ಮೈಕೊಡವಿ ಮೇಲೇಳುವತ್ತ ಆರ್ಸಿಬಿ ಲಕ್ಷ್ಯ
ಅದುಭಾಬಿ: ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗೆಲ್ಲುವ ಉತ್ತಮ ಅವಕಾಶವನ್ನು ಹಾಳುಮಾಡಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇದೀಗ ಮುಂದಿನ ಪಂದ್ಯದಲ್ಲಿ ಮತ್ತೆ ಮೈಕೊಡವಿ ಮೇಲೇಳುವ ಗುರಿ ಹೊಂದಿದೆ.
ಅಬುಧಾಬಿಯಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಸತತ ಎರಡು ಪಂದ್ಯಗಳನ್ನು ಗೆದ್ದು ಉತ್ಸಾಹದಿಂದ ಪುಟಿಯುತ್ತಿದ್ದ ಆರ್ಸಿಬಿ ತಂಡಕ್ಕೆ ತನ್ನ ಮೂರನೇ ಪಂದ್ಯದಲ್ಲಿ ಕೋಲ್ಕತಾ ಎದುರು 151 ರನ್ಗಳ ಗುರಿ ಮುಟ್ಟಲಾಗದೇ 2 ರನ್ಗಳಿಂದ ಸೋಲು ಕಂಡಿತು. ಕೈಯಲ್ಲಿ ಇನ್ನೂ 5 ವಿಕೆಟ್ ಉಳಿಸಿಕೊಂಡಿದ್ದರೂ ಸಹ ನಿರೀಕ್ಷಿತ ಮಟ್ಟದಲ್ಲಿ ರನ್ ವೇಗ ಹೆಚ್ಚಿಸಿಕೊಳ್ಳಲಾಗದೇ ಅಂತಿಮವಾಗಿ ಗೆಲವಿನ ಹೊಸ್ತಿಲಿಗೆ ಬಂದು ಮುಗ್ಗರಿಸಿ ಬೀಳುವಂತಾಯಿತು. ಮಹತ್ವದ ಘಟ್ಟದಲ್ಲಿಯೇ ಯುವರಾಜ್ ವಿಕೆಟ್ ಉರುಳಿದ್ದು ಆರ್ಸಿಬಿ ಸೋಲಿಗೆ ಕಾರಣವಾಯಿತು. ಈ ಪಂದ್ಯದಲ್ಲಿ ಉತ್ತಮ ಪಾಠ ಕಲಿತಿರುವ ವಿರಾಟ್ ಕೊಹ್ಲಿ ಸಾರಥ್ಯದ ಆರ್ಸಿಬಿ ತಂಡ, ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದು ಮತ್ತೆ ಗೆಲವಿನ ಹಾಗಿ ಮರಳುವ ವಿಶ್ವಾಸದಲ್ಲಿದೆ.
ಕೊಹ್ಲಿ, ಯುವರಾಜ್, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಯ್ಲ್, ಅಲ್ಬಿ ಮಾರ್ಕೆಲ್ ಆರ್ಸಿಬಿಯ ಬ್ಯಾಟಿಂಗ್ ಶಕ್ತಿಯಾಗಿದ್ದರೆ, ವರುಣ್ ಆರೋನ್, ಮೊರ್ನ್, ಮಾರ್ಕೆಲ್, ಮಿಚೆಲ್ ಸ್ಕಾರ್ಟ್ ಮತ್ತು ಅಲ್ಬಿ ಪ್ರಮುಖ ಬೌಲರ್ಗಳಾಗಿದ್ದಾರೆ.
ಮತ್ತೊಂದೆಡೆ ರಾಜಸ್ಥಾನ ಪಡೆ ಕಳೆದೆರೆಡೂ ಪಂದ್ಯಗಳಲ್ಲಿ ನಿರಂತರವಾಗಿ ಸೋಲುಂಡಿದ್ದು, ಗಾಯಗೊಂಡ ಹುಲಿಯಂತಾಗಿದೆ. ಆರಂಭಿಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ರಾಜಸ್ಥಾನ ಪಡೆ, ನಂತರದ ಪಂದ್ಯಗಳಲ್ಲಿ ಪಂಜಾಬ್ ಮತ್ತು ಚೆನ್ನೈ ವಿರುದ್ಧ ಸತತ ಸೋಲನುಭವಿಸಿರುವ ರಾಜಸ್ಥಾನಕ್ಕೆ ಗೆಲವು ಅಗತ್ಯವಾಗಿದೆ.
ನಾಯಕ ಶೇನ್ ವ್ಯಾಟ್ಸನ್, ಸ್ಟುವರ್ಟ್ ಬಿನ್ನಿ, ಅಜಿಂಕ್ಯಾ ರಹಾನೆ, ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್, ರಜತ್ ಭಾಚಿಯಾ, ಜೇಮ್ಸ್ ಫಾಕ್ನರ್, ಬ್ರಾಡ್ ಹಾಡ್ಜ್, ಧವಳ್ ಕುಲಕರ್ಣಿ, ಕೆ. ರಿಚರ್ಡ್ಸ್ಸನ್ ಅವರು ರಾಜಸ್ಥಾನ ತಂಡದ ನಂಬಿಕಸತ್ತ ಆಟಗಾರರೆನಿಸಿದ್ದಾರೆ.
ಕಳೆದ ಪಂದ್ಯಗಳಲ್ಲಿನ ಸೋಲುಗಳಿಂದಾಗಿ ರಾಜಸ್ಥಾನ ಮತ್ತು ಬೆಂಗಳೂರು ಪಡೆಗಳು ಗೆದ್ದೇ ತೀರುವ ಛಲದೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿ ನಿಂತಿವೆ. ಹಾಗಾಗಿ, ಉಭಯರ ನಡುವೆ ರೋಚಕ ಹಣಾಹಣಿ ನಿರೀಕ್ಷಿಸಬಹುದಾಗಿದೆ.
ಇಂದಿನ ಪಂದ್ಯಗಳು
ರಾಜಸ್ಥಾನ ರಾಯಲ್ಸ್- ರಾಯಲ್ ಚಾಲೆಂಜರ್ಸ್ ಬೆಂಗಳೂರು
(ಸ್ಥಳ-ಅಬುಧಾಬಿ, ಸಮಯ-ಸಂಜೆ 4 ಗಂಟೆ)
ಕೋಲ್ಕತಾ ನೈಟ್ ರೈಡರ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್
(ಸ್ಥಳ-ಅಬುಧಾಬಿ, ಸಮಯ-ರಾತ್ರಿ 8 ಗಂಟೆ)