ಸಿಂಧು, ಅಶ್ವಿನಿ- ಜ್ವಾಲಾಗೆ ಪದಕ ಖಚಿತ
ಗಿಮ್ಚಾನ್ (ಕೊರಿಯಾ): ಭಾರತದ ಉದಯೋನ್ಮುಖ ಆಟಗಾರ್ತಿ ಪಿ.ವಿ. ಸಿಂಧು ಅವರು ಪ್ರತಿಷ್ಠಿತ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ತಲುಪುವುದರೊಂದಿಗೆ ಕನಿಷ್ಠ ಕಂಚಿನ ಪದಕವನ್ನು ಖಾತ್ರಿಪಡಿಸಿಕೊಂಡಿದ್ದಾರೆ.
ಆದರೆ, ಪುರುಷರ ವಿಭಾಗದಲ್ಲಿ ಭಾರತಕ್ಕೆ ಪದಕ ಗೆದ್ದು ತರುವ ಅಪಾರ ಭರವಸೆ ಮೂಡಿಸಿದ್ದ ಆರ್ಎಂವಿ ಗುರುಸಾಯಿದತ್ ಮಾತ್ರ ಕ್ವಾರ್ಟರ್ಫೈನಲ್ನಲ್ಲಿಯೇ ಪತನ ಕಾಣುವುದರೊಂದಿಗೆ ತಮ್ಮ ಆಸೆಯನ್ನು ಕೈಬಿಡಬೇಕಾಯಿತು.
ವಿಶ್ವದ 10ನೇ ಶ್ರೇಯಾಂಕಿತ ಆಟಗಾರ್ತಿ ಪಿ.ವಿ. ಸಿಂಧು, ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ನ ಒಂಗಬುಮ್ರುಂಗಪನ್ ವಿರುದ್ಧ 14-21, 21-13, 21-10 ಅಂಕಗಳಿಂದ ಜಯ ದಾಖಲಿಸಿದರು.
ಸುಮಾರು ಒಂದು ಗಂಟೆ ಆಟದಲ್ಲಿ ಸಿಂಧು, ಮೊದಲ ಗೇಮ್ ಸೋತು ಆರಂಭದಲ್ಲೇ ಹಿನ್ನಡೆ ಅನುಭವಿಸಿದ್ದರು. ಆದರೆ, ನಂತರದ ಎರಡೂ ಗೇಮ್ಗಳಲ್ಲಿ ಅದ್ಭುತ ಆಟ ಪ್ರದರ್ಶಿಸುವ ಮೂಲಕ ಅಂತಿಮ ಗೆಲವು ತಮ್ಮದಾಗಿಸಿಕೊಂಡು ಮುಂದಿನ ಸುತ್ತಿಗೆ ಹೆಜ್ಜೆ ಹಾಕಿದರು. ಆ ಮೂಲಕ ಥಾಯ್ಲೆಂಡ್ ಆಟಗಾರ್ತಿಯ ವಿರುದ್ಧದ ಒಟ್ಟಾರೆ ಮುಖಾಮುಖಿಯಲ್ಲಿ 18ರ ಸಿಂದು 3-0 ಗೆಲವಿನ ದಾಖಲೆಯೊಂದಿಗೆ ತಮ್ಮ ಯಶಸ್ವಿ ಅಭಿಯಾನವನ್ನು ಮುಂದುವರಿಸಿದರು.
ವಿಶ್ವ ಚಾಂಪಿಯನ್ಶಿಪ್ನ ಕಂಚಿನ ಪದಕ ವಿಜೇತ ಭಾರತೀಯ ಆಟಗಾರ್ತಿ, ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಶಿಕ್ಷಿಯಾನ್ ವಾಂಗ್ರನ್ನು ಎದುರಿಸಲಿದ್ದಾರೆ. ಎರಡು ಬಾರಿಯ, ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಕ್ಷಿಯಾನ್ ವಿರುದ್ಧ ಇಂಡಿಯನ್ ಓಪನ್ ಸಿರೀಸ್ನಲ್ಲಿ ಸೋಲನುಭವಿಸಿದ್ದ ಸಿಂಧುಗೆ ಇಲ್ಲಿ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶವಿದೆ.
ಪುರುಷರ ಸಿಂಗಲ್ಸ್ ಎಂಟರಘಟ್ಟದ ಪಂದ್ಯದಲ್ಲಿ ಆರ್ಎಂವಿ ಗುರುಸಾಯಿದತ್ ಅವರು ಚೀನಾದ ಲಿಯು ಕಯಿ ಅವರ ವಿರುದ್ಧ 24-22, 9-21, 13-21 ಅಂಕಗಳಿಂದ ಸೋಲನುಭವಿಸಿದರು.
ಸುಮಾರು ಒಂದು ಗಂಟೆ ಆಟದಲ್ಲಿ ಗುರುಸಾಯಿದತ್ ಮೊದಲ ಸೆಟ್ ಗೆದ್ದು ಭರ್ಜರಿ ಆರಂಭ ಪಡೆದಿದ್ದರು. ಆದರೆ, ಮುಂದಿನ ಎರಡು ಗೇಮ್ಗಳಲ್ಲಿ ಅನಗತ್ಯ ತಪ್ಪುಗಳನ್ನು ಎಸಗಿ ಎದುರಾಳಿಗೆ ಅಂಕಬಿಟ್ಟುಕೊಡುವುದರೊಂದಿಗೆ ಕೊನೆಗೆ ಸ್ಪರ್ಧೆಯಿಂದಲೇ ಹೊರಬೀಳುವಂತಾಯಿತು. ನವದೆಹಲಿಯಲ್ಲಿ ನಡೆದ 2010ರ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅಗ್ರಮಾನ್ಯ ಶಟ್ಲರ್ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದುಕೊಂಡಿದ್ದರು. ಈಗ ಅದಕ್ಕಿಂತಲೂ ಉತ್ತಮ ಸಾಧನೆ ಮಾಡುವ ಅವಕಾಶ ಸಿಂಧು ಮುಂದಿದೆ.
ಸೆಮೀಸ್ಗೆ ಅಶ್ವಿನಿ-ಜ್ವಾಲಾ
ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಜೋಡಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಸಹ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಆ ಮೂಲಕ ಕಂಚಿನ ಪದಕ ಗೆದ್ದುಕೊಳ್ಳುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಡಬಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಅಶ್ವಿನಿ ಮತ್ತು ಜ್ವಾಲಾ 21-12, 21-12 ನೇರ ಗೇಮ್ಗಳಿಂದ ಮಲೇಷಿಯಾದ ಆನ್ಸೆಲಿ ಅಮಿಲಿಯಾ ಅಲಿಸಿಯಾ ಮತ್ತು ಸೂಂಗ್ ಫೀ ಚೊ ಜೋಡಿ ವಿರುದ್ಧ ಜಯಗಳಿಸಿದರು.