ಎಚ್ಎಎಲ್ ತಂಡ ಫುಟ್ಬಾಲ್ ಐ-ಲೀಗ್ನಿಂದ ಹೊರಬಿದ್ದ ನಂತರ, ಬೆಂಗಳೂರು ಫುಟ್ಬಾಲ್ನ ಎಲ್ಲ ಆಸೆಗಳು ಮುದುಡಿಕೊಂಡಿದ್ದವು. ಆದರೆ, ಪ್ರಸಕ್ತ ಋತುವಿನಲ್ಲಿ ಕಣ್ಣುಬಿಟ್ಟಿದ್ದ ಬೆಂಗಳೂರು ಫುಟ್ಬಾಲ್ ಕ್ಲಬ್ ಚಿಮುಕಿಸಿದ ಸಿಂಚನದಿಂದ ಮುದುಡಿದ್ದ ಕನಸುಗಳು ಮತ್ತೆ ಗರಿಗೆದರಿದೆ. ಅಷ್ಟೇ ಅಲ್ಲ, ಬೆಂಗಳೂರು ಫುಟ್ಬಾಲ್ ಪ್ರಿಯರಲ್ಲಿ ಹೊಸ ಪುಳಕ ಮೂಡಿಸಿದೆ. ಅಚ್ಚರಿ ಎಂದರೆ, ಪದಾರ್ಪಣೆ ಮಾಡಿದ ಋತುವಿನಲ್ಲೇ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಬೆಂಗಳೂರಿನಲ್ಲಿ ಫುಟ್ಬಾಲ್ನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಇದರೊಂದಿಗೆ ವಿಶ್ವದ ಜನಪ್ರಿಯ ಕ್ರೀಡೆಯಾದ ಫುಟ್ಬಾಲ್ ಕಡೆಗೆ ಉದ್ಯಾನ ನಗರಿ ಮತ್ತೊಮ್ಮೆ ಅತೀವ ಪ್ರೀತಿಯಿಂದ ನೋಡುವಂತಾಗದೆ.
ಪ್ರಮುಖ ಆಟಗಾರರು
ಭಾರತ ತಂಡದ ನಾಯಕ ಸುನಿಲ್ ಛೆಟ್ರಿ ಸೇರಿದಂತೆ, ಆಸ್ಟ್ರೇಲಿಯಾದ ಸೀನ್ ರೂನಿ ಹಾಗೂ ಭಾರತ ತಂಡದ ಇನ್ನೊಬ್ಬ ಆಟಗಾರ ರಾಬಿನ್ಸಿಂಗ್ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದರು. ಛೆಟ್ರಿ 14 ಗೋಲು ಗಳಿಸಿ ಟೂರ್ನಿಯಲ್ಲಿ ಅಗ್ರಸ್ಥಾನ ಅಲಂಕರಿಸಿದರೆ, ಸೀನ್ರೂನಿ 10 ಗೋಲ್ಗಳೊಂದಿಗೆ 8ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಈ ಇಬ್ಬರೂ ಆಟಗಾರರು ನೀಡಿದ ಸಮರ್ಥ ಹೋರಾಟ ತಂಡದ ಯಶಸ್ಸಿನಲ್ಲಿ ಅಡಗಿದೆ. ಇನ್ನು ಗೋಲ್ಕೀಪರ್ ಪವನ್ ಕುಮಾರ್ ತಂಡ ಚಾಂಪಿಯನ್ ಆಗಲು ಮತ್ತೊಬ್ಬ ಪ್ರಮುಖ ರೂವಾರಿ ಎಂದೆನಿಸಿದರು. ಎದುರಾಳಿಗಳ ಗೋಲು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಪವನ್. ಇತರ ಆಟಗಾರರಾದ ಜಾನ್ ಜಾನ್ಸನ್, ಜಾನಿ ಮೆನಿಯಂಗರ್ ಕೂಡ ತಂಡದ ಗೆಲುವಿನಲ್ಲಿ ಸಹಭಾಗಿಗಳು.
ವೃತ್ತಿಪರತೆ ಹೆಚ್ಚಿಸಿದ ಬಿಎಫ್ಸಿ
ಮಹತ್ವದ ಪಂದ್ಯಾವಳಿಯಲ್ಲಿ ಕಣ್ಣುಬಿಟ್ಟ ವರ್ಷವೇ ಮಿಂಚಿನ ಪ್ರದರ್ಶನ ತೋರಿದ ಬೆಂಗಳೂರು ಫುಟ್ಬಾಲ್ ಕ್ಲಬ್ ಶಿಸ್ತಿಗೆ ಹೆಚ್ಚಿನ ಮಹತ್ವ ನೀಡಿದೆ. 'ಬೆಂಗಳೂರು ತಂಡ ಈ ಋತುವಿನಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಅಲ್ಲದೆ, ಅದ್ಭುತ ಪ್ರದರ್ಶನ ನೀಡುವ ಮೂಲಕ ಉತ್ತಮ ಫಲಿತಾಂಶವನ್ನೂ ಕಂಡುಕೊಂಡಿದೆ. ಇದರೊಂದಿಗೆ ಐ-ಲೀಗ್ ಪಂದ್ಯಾವಳಿಗೆ ಈ ಬಾರಿ ಹೆಚ್ಚಿನ ವೃತ್ತಿಪರತೆಯನ್ನು ತಂದುಕೊಟ್ಟಿದೆ' ಎನ್ನುತ್ತಾರೆ ಡೆಂಪೋ ತಂಡದ ಕೋಚ್, ಆಸ್ಟ್ರೇಲಿಯಾ ಮೂಲದ ಅರ್ಥರ್ ಪಾಪಸ್.
ಹೊಂದಾಣಿಕೆಯ ಆಟ
ಹೊಸದಾಗಿ ಒಂದು ತಂಡ ಹುಟ್ಟಿಕೊಂಡಾಗ ದೇಶ, ವಿದೇಶಿ ಆಟಗಾರರು ತಂಡಕ್ಕೆ ಆಯ್ಕೆಯಾಗಿರುತ್ತಾರೆ. ಹೀಗಾಗಿ ಹೊಂದಾಣಿಕೆ ಮಾಡಿಕೊಂಡು ಆಡುವುದು ತುಂಬಾ ಕಠಿಣ ವಿಷಯ. ಆದರೆ, ಇದಕ್ಕೆ ಹೊರತಾದ ಪ್ರದರ್ಶನ ತೋರಿದ ಬೆಂಗಳೂರು ಫುಟ್ಬಾಲ್ ಕ್ಲಬ್ನ ಆಟಗಾರರು ಪಂದ್ಯದ ಆರಂಭದಿಂದಲೇ ಹೊಂದಾಣಿಕೆಯ ಆಟ ತೋರುವುದರೊಂದಿಗೆ ಐ-ಲೀಗ್ನಲ್ಲೇ ಹೊಸ ಅಲ್ಲೆ ಎಬ್ಬಿಸಿದೆ.
ವೆಸ್ಟ್ವುಡ್ಗೆ ಗೆಲುವಿನ ಶ್ರೇಯಸ್ಸು
ತಂಡ ಇಷ್ಟೊಂದು ಬೇಗನೆ ಯಶಸ್ಸು ಕಾಣಬೇಕಾದರೆ, ಅದರ ಹಿಂದೆ ತಂಡದ ಕೋಚ್ ಆ್ಯಶ್ಲಿ ವೆಸ್ಟ್ವುಡ್ರ ಕೈಚಳಕವನ್ನು ಮರೆಯುವಂತಿಲ್ಲ. ಮ್ಯಾಂಚೆಸ್ಟರ್ ಯುನೈಟೆಡ್ ಅಕಾಡೆಮಿಯ ಮಾಜಿ ಆಟಗಾರನಾಗಿರುವ ವೆಸ್ಟ್ವುಡ್ ಬೆಂಗಳೂರು ಫುಟ್ಬಾಲ್ ಕ್ಲಬ್ನಲ್ಲಿ ತಂದ ಆಧುನಿಕ ತರಬೇತಿ ವಿಧಾನಗಳು ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲು ಪ್ರಮುಖ ಕಾರಣವಾಗಿವೆ. ಅಲ್ಲದೆ, ಡೆಂಪೋ ಫುಟ್ಬಾ ಕ್ಲಬ್ ವಿರುದ್ಧ ನಡೆದ 23ನೇ ಸುತ್ತಿನ ಮಹತ್ವದ ಪಂದ್ಯಕ್ಕೆ ನಿಷೇಧಕ್ಕೊಳಗಾಗಿದ್ದ ವೆಸ್ಟ್ವುಡ್, ಪಂದ್ಯಕ್ಕೂ ಮುನ್ನವೇ ತಂಡದ ಗೆಲುವಿಗೆ ಬೇಕಾದ ಸಕಲ ರೂಪುರೇಷೆಗಳನ್ನು ನೀಡಿದ್ದರು.
ಗೆಲುವಿನ ಹಾದಿ
ಪ್ರಸಕ್ತ ಋತುವಿನ ಒಟ್ಟು 24 ಪಂದ್ಯಗಳಲ್ಲಿ ಬೆಂಗಳೂರು ತಂಡ ಈಗಾಗಲೇ 23 ಪಂದ್ಯಗಳನ್ನಾಡಿದೆ. ಇದರಲ್ಲಿ ತವರಿನಿಂದ ಹೊರಗೆ ನಡೆದ 11 ಪಂದ್ಯಗಳಲ್ಲಿ 6ರಲ್ಲಿ ಜಯ. 5ರಲ್ಲಿ ಸೋಲು. ಇನ್ನು ತವರಿನಲ್ಲಿ ನಡೆದ 12 ಪಂದ್ಯಗಳಲ್ಲಿ 7ರಲ್ಲಿ ಜಯ, 4ರಲ್ಲಿ ಡ್ರಾ ಸಾಧಿಸಿ, 1ರಲ್ಲಿ ಸೋತಿದೆ. 24 ಸುತ್ತುಗಳ ಟೂರ್ನಿಯಲ್ಲಿ ಅತಿ ಹೆಚ್ಚು ಅಂದರೆ 44 ಅಂಕಗಳನ್ನು ಹೊಂದಿ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಅದು ಚಾಂಪಿಯನ್ ಪಟ್ಟಕೇರಿದೆ