ಸಿಂಧು, ಜ್ವಾಲಾ- ಅಶ್ವಿನಿಗೆ ಕಂಚು
ಗಿಮ್ಚಾನ್ (ಕೊರಿಯಾ): ಭಾರತದ ಶಟಲ್ ರಾಣಿಯರಾದ ಪಿ.ವಿ. ಸಿಂಧು ಹಾಗೂ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಅವರು ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿಯೇ ಮುಗ್ಗರಿಸಿ ಕಂಚಿನ ಪದಕಕ್ಕಷ್ಟೇ ತೃಪ್ತಿ ಹೊಂದಬೇಕಾಗಿದೆ.
ಉದಯೋನ್ಮುಖ ತಾರೆ 18ರ ಸಿಂಧು, ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ನಂಬರ್ ಒನ್ ಆಟಗಾರ್ತಿ ಚೀನಾದ ಶಿಕ್ಷಿಯಾನ್ ವಾಂಗ್ ವಿರುದ್ಧ 21-15, 20-22, 12-21 ಅಂಕಗಳಿಂದ ಸೋಲನುಭವಿಸಿದರು.
ಒಂದು ಗಂಟೆ 18 ನಿಮಿಷಗಳ ಕಾಲ ನಡೆದ ಕುತೂಹಲದಾಯಕವಾಗಿದ್ದ ಪಂದ್ಯದಲ್ಲಿ ಹೈದರಾಬಾದ್ ಹುಡುಗಿ ಮೊದಲ ಗೇಮ್ ಗೆದ್ದು ಭರ್ಜರಿ ಆರಂಭ ಪಡೆದಿದ್ದರು. ಆದರೆ, ನಂತರದ ಎರಡೂ ಗೇಮ್ಗಳಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಶಿಕ್ಷಿಯಾನ್ ವಾಂಗ್ ನೀಡಿದ ತಿರುಗೇಟಿನ ಮುಂದೆ ಸಿಂಧು ಬಳಿ ಉತ್ತರವಿರಲಿಲ್ಲ.
ಎರಡು ಬಾರಿಯ ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾ ಆಟಗಾರ್ತಿ ತಮ್ಮೆಲ್ಲ ಅನುಭವ ಪಣಕ್ಕಿಟ್ಟು, ಭಾರತೀಯ ಆಟಗಾರ್ತಿಯ ಸವಾಲನ್ನು ಹತ್ತಿಕ್ಕುವಲ್ಲಿ ಸಫಲರಾಗಿ ಫೈನಲ್ ಕದನಕ್ಕೆ ಮುಂದಡಿ ಇಟ್ಟರು.
ಒಂದು ಗಂಟೆ 18 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು ಕೂಡ ಉತ್ತಮ ಹೋರಾಟವನ್ನೇ ನಡೆಸಿದರು. ಆದರೂ ಸಹ ಶಿಕ್ಷಿಯಾನ್ರ ಅನುಭವದಾಟದ ಮುಂದೆ ಅಂತಿಮವಾಗಿ ತಲೆಬಾಗಿಸದೇ ವಿಧಿ ಇರಲಿಲ್ಲ.
ಈ ಹಿಂದೆ ಬ್ಯಾಡ್ಮಿಂಟನ್ ಅಖಾಡದಲ್ಲಿ ಸಿಂಧು ಮೂರು ಬಾರಿ ಶಿಕ್ಷಿಯಾನ್ ವಿರುದ್ಧ ಗೆಲವು ಸಾಧಿಸಿದ್ದಾರೆ. ಆದರೆ, ಕಳೆದ ಎರಡು ಮುಖಾಮುಖಿಯಲ್ಲಿ ಗೆಲವಿನ ನಗೆ ಬೀರಿದ್ದ ವಿಶ್ವದ ಎರಡನೇ ಕ್ರಮಾಂಕದ ಚೀನಾ ಆಟಗಾರ್ತಿ ಇಲ್ಲಿಯೂ ಸಿಂಧು ಅವರನ್ನು ಮಣಿಸುವಲ್ಲಿ ಸಫಲರಾದರು.
ಒಟ್ಟಾರೆ ಈ ಟೂರ್ನಿಯಲ್ಲಿ ಸಿಂಧು ಪ್ರದರ್ಶನ ಉತ್ತಮವಾಗಿದೆ. ಅತ್ಯುತ್ತಮ ಆಟವನ್ನೇ ಪ್ರದರ್ಶಿಸಿದ್ದಾರೆ. ಶಿಕ್ಷಿಯಾನ್ ವಿರುದ್ಧ ಗೆಲ್ಲುವ ಹಂತದಲ್ಲಿದ್ದಾಗಲೇ ಅಂಕ ಕಳೆದುಕೊಂಡು ಕೊನೆಗೆ ಸೋಲನುಭವಿಸಬೇಕಾಯಿತು. ಆಕೆಯ ಪ್ರದರ್ಶನ ತಮಗೆ ತೃಪ್ತಿ ನೀಡಿದೆ ಎಂದು ರಾಷ್ಟ್ರೀಯ ಕೋಚ್ ಪುಲ್ಲೇಲ ಗೋಪಿಚಂದ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಜ್ವಾಲಾ-ಅಶ್ವಿನಿಗೆ ಭಾರಿ ನಿರಾಸೆ: ಇಂದೇ ನಡೆದ ಮಹಿಳೆಯರ ಡಬಲ್ಸ್ ಸೆಮಿಫೈನಲ್ನಲ್ಲಿ ಕೂಡ ಭಾರತಕ್ಕೆ ಭಾರಿ ನಿರಾಸೆ ಕಾದಿತ್ತು.
ತವರಿನ ಶ್ರೇಷ್ಠ ಜೋಡಿ ಎನಿಸಿರುವ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಅವರು 12-21, 7-21 ನೇರ ಅಂಕಗಳಿಂದ ಚೀನಾದ ಲುವೊ ಯೂ ಮತ್ತು ಲುವೊ ಯಿಂಗ್ ಎದುರು ತಲೆಬಾಗಿಸಿದರು. ಆ ಮೂಲಕ ಚಿನ್ನದ ಪದಕದ ಆಸೆ ಕೈಬಿಟ್ಟು ಕಂಚಿನ ಪದಕಕ್ಕೆ ಮಾತ್ರ ತೃಪ್ತಿ ಹೊಂದಬೇಕಾಯಿತು.
ವಿಶ್ವದ 10ನೇ ಶ್ರೇಯಾಂಕಿತ ಚೀನಾದ ಜೋಡಿ ಎರಡೂ ಗೇಮ್ಗಳಲ್ಲಿ ಭಾರತದ ಜೋಡಿಗೆ ಮೈಕೊಡವಿ ಮೇಲೇಳಲು ಅವಕಾಶ ನೀಡಲಿಲ್ಲ.
ವಿಶ್ವದ 13ನೇ ಶ್ರೇಯಾಂಕಿತ ಜ್ವಾಲಾ ಮತ್ತು ಅಶ್ವಿನಿ ಸುಮಾರು 33 ನಿಮಿಷಗಳ ಆಟದಲ್ಲಿಯೇ ಸೋಲೊಪ್ಪಿಕೊಂಡರು.
ಈ ಜೋಡಿಯ ಮೇಲೆ ಫೈನಲ್ ಪ್ರವೇಶಿಸುವ ನಿರೀಕ್ಷೆ ಹೆಚ್ಚಿತ್ತು. ಏಕೆಂದರೆ ಟೂರ್ನಿಯುದ್ದಕ್ಕೂ ಅದ್ಭುತ ಆಟ ಪ್ರದರ್ಶಿಸುತ್ತ ಬಂದಿದ್ದ ಜ್ವಾಲಾ ಮತ್ತು ಅಶ್ವಿನಿ ಉತ್ತಮ ಹೊಂದಾಣಿಕೆ ಹೊಂದಿದ್ದರು. ಆದರೆ, ಭಾರತದ ಜೋಡಿಯ ಆಕ್ರಮಣಕಾರಿ ಆಟಕ್ಕೆ ಚಾಣಾಕ್ಷತನದ ಉತ್ತರ ನೀಡುವ ಮೂಲಕ ಜ್ವಾಲಾ-ಅಶ್ವಿನಿ ಕನಸು ಭಗ್ನಗೊಳಿಸಿದರು.