ಮ್ಯಾಕ್ಸ್ವೆಲ್, ಮಿಲ್ಲರ್ ಆರ್ಸಿಬಿಗೆ ಅಪಾಯ
ದುಬೈ: ಕಳೆದ ಎರಡು ಪಂದ್ಯಗಳಲ್ಲಿ ಅವಮಾನಕಾರಿ ರೀತಿಯಲ್ಲಿ ಸೋಲಿನ ಕಹಿ ಉಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಐಪಿಎಲ್ ಟೂರ್ನಿಯ ಮುಂದಿನ ಪಂದ್ಯದಲ್ಲಿ ಮತ್ತೆ ಗೆಲವಿನ ಹಾದಿಗೆ ಮರಳಬೇಕೆನ್ನುವ ಚಿಂತನೆಯಲ್ಲಿದ್ದಾರೆ.
ಸೋಮವಾರ ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ. ಈವರೆಗೆ ಆಡಿರುವ ಎಲ್ಲ ನಾಲ್ಕೂ ಪಂದ್ಯಗಳನ್ನು ನಿರಂತರವಾಗಿ ಗೆದ್ದು, ಸದ್ಯ ಅಂಕಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.
ಪಂಜಾಬ್ ಮುನ್ನುಗ್ಗುತ್ತಿರುವ ರೀತಿ ನೋಡಿದರೆ, ಆರ್ಸಿಬಿ ಮುಂದೆ ಮತ್ತೊಂದು ದೊಡ್ಡ ಸವಾಲು ಎದುರಿಗಿರುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಆ ತಂಡದ ಅಪಾಯಕಾರಿ ಬ್ಯಾಟ್ಸ್ಮನ್ಗಳಾದ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಡೇವಿಡ್ ಮಿಲ್ಲರ್, ಸ್ಫೋಟಕ ಬ್ಯಾಟಿಂಗ್ ಮೂಲಕ ರನ್ ಹೊಳೆಯನ್ನೇ ಹರಿಸುತ್ತಿರುವುದನ್ನು ನೋಡಿ ಎದುರಾಳಿ ಪಡೆಗಳು ಬೌಲರ್ಗಳು ನಡುಕ ಹುಟ್ಟಿದೆ.
ಕಳೆದ ಪಂದ್ಯದಲ್ಲಿ ಆರ್ಸಿಬಿ ತಂಡ ರಾಜಸ್ಥಾನ ರಾಯಲ್ಸ್ ಎದುರು ಕೇವಲ 70 ರನ್ಗಳಿಗೆ ಆಲೌಟಾಗಿದ್ದು ಅಚ್ಚರಿ ಎನಿಸಿತು. ಇದು ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಅತಿ ಕಡಿಮೆ ಹಾಗೂ ಐಪಿಎಲ್ ಇತಿಹಾಸದಲ್ಲಿ ಮೂರನೇ ಅತ್ಯಲ್ಪ ಮೊತ್ತವಾಗಿದೆ.
ಪಂದ್ಯಗಳು ಉರುಳಿದಂತೆ ಆರ್ಸಿಬಿ ಪಾಳಯದಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ ಕ್ರಿಸ್ ಗೇಯ್ಲ್ ಅನುಪಸ್ಥಿತಿ ಎದ್ದುಕಾಣತೊಡಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ಅವರು ಈವರೆಗೆ ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಲು ಅಖಾಡಕ್ಕೆ ಧುಮುಕಿಲ್ಲ. ಗೇಯ್ಲ್ ಯಾವಾಗ ಲಭ್ಯರಾಗುತ್ತಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ಕಿಂಗ್ಸ್ ಪಂಜಾಬ್ ಭರ್ಜರಿ ಆರಂಭ ಪಡೆದಿದೆ. ಇದೀಗ ಸತತ ಐದನೇ ಗೆಲವಿನ ನಿರೀಕ್ಷೆಯಲ್ಲಿರುವ ಪಂಜಾಬ್ಗೆ ಮ್ಯಾಕ್ಸ್ವೆಲ್ ಮತ್ತು ಮಿಲ್ಲರ್ರ ಶ್ರೀರಕ್ಷೆ ಇದೆ. ಕಳೆದ ಪಂದ್ಯದಲ್ಲಿ ವೀರೇಂದ್ರ ಸೆಹವಾಗ್ ಫಾರ್ಮ್ಗೆ ಮರಳಿದ್ದು ಮತ್ತೊಂದು ಪ್ಲಸ್ ಪಾಯಿಂಟ್
ಪಂದ್ಯ ಆರಂಭ: ರಾತ್ರಿ 8 ಗಂಟೆ