ಪಡುವಂಡ, ಕುತ್ತಂಡ ರೋಚಕ ಮುನ್ನಡೆ
ವಿರಾಜಪೇಟೆ: ತಾತಂಡ ಹಾಕಿ ಕಪ್ ಪಂದ್ಯಾವಳಿಯ 8ನೇ ದಿನ ಭಾನುವಾರದ ಮುಖಾಮುಖಿಯಲ್ಲಿ 14 ತಂಡಗಳು ಮುನ್ನಡೆ ಸಾಧಿಸಿವೆ.
1ನೇ ಮೈದಾನ: ಮೈದಾನ 1ರಲ್ಲಿ ನಡೆದ ಪಂದ್ಯದಲ್ಲಿ ಪಡುವಂಡ ಮತ್ತು ಮಾಣಿದ ತಂಡಗಳು ಬೆಳಗ್ಗಿನ ಸಮಯದಲ್ಲಿ ಉತ್ತಮ ಪ್ರದರ್ಶನ ಪ್ರೇಕ್ಷಕರು ಹುಬ್ಬೇರುವಂತೆ ಮಾಡಿದವು. ಎರಡು ತಂಡಗಳು ಪಂದ್ಯದ ಅಂತಿಮ ಹಂತದವರೆಗೆ 1-1 ಸಮಬಲ ಸಾಧಿಸಿದ್ದವು. ಆದರೆ ಸಡನ್ಡೆತ್ನಲ್ಲಿ ಪಡುವಂಡ ತಂಡ 1 ಗೋಲು ಗಳಿಸಿ ಜಯದ ಮಾಲೆ ತನ್ನ ಕೊರಳಿಗೇರಿಸಿಕೊಂಡಿತು.
ತೀವ್ರ ಹಣಾಹಣಿ: ಭಾರಿ ಪೈಪೋಟಿಯಿಂದ ಕೂಡಿದ್ದ ಕುಟ್ಟಂಡ ಕಾರ್ನಾಡು ಮತ್ತು ತನ್ನುವಂಡ ತಂಡಗಳ ನಡುವಿನ ಪಂದ್ಯದಲ್ಲಿ ಇತ್ತಂಡಗಳು 2-2 ಸಮಬಲ ಸಾಧಿಸಿದವು. ಕೊನೆಯಲ್ಲಿ ಟೈಬ್ರೇಕರ್ನಲ್ಲಿ ಕುಟ್ಟಂಡ ತಂಡ ಪೊನ್ನುವಂಡ ತಂಡಗಳಿಂದ 4-2 ಗೋಲುಗಳಿಂದ ಮಣಿಸಿತು. ಮುಂದಿನ ಪಂದ್ಯದಲ್ಲಿ ಪಾಲೇಖಂಡ ತಂಡದ ಭರ್ಜರಿ ಪ್ರದರ್ಶನದ ಮುಂದೆ ಚೆನ್ನಪಂಡ ತಂಡ ಮಂಕಾಯಿತು.
ಪೇರರ ತಂಡ ಮುಲ್ಲಂಡ(ಚೆಟ್ಟಳ್ಳಿ) ತಂಡವನ್ನು 4-1 ಗೋಲುಗಳಿಂದ ಮಣಿಸಿತು. ಬಳಿಕ ನಡೆದ ಪಂದ್ಯದಲ್ಲಿ ಪಂದ್ಯೇಟಿರ ತಂಡ ನನ್ನವಂಡ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು.
ಪುಡ್ರಂಡ ಮತ್ತು ಮಲ್ಲಚಿರ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಚಿರ ತಂಡ 5-1 ಗೋಲುಗಳ ಅಂತರದಿಂದ ಜಯ ದಾಖಲಿಸಿತು.
ಸುಲಭ ಜಯ: ಚೋಯಮಂಡ ಮತ್ತು ಕೋಚಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೋಯಮಂಡ ತಂಡ 4-0 ಗೋಲುಗಳ ಅಂತರದಿಂದ ಜಯ ದಾಖಲಿಸಿತು.
2ನೇ ಮೈದಾನದಲ್ಲಿ ನಡೆದ ಪುಲ್ಲಂಗಡ ಮತ್ತು ಸೋಮಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಸೋಮಯಂಡ ತಂಡದ ಪರವಾಗಿ ಸಂಜು ಅಪ್ಪಯ್ಯನವರು ಉತ್ತಮ ಪ್ರದರ್ಶನ ನೀಡಿ ತಂಡ ಜಯ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸೋಮಯಂಡ ತಂಡ 4-1 ಗೋಲುಗಳ ಅಂತರದಿಂದ ಜಯ ದಾಖಲಿಸಿತು. ಚಂದುರ ಮತ್ತು ಚಂಬಂಡ ತಂಡಗಳ ನಡುವಿನ ಪಂದ್ಯದಲ್ಲಿ ಚಂದುರ ತಂಡವು ಚಂಬಂಡ ತಂಡವನ್ನು 5-0 ಗೋಲುಗಳಿಂದ ಮಣಿಸಿತು. ಕಂಬೆಯಂಡ ಮತ್ತು ಮುಕ್ಕಾಟಿರ (ಡೇ 3) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡ ಕಂಬೆಯಂಡ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿತು.
ಮುಂದಿನ ಮುಂಡಿಯವಳಂಡ ಮತ್ತು ಐಚಿಟ್ಟೀರ ನಡುವಿನ ಪಂದ್ಯದಲ್ಲಿ ಮುಂಡಿಯವಳಂಡ ತಂಡ 4-0 ಗೋಲುಗಳ ಅಂತರದಿಂದ ಸೋಲಿಸಿತು.
ಪತ್ತಡ ಉತ್ತಮ ಪ್ರದರ್ಶನ: ಪೊಲ್ಲಂಡ ಮತ್ತು ಪತ್ತಡ ನಡುವಿನ ಪಂದ್ಯದಲ್ಲಿ ಪತ್ತಡ ತಂಡ ಉತ್ತಮ ಪ್ರದರ್ಶನ ನೀಡಿ, ಪೊಲ್ಲಂಡ ತಂಡವನ್ನು 5-1 ಅಂತರದಿಂದ ಮಣಿಸಿತು. ಪೊಲ್ಲೇರ ಮತ್ತು ಮುಲ್ಲೇರ ನಡುವಿನ ಪಂದ್ಯದಲ್ಲಿ ಮುಲ್ಲೇರ ತಂಡ 4-1 ಅಂತರದಿಂದ ವಿಜಯ ಸಾಧಿಸಿತು. ಪೊಲ್ಲೇರ ತಂಡದ ಪರವಾಗಿ ಸ್ಕ್ಯಾಟಿ ಮಂದಣ್ಣ 2 ಗೋಲು ದಾಖಲಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.