ಬರ್ಲಿನ್ ಈಜಿನಲ್ಲಿ ರಾಜ್ಯದ ಶರತ್ ಗಾಯಕ್ವಾಡ್‌ಗೆ ಮೂರು ಪದಕ
ಬೆಂಗಳೂರು: ಪ್ಯಾರಾಲಿಂಪಿಯನ್ ಈಜುಪಟು ಕರ್ನಾಟಕದ ಶರತ್ ಗಾಯಕ್ವಾಡ್ ಅವರು, ಬರ್ಲಿನ್ ಓಪನ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಒಂದು ವಾರ ಕಾಲ ನಡೆದ ಚಾಂಪಿಯನ್‌ಶಿಪ್‌ನ ಎಸ್8 ವಿಭಾಗದಲ್ಲಿ ಗಾಯಕ್ವಾಡ್ ಅದ್ಭುತ ಸಾಧನೆ ಮಾಡಿದ್ದಾರೆ. 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ 2:44.06 ಅವಧಿಯಲ್ಲಿ ಗುರಿ ಸೇರಿದ ಶರತ್ ಗಾಯಕ್ವಾಡ್, 100 ಮೀ. ಬಟರ್‌ಫ್ಲೈನಲ್ಲಿ 1:09.67 ಅವಧಿಯಲ್ಲಿ ಗುರಿ ಸೇರಿ ಎರಡು ಕಂಚಿನ ಪದಕ ಗೆದ್ದುಕೊಂಡರು.
100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ವಿಭಾದಲ್ಲಿ 1:19.97 ಅವಧಿಯಲ್ಲಿ ಗುರಿ ಸೇರುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡರು. ಈ ವಿಭಾಗದಲ್ಲಿ ಅವರು ಇನ್ನೆರಡು ನಿಮಿಷ ಬೇಗ ತಲುಪಿದ್ದರೇ, ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ (1:18.20) ತಾವೇ ನಿರ್ಮಿಸಿದ್ದ ವೈಯಕ್ತಿಕ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆಯುತ್ತಿದ್ದರು. 400 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ 5:42.20 ಗುರಿ ಸೇರಿದ ಶರತ್, 50 ಮೀಟರ್ ಫ್ರೀಸ್ಟೈಲ್‌ನಲ್ಲಿ 0:30.53 ಅವಧಿಯಲ್ಲಿ ಮತ್ತು 100 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ 01:21.66 ಅವಧಿಯಲ್ಲಿ ಗುರಿ ಸೇರಿ 6ನೇ ಸ್ಥಾನ ಪಡೆದುಕೊಂಡರು. ಇನ್ನು 100 ಮೀಟರ್ ಫ್ರೀಸ್ಟೈಲ್‌ನಲ್ಲಿ 7ನೇ ಸ್ಥಾನ ಪಡೆದರು. ಇದರೊಂದಿಗೆ ಶರತ್ ಏಷ್ಯನ್ ಪ್ಯಾರಾ ಗೇಮ್ಸ್‌ಗೆ ಅರ್ಹತೆ ಪಡೆದರು.