ಆರ್ಸಿಬಿ ಮತ್ತೆ ಪರೇಡ್
ವೀರೇಂದ್ರ ಸೆಹ್ವಾಗ್ ಜಾಗರೂಕ ಮತ್ತು ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ...
ದುಬೈ: ವೀರೇಂದ್ರ ಸೆಹ್ವಾಗ್ ಜಾಗರೂಕ ಮತ್ತು ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 5 ವಿಕೆಟ್ ಅಂತರದಿಂದ ಜಯ ಕಂಡುಕೊಂಡಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಂಜಾಬ್, ತನ್ನ ಸಮರ್ಥವಾದ ಬೌಲಿಂಗ್ ನೆರವಿನೊಂದಿಗೆ ಬೆಂಗಳೂರು ತಂಡವನ್ನು ಕೇವಲ 124 ರನ್ಗಳಿಗೆ ನಿಯಂತ್ರಿಸಿತು. ನಂತರ ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ನಷ್ಠಕ್ಕೆ 127 ರನ್ ಗಳಿಸಿ ಜಯದ ಸಂಭ್ರಮ ಆಚರಿಸಿತು. ವೀರೇಂದ್ರ ಸೆಹ್ವಾಗ್ (32) ಮತ್ತು ಡೇವಿಡ್ ಮಿಲ್ಲರ್ (26) ಪಂಜಾಬ್ ಗೆಲವಿಗೆ ಆಸರೆಯಾದರು. ಇಬ್ಬರ ಜತೆಯಾಟದಲ್ಲಿ 4ನೇ ವಿಕೆಟ್ಗೆ 45 ರನ್ಗಳಿಸಿದ್ದು, ತಂಡ ಜಯದ ಗುರಿ ಸೇರಲು ನೆರವಾಯಿತು. ಅಲ್ಲದೆ, ಕೆಳ ಕ್ರಮಾಂಕದಲ್ಲಿ ರಿಶಿ ಧವನ್ (ಅಜೇಯ 23) ಕೊಂಚ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಬೆಂಗಳೂರು ತಂಡದ ಪರ ವರುಣ್ ಆರೋನ್ ಮತ್ತು ಯಜ್ವೇಂದರ್ ಚಾಹಾಲ್ ತಲಾ 2 ವಿಕೆಟ್ ಕಬಳಿಸಿದರೆ, ಅಶೋಕ್ ದಿಂಡಾ 1 ವಿಕೆಟ್ ಪಡೆದರು.
ನಿರೀಕ್ಷೆ ಹುಸಿಯಾಗಿಸಿದ ಗೇಯ್ಲ್: ಆರ್ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡ್ ಆಟಗಾರ ಯುವರಾಜ್ ಸಿಂಗ್ (35) ಮಾತ್ರ ಕೊಂಚ ತಕ್ಕ ಬ್ಯಾಟಿಂಗ್ ಪ್ರದರ್ಶಿಸಿದರು. ಬಿಟ್ಟರೆ, ಆರಂಭಿಕ ಆಟಗಾರ ಕ್ರಿಸ್ ಗೇಯ್ಲ್ ಗುಡುಗುತ್ತಿದ್ದಂತೆಯೇ ಸಂದೀಪ್ ಶರ್ಮಾ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಇದರೊಂಗೆ ಬೆನ್ನು ನೋವಿನ ಹಿನ್ನೆಲೆಯಲ್ಲಿ ಕಳೆದ ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದ ಗೇಯ್ಲ್, ಈ ಪಂದ್ಯದಲ್ಲಿ ಆರ್ಸಿಬಿಗೆ ಆಸರೆಯಾಗಲಿದ್ದಾರೆ ಎಂಬ ನಂಬಿಕೆ ಸುಳ್ಳಾಯಿತು. ಕಳೆದ ಎರಡು ಪಂದ್ಯಗಳಲ್ಲಿ ಆರ್ಸಿಬಿ ಸೋತಾಗ, ಗೇಯ್ಲ್ ಅಲಭ್ಯವೇ ಬೆಂಗಳೂರು ಸೋಲಿಗೆ ಪ್ರಮುಖ ಕಾರಣ ಎನ್ನಲಾಗಿತ್ತು. ಆದರೆ, ಅಂತಿಮವಾಗಿ 5ನೇ ಪಂದ್ಯದಲ್ಲಿ ಅಂಗಣಕ್ಕಿಳಿದಿದ್ದ ಗೇಯ್ಲ್ ತಮ್ಮ ಮೇಲೆ ಇಟ್ಟಿದ್ದ ಭರವಸೆ ಹುಸಿಯಾಗಿಸಿ, ತಂಡದ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ನಂತರ ಬಂದ ಇತರ ಬ್ಯಾಟ್ಸ್ಮನ್ಗಳು ಜವಾಬ್ದಾರಿಯುತ ಪ್ರದರ್ಶನ ನೀಡದೆ, ಹೀಗೆ ಬಂದು ಹಾಗೆ ಪೆವಿಲಿಯನ್ ಸೇರಿಕೊಂಡರು.
ಕಿಂಗ್ಸ್ ಇಲೆವನ್ ಪಂಜಾಬ್ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಸಂದೀಪ್ ಶರ್ಮಾ, ಪಂದ್ಯದ ಎರಡನೇ ಓವರ್ನ 2ನೇ ಎಸೆತದಲ್ಲೇ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಯ್ಲ್ ವಿಕೆಟ್ ಪಡೆಯುವ ಮೂಲಕ ದೊಡ್ಡ ಆಘಾತವನ್ನೇ ನೀಡಿದರು. ನಂತರ ಅದೇ ಓವರ್ನ 4ನೇ ಎಸೆತದಲ್ಲಿ ಇನ್ನೊಬ್ಬ ಭರವಸೆಯ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸುವಲ್ಲಿ ಸಂದೀಪ್ ಯಶಸ್ವಿಯಾಗಿದ್ದು, ಬೆಂಗಳೂರಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು.
ನಂತರ ಇದೇ ಮಾದರಿಯ ಬೌಲಿಂಗ್ ದಾಳಿಯನ್ನು ಮುಂದುವರಿಸಿದ ಸಂದೀಪ್ 3ನೇ ಓವರ್ನ ಕೊನೆಯ ಎಸೆತದಲ್ಲಿ ಯೋಗೇಶ್ ಟಾಕಾವಾಲೆ ವಿಕೆಟ್ ಕಬಳಿಸಿ, ಆರ್ಸಿಬಿ ಅಗ್ರ ಕ್ರಮಾಂಕವನ್ನು ಧೂಳಿಪಟ ಮಾಡಿದರು.
ಸಂದೀಪ್ ಮೂರು ವಿಕೆಟ್ ಪಡೆದರೆ, ಮಿಚೆಲ್ ಜಾನ್ಸನ್ ಮತ್ತು ರಿಶಿ ಧವನ್ ತಲಾ 2 ವಿಕೆಟ್ ಪಡೆದರು. ಇನ್ನು ಲಕ್ಷ್ಮೀಪತಿ ಬಾಲಾಜಿ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 8 ವಿಕೆಟ್ಗೆ 124
ಕ್ರಿಸ್ ಗೇಯ್ಲ್ ಬಿ ಸಂದೀಪ್ 20 (7), ಪಾರ್ಥೀವ್ ಸ್ಟಂಪ್ ಸಾಹಾ ಬಿ ಸಂದೀಪ್ 2 (7), ವಿರಾಟ್ ಕೊಹ್ಲಿ ಎಲ್ಬಿ ಸಂದೀಪ್ 4 (2), ಯೋಗೇಶ್ ಟಾಕಾವಾಲೆ ಸಿ ಸಾಹಾ ಬಿ ಜಾನ್ಸನ್ 0 (7), ಡಿವಿಲಿಯರ್ಸ್ ಸಿ ಮ್ಯಾಕ್ಸ್ವೆಲ್ ಬಿ ಧವನ್ 17 (15), ಯುವರಾಜ್ ಸಿಂಗ್ ಸಿ ಮಿಲ್ಲರ್ ಬಿ ಧವನ್ 35 (32), ಅಲ್ಬೀ ಮಾರ್ಕೆಲ್ ಬಿ ಬಾಲಾಜಿ 15 (14), ಮಿಚೆಲ್ ಸ್ಟಾರ್ಕ್ ಬಿ ಜಾನ್ಸನ್ 8 (17), ವರುಣ್ ಆರೋನ್ ಅಜೇಯ 11 (15), ಅಶೋಕ್ ದಿಂಡಾ ಅಜೇಯ 2 (5)
ಇತರೆ: (ಲೆಗ್ಬೈ-9, ನೋಬಾಲ್-1) 10
ವಿಕೆಟ್ ಪತನ: 1-21, 2-25, 3-26, 4-26, 5-67, 6-93, 7-97, 8-120
ಬೌಲಿಂಗ್ ವಿವರ
ಗ್ಲೆನ್ ಮ್ಯಾಕ್ಸ್ವೆಲ್ 3-0-39-0, ಸಂದೀಪ್ ಶರ್ಮಾ 3-1-15-3, ಮಿಚೆಲ್ ಜಾನ್ಸನ್ 4-0-19-2, ಲಕ್ಷ್ಮೀಪತಿ ಬಾಲಾಜಿ 4-0-17-1, ಅಕ್ಷರ ಪಟೇಲ್ 2-0-11-0, ರಿಶಿ ಧವನ್ 4-0-14-2
ಕಿಂಗ್ಸ್ ಇಲೆವೆನ್ ಪಂಜಾಬ್ 18.5 ಓವರ್ಗಳಲ್ಲಿ 5 ವಿಕೆಟ್ಗೆ 127
ಚೇತೇಶ್ವರ ಪೂಜಾರ ಸಿ ಪಟೇಲ್ ಬಿ ದಿಂಡಾ 10 (18), ವೀರೇಂದ್ರ ಸೆಹ್ವಾಗ್ ಸಿ ಪಟೇಲ್ ಬಿ ಚಹಾಲ್ 32 (26), ವೃದ್ಧಿಮಾನ್ ಸಾಹಾ ಸಿ ಸ್ಟಾರ್ಕ್ ಬಿ ಆರೋನ್ 2 (6), ಗ್ಲೆನ್ ಮ್ಯಾಕ್ಸ್ವೆಲ್ ಸಿ ಸ್ಟಾರ್ಕ್ ಬಿ ಆರೋನ್ 6 (6), ಡೇವಿಡ್ ಮಿಲ್ಲರ್ ಸಿ ಪಟೇಲ್ ಬಿ ಚಹಾಲ್ 26 (20), ಜಾರ್ಜ್ ಬೇಯ್ಲಿ ಅಜೇಯ 16 (16), ರಿಶಿ ಧವನ್ ಅಜೇಯ 23 (22)
ಇತರೆ: (ಎಲ್ಬಿ-4, ವೈಡ್-7, ನೋಬಾಲ್-1) 12
ವಿಕೆಟ್ ಪತನ: 1-22, 2-33, 3-40, 4-85, 5-88.
ಬೌಲಿಂಗ್ ವಿವರ
ಮಿಚೆಲ್ ಸ್ಟಾರ್ಕ್ 4-0-15-0, ಅಲ್ಬೀ ಮಾರ್ಕೆಲ್ 2-0-24-0, ವರುಣ್ ಆರೋನ್ 3.5-0-29-2, ಅಶೋಕ್ ದಿಂಡಾ 3-0-19-1, ಯಜುವೇಂದ್ರ ಚಹಾಲ್ 4-0-23-2, ಯುವರಾಜ್ ಸಿಂಗ್ 2-0-13-0