ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮೂಡಬಿದರೆಯಲ್ಲಿ ವಿವಿ ಕೂಟ

Vishwanath S
Updated On : 26 Apr 2014, 1:10 am

ಕನ್ನಡಪ್ರಭ ವಾರ್ತೆ, ಬೆಂಗಳೂರು, ಏ. 25
ಮೂಡಬಿದರೆ ಸ್ವರಾಜ್ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಅಂತರ್ ವಿವಿ ಕ್ರೀಡಾಕೂಟ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಕ್ರೀಡಾ ಸಚಿವ ಅಭಯ್‌ಚಂದ್ರ ಜೈನ್ ಹೇಳಿದ್ದಾರೆ.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಈ ಕ್ರೀಡಾಕೂಟ ಆಯೋಜಿಸುತ್ತಿದ್ದು, ಮೂಡಬಿದರೆಯಲ್ಲಿ ಕ್ರೀಡಾ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಈ ಕ್ರೀಡಾಕೂಟ ನಡೆಯಲಿದೆ. 5 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾರ್ಯ ಆರಂಭವಾಗಿತ್ತು, ಡಿಸೆಂಬರ್ ವೇಳೆಗೆ ಮುಗಿಯಲಿದೆ ಎಂದು ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.
ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕ್ರೀಡಾಕೂಟದ ಉದ್ದೇಶಕ್ಕಾಗಿ ಮಾಡಿದ್ದಲ್ಲ. ಇದು ಶಾಶ್ವತವಾಗಿ ಇರುತ್ತದೆ. ಮೂಡಬಿದರೆಯಲ್ಲಿ ಸುಮಾರು 600 ಕ್ರೀಡಾಪಟುಗಳಿದ್ದು, ಅವರು ನಿತ್ಯ ಇದನ್ನು ಬಳಸಲಿದ್ದಾರೆ. ಮೋಹನ್ ಆಳ್ವಾ ಅವರು ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ ಕ್ರೀಡಾಪಟುಗಳನ್ನು ಉತ್ತೇಜಿಸಲು 500 ಜನರಿಗೆ ಉಚಿತ ವಸತಿ ಹಾಗೂ ಶಿಕ್ಷಣ ನೀಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿರುವ ಕ್ರೀಡಾ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪಿಯುವರೆಗೆ ಅವಕಾಶವಿರುತ್ತದೆ.  ಈವರೆಗೆ 5-8
ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿತ್ತು. ಅಲ್ಲದೆ, 70 ತರಬೇತುದಾರರ ನೇಮಕಕ್ಕೂ ಇಲಾಖೆ  ಕ್ರಮಕೈಗೊಂಡಿದೆ. ಗ್ರಾಮಕ್ಕೊಂದು ಕ್ರೀಡಾಂಗಣ ಎಂಬ ಯೋಜನೆಯನ್ನು ಕೇಂದ್ರ ಸರ್ಕಾರದ ಯೋಜನೆಯಡಿ ಅನುಷ್ಠಾನಗೊಳಿಸುವ ಉದ್ದೇಶವಿದೆ. ಪ್ರತಿ ಗ್ರಾಮಕ್ಕೆ ಒಂದು ಲಕ್ಷ ರುಪಾಯಿ ವೆಚ್ಚ ಮಾಡಲಾಗುತ್ತದೆ.
ಬೆಂಗಳೂರಿನ ವಿಜ್ಞಾನ ಶಾಲೆ ಮುಚ್ಚಲು ಅವಕಾಶ ನೀಡದೆ, ಅಭಿವೃದ್ಧಿ ಮಾಡಲಾಗುತ್ತಿದೆ. ಒಂದು ವಿಮಾನವನ್ನು ಸದ್ಯದಲ್ಲಿಯೇ ಖರೀದಿಸಲಾಗುತ್ತದೆ ಎಂದು ಜೈನ್ ವಿವರಿಸಿದರು. ಮಂಗಳೂರಿನ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಈಜುಕೊಳ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. 2.5 ಕೋಟಿ ವೆಚ್ಚ ಮಾಡಲಾಗುತ್ತಿದೆ. ಉಡುಪಿಯಲ್ಲಿ ಎರಡು ವರ್ಷದಿಂದ ಕಾಮಗಾರಿ ನಡೆಯದೆ ಉಳಿದಿದ್ದ ಈಜುಕೊಳ ನಿರ್ಮಾಣ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಮಂಗಳೂರು, ಉಡುಪಿಯಲ್ಲಿ ಸ್ಥಳೀಯ ಮೀನುಗಾರರಿಗಾಗಿ ಮೀನು ಬಂದರು ಸ್ಥಾಪಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪರಿಸರ ಇಲಾಖೆ ಅನುಮತಿ ದೊರೆತ ಮೇಲೆ ಅನುಷ್ಠಾನಗೊಳಿಸಲಾಗುತ್ತಿದೆ. ಸುಮಾರು 300 ಕೋಟಿ ವೆಚ್ಚದಲ್ಲಿ ಈ ಎರಡು ಬಂದರು ನಿರ್ಮಾಣವಾಗಲಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement