಿ ಆಲ್ರೌಂಡ್ ಆಟಗಾರ ಜಾಕ್ ಕಾಲಿಸ್ ಅವರನ್ನೂ ಹೊಂದಿದೆ. ಹೀಗಾಗಿ ಮ್ಯಾಕ್ಸ್‌ವೆಲ್ ವಿಕೆಟ್ ಪಡೆಯಲು ದಕ್ಷಿಣ ಆಫ್ರಿಕಾದ ದಂತಕೆ ಯಾವುದಾದರೂ ಚಮತ್ಕಾರ ಪ್ರಯೋಗ ಮಾಡುವರೇ ಎಂದು ತಂಡ ಎದುರು ನೋಡುತ್ತಿದೆ.ಇನ್ನು ಮ್ಯಾಕ್ಸ್‌ವೆಲ್ ಅವರಿಗಿಂತ ಮುನ್ನ ಕೋಲ್ಕತಾ ತಂಡ, ಪಂಜಾಬ್‌ನ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ವಿಕೆಟ್ ಪಡೆಯಲು ತಂತ್ರ ಹೆಣೆಯುತ್ತಿದೆ. ಕಾರಣ, ಸೆಹ್ವಾಗ್ ಪಂದ್ಯದಿಂದ ಪಂದ್ಯಕ್ಕೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.ಒಂದು ವೇಳೆ ಕೋಲ್ಕತಾ ಸೆಹ್ವಾಗ್ ಮತ್ತು ಮ್ಯಾಕ್ಸ್‌ವೆಲ್ ಅವರನ್ನು ಕಟ್ಟಿಹಾಕಿದರೆ, ಅನಂತರ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರನ್ನು ಕಟ್ಟಿಹಾಕುವುದು ಕೋಲ್ಕತಾಗೆ ಮತ್ತೊಂದು ದೊಡ್ಡ ಸವಾಲಾಗಿದೆ.ಮಿಲ್ಲರ್ ಅವರು ಇದುವರೆಗೂ ಎರಡು ಅರ್ಧ ಶತಕ ದಾಖಲಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ಭಟಿಸಿದ್ದ ಮಿಲ್ಲರ್ ಅವರು ಕೇವಲ 19 ಎಸೆತಗಳಲ್ಲಿ 51 ರನ್ ಸಿಡಿಸಿದ್ದರು.ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸ್‌ವೆಲ್ ಮಾದರಿಯಲ್ಲೇ ಬೌಲರ್‌ಗಳನ್ನು ದಂಡಿಸುತ್ತಿರುವ ಮಿಲ್ಲರ್ ಅವರು, ಸುಲಭವಾಗಿ ರನ್ ಮಳೆಗರಿಯುತ್ತಿದ್ದಾರೆ.ಇನ್ನು ಕೋಲ್ಕತಾ ತಂಡಕ್ಕೆ, ಇದುವರೆಗೂ ಮೂರು ಪಂದ್ಯಗಳಲ್ಲಿ ಸೊನ್ನೆ ಸುತ್ತಿರುವ ನಾಯಕ ಗೌತಮ್ ಗಂಭೀರ್ ಅವರೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ನಾಯಕ ಗೌತಮ್ ಗಂಭೀರ್ ಅವರಿಂದ ತಂಡ ಉತ್ತಮ ಪ್ರದರ್ಶನವನ್ನು ಎದುರು ನೋಡುತ್ತಿದೆ. ಒತ್ತಡದಲ್ಲಿರುವ ಗೌತಮ್ ಈ ಪಂದ್ಯದಲ್ಲಾದರೂ ಬ್ಯಾಟಿಂಗ್‌ನಲ್ಲಿ ಫಾರ್ಮ್ ಕಂಡುಕೊಳ್ಳಲಿದ್ದಾರೆಯೇ ಎಂದು ತಂಡದ ಅಭಿಮಾನಿಗಳು ಕಾದಿದ್ದಾರೆ.ಅಲ್ಲದೆ, ನಾಯಕತ್ವದ ಜವಾಬ್ದಾರಿ ಹೊತ್ತಿರುವ ಗಂಭೀರ್ ಅವರು ಈ ಸಮಯದಲ್ಲಿ ತಮ್ಮ ತಪ್ಪನ್ನು ತಿದ್ದಿಕೊಂಡು ಉತ್ತಮ ಪ್ರದರ್ಶನ ನೀಡುವುದು ಸೂಕ್ತವಾಗಿದೆ.ನೀಲಿ ಪಟ್ಟಿ ಧರಿಸುವ ಪಂಜಾಬ್ ದುಬೈ: ವಿಶ್ವ ರೋಗನಿರೋಧಕ ಶಕ್ತಿ ಸಪ್ತಾಹದ ಹಿನ್ನೆಲೆಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರು ತಮ್ಮ ಕೈಗೆ ನೀಲಿ ಪಟ್ಟಿಗಳನ್ನು ಧರಿಸಲಿದ್ದಾರೆ. ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು 5 ವರ್ಷದೊಳಗಿನ ಮಕ್ಕಳು ಅಸುನೀಗುತ್ತಿದ್ದಾರೆ. ನ್ಯುಮೋನಿಯಾದಂತಹ ರೋಗಗಳೇ ಇದಕ್ಕೆ ಪ್ರಮುಖ ಕಾರಣವಾಗಿದೆ.ತಡೆಗಟ್ಟಬಹುದಾದಂತಹ ರೋಗಗಳಿಂದ ಮಕ್ಕಳನ್ನು ಉಳಿಸುವ ರೋಗನಿರೋಧಕ ಸಾಪ್ತಾಹವನ್ನು ಬೆಂಬಲಿಸಲು ನಮ್ಮ ತಂಡ ಹೆಮ್ಮೆಪಡುತ್ತದೆ. ಈ ಸಾಪ್ತಾಹಕ್ಕೆ ಬೆಂಬಲ ನೀಡಲು ನಾವು ಪ್ರತಿಯೊಬ್ಬರು ನೆರವಾಗೋಣ' ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement