ಮುಂಬೈಗೆ ಮೊದಲ ಜಯದಾಸೆ
ಶಾರ್ಜಾ: ಈವರೆಗೆ ಆಡಿದ ಎಲ್ಲ ಮೂರೂ ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ಗೆ ಮುಂದಿನ ಪಂದ್ಯದಲ್ಲಾದರೂ ಏಳನೇ ಆವೃತ್ತಿಯ ಐಪಿಎಲ್ನಲ್ಲಿ ಮೊದಲ ಗೆಲವು ದಕ್ಕುವುದೇ ಎಂಬ ಎಲ್ಲರ ನಿರೀಕ್ಷೆ ಅದರ ಮೇಲಿದೆ.
ಶಾರ್ಜಾದಲ್ಲಿ ಭಾನುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಡೆಲ್ಲಿ ಡೇರ್ಡೆವಿಲ್ಸ್ ತಂಡದ ಸವಾಲು ಎದುರಾಗಲಿದೆ.
ಡೆಲ್ಲಿ ತಂಡದ ಸ್ಥಿತಿ ಕೂಡ ಉತ್ತಮವಾಗಿಲ್ಲ. ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಜಯ ಹಾಗೂ ಮೂರು ಸೋಲುಗಳನ್ನು ಕಂಡಿರುವ ಡೇರ್ಡೆವಿಲ್ಸ್ ಸಹ ಭಾರಿ ಒತ್ತಡದಲ್ಲಿದೆ. ಈ ಒತ್ತಡವನ್ನು ನಿಭಾಯಿಸಿಕೊಂಡು ಮುನ್ನಡೆಯುವ ತಂಡಕ್ಕೆ ನಾಳೆ ವಿಜಯಲಕ್ಷ್ಮಿ ಒಲಿಯಬಲ್ಲಳು. ಗಾಯದ ಸಮಸ್ಯೆಯಿಂದ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಡೆಲ್ಲಿ ತಂಡದ ನಾಯಕ, ಕಳೆದ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಆಡಿದ್ದರೂ ವೈಫಲ್ಯ ಅನುಭವಿಸಿದ್ದರು. ಒಟ್ಟಾರೆ ತಂಡದ ಆಟಗಾರರ ಅಸ್ಥಿರ ಪ್ರದರ್ಶನದಿಂದಾಗಿ ಡೆಲ್ಲಿಗೆ ಜಯ ದೊರೆಯುವುದು ಕಷ್ಟವಾಗುತ್ತಿದೆ.
ಆರಂಭಿಕ ಆಟಗಾರರಾದ ಕಿಂಟಾನ್ ಡಿ ಕಾಕ್ ಮತ್ತು ಮುರಳಿ ವಿಜಯ್ ಬೇಗನೆ ವಿಕೆಟ್ ಕೈಚೆಲ್ಲುತ್ತಿರುವುದು ಡೆಲ್ಲಿ ಪಾಳಯದಲ್ಲಿ ದೊಡ್ಡ ಚಿಂತೆ ಉಂಟುಮಾಡಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸಹ ದಿನೇಶ್ ಕಾರ್ತಿಕ್, ಜೀನ್ಪಾಲ್ ಡುಮಿನಿ ಕೆಲವೊಮ್ಮೆ ಮಿಂಚುತ್ತಿದ್ದರೂ, ತಂಡವನ್ನು ಗೆಲವಿನ ಹಾದಿಗೆ ಕೊಂಡೊಯ್ಯಲು ವಿಫಲರಾಗಿದ್ದಾರೆ.
ಮತ್ತೊಂದೆಡೆ ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಹಾಗೂ ಮೊದಲ ಗೆಲವಿಗಾಗಿ ಹಾತೊರೆಯುತ್ತಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಟಗಾರರ ಮಧ್ಯೆ ತಾಳಮೇಳದ ಕೊರತೆಯಿದೆ. ಒಂದು ತಂಡವಾಗಿ, ಶಕ್ತಿಯಾಗಿ ಹೊರಹೊಮ್ಮುವಲ್ಲಿ ಮುಗ್ಗರಿಸುತ್ತಿರುವ ಮುಂಬೈ ತಂಡಕ್ಕೆ ಸಾಂಘಿಕಶಕ್ತಿಯ ಪ್ರದರ್ಶನದ ಅಗತ್ಯವಿದೆ.
ಇಂದಿನ ಪಂದ್ಯಗಳು
ಡೆಲ್ಲಿ ಡೇರ್ಡೆವಿಲ್ಸ್
ಮುಂಬೈ ಇಂಡಿಯನ್ಸ್
ಸ್ಥಳ: ಶಾರ್ಜಾ ಸಮಯ: ಸಂಜೆ 4 ಗಂಟೆ
ಸನ್ರೈಸರ್ಸ್ ಹೈದರಾಬಾದ್
ಚೆನ್ನೈ ಸೂಪರ್ ಕಿಂಗ್ಸ್
ಸ್ಥಳ: ಶಾರ್ಜಾ, ಸಮಯ: ರಾತ್ರಿ 8