ಅನ್ನಾಡಿಯಂಡ, ತಾತಂಡಕ್ಕೆ ಜಯ
ವಿರಾಜಪೇಟೆ: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಕಪ್ ಹಾಕಿ ಪಂದ್ಯಾವಳಿಯ 9ನೇ ದಿನ ಅನ್ನಾಡಿಯಂಡ, ನೆಲ್ಲಮಕ್ಕಡ, ತಾತಂಡ ಸೇರಿದಂತೆ 13 ತಂಡಗಳು ಜಯ ಗಳಿಸಿ ಮುನ್ನಡೆ ಸಾಧಿಸಿದವು.
1ನೇ ಮೈದಾನದಲ್ಲಿ ನಡೆದ ನೆಲ್ಲಚಂಡ ಮತ್ತು ಅನ್ನಾಡಿಯಂಡ ತಂಡಗಳ ನಡುವೆ ನಡೆದ ತಂಡ ಅನ್ನಾಡಿಯಂಡ 4-1 ಗೋಲುಗಳ ಅಂತರದಿಂದ ಭರ್ಜರಿ ವಿಜಯ ಸಾಧಿಸಿತು. ಅನ್ನಾಡಿಯಂಡ ತಂಡದಲ್ಲಿ 57 ವರ್ಷದ ದಿಲೀಪ್ ಮತ್ತು ಮಂದಣ್ಣ ಭಾಗವಹಿಸಿ ಕ್ರೀಡೋತ್ಸಾಹ ಮೆರೆದದ್ದು ವಿಶೇಷವಾಗಿತ್ತು. ಅನ್ನಾಡಿಯಂಡ ತಂಡದ ಪರ ನಾಚಪ್ಪ 2 ಗೋಲು ಗಳಿಸಿದರೆ, ಬಿಪಿನ್ ಸೋಮಣ್ಣ ಮತ್ತು ಧರ್ಮಣ್ಣ ತಲಾ 1 ಗೋಲು ಬಾರಿಸಿದರು.
ನೆಲ್ಲಚಂಡ ಪರವಾಗಿ ದಾಖಲಾದ ಏಕೈಕ ಗೋಲನ್ನು ಗಣಪತಿ ಹೊಡೆದರು.
ಆತಿಥೇಯ ತಾತಂಡ ತಂಡ ಉದಿಯಂಡ ತಂಡವನ್ನು 3-0 ನೇರ ಗೋಲುಗಳಿಂದ ಸೋಲಿಸಿ ಜಯಗಳಿಸಿತು. ತಾತಂಡದ ರಕ್ಷಿತ್ ಬೋಪಣ್ಣ 2 ಗೋಲು ಗಳಿಸಿ ಮಿಂಚಿದರೆ, ಶರತ್ 1 ಗೋಲು ಬಾರಿಸಿ ತಂಡದ ಗೆಲುವಿನ ಅಂತರ ಹೆಚ್ಚಿಸುವಲ್ಲಿ ನೆರವಾದರು.
ನೆರವಂಡ ಮತ್ತು ಕಾಂತಂಡ ತಂಡಗಳ ನಡುವಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ಇತ್ತಂಡಗಳೂ 1-1 ಸಮಬಲ ಸಾಧಿಸಿದ ಕಾರಣ ಟ್ರೈಬ್ರೇಕರ್ನಲ್ಲಿ 4-3 ಗೋಲುಗಳ ಮುನ್ನಡೆ ಗಳಿಸಿದ ನೆರವಂಡ ಗೆಲುವಿನ ನಗೆ ಬೀರಿತು. ನೆರವಂಡ ತಂಡದ ಪರವಾಗಿ ಪ್ರವೀಣ್ 1 ಗೋಲು ಮತ್ತು ಕಾಂತಂಡ ತಂಡದ ಪರ ಪೊಣ್ಣಪ್ಪ 1 ಗೋಲು ಗಳಿಸುವಲ್ಲಿ ಸಫಲರಾದರು.