ವನಿತೆಯರಿಗೆ ಆರಂಭದಲ್ಲೇ ಸೋಲು
ಗ್ಲಾಸ್ಗೊ: ಭಾರತದ ವನಿತೆಯರು ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ಆರಂಭವಾದ ಚಾಂಪಿಯನ್ಸ್ ಚಾಲೆಂಜ್-1 ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಲು ವಿಫಲರಾಗಿದ್ದಾರೆ. ಚಾಂಪಿಯನ್‌ಶಿಪ್‌ನ 'ಎ' ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಭಾರತದ ಮಹಿಳೆಯರು 2-4 ಗೋಲುಗಳಿಂದ ಕೊರಿಯಾ ತಂಡದ ವಿರುದ್ಧ ಸೋಲನುಭವಿಸಿದರು.
ಭಾರತ ತಂಡ ಪ್ರಥಮಾರ್ಧದ 12ನೇ ನಿಮಿಷದಲ್ಲಿಯೇ ವಂದನಾ ಕತಾರಿಯಾ ಮೂಲಕ ಫೀಲ್ಡ್ ಗೋಲು ದಾಖಲಿಸಿ1-0 ಮುನ್ನಡೆಯೊಂದಿಗೆ ಶುಭಾರಂಭ ಮಾಡಿತು.
ಆದರೆ, ಎರಡು ನಿಮಿಷಗಳ ಅಂತರದಲ್ಲಿಯೇ ಎದುರಾಳಿಗೆ ಗೋಲುಬಿಟ್ಟುಕೊಟ್ಟು ನಿರಾಸೆ ಅನುಭವಿಸಿತು. ಪಂದ್ಯದ 14ನೇ ನಿಮಿಷದಲ್ಲಿ ಮಿಹೈನ್ ಪಾರ್ಕ್ ನೆರವಿನಿಂದ ಗೋಲಿನ ಖಾತೆ ತೆರೆದ ಕೊರಿಯನ್ನರು, ಭಾರತದ ಜೊತೆ 1-1 ಸಮಗೌರವ ಸಾಧಿಸಿಯೇ ಬಿಟ್ಟರು.
ಇದೇ ಸ್ಫೂರ್ತಿಯಲ್ಲಿ ಮುಂದಿನ ಹೋರಾಟಕ್ಕೆ ಅಣಿಯಾದ ಕೊರಿಯಾ ಆಟಗಾರ್ತಿಯರು 24ನೇ ಮತ್ತು 25ನೇ ನಿಮಿಷಗಳಲ್ಲಿ ಕ್ರಮವಾಗಿ ಗೋಲು ಗಳಿಸುವ ಮೂಲಕ ಮೊದಲ ಅವಧಿಯಲ್ಲಿ 3-1 ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಉತ್ತರಾರ್ಧದಲ್ಲಿ ಸಹ ಎದುರಾಳಿಯ ಆರ್ಭಟವನ್ನು ತಡೆಯಲು ಭಾರತೀಯರು ವಿಫಲರಾದರು. ಪಂದ್ಯದ 42ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದ ಮೂಲಕ ಕೊರಿಯನ್ನರು ನಾಲ್ಕನೇ ಗೋಲು ಗಳಿಸುವುದನ್ನು ತಡೆಯಲು ಭಾರತಕ್ಕೆ ಸಾಧ್ಯವಾಗಲಿಲ್ಲ.
ಆದರೆ, ಪಂದ್ಯದ 69ನೇ ನಿಮಿಷದಲ್ಲಿ ಪೂನಂ ರಾಣಿ ಮೂಲಕ ಮತ್ತೊಂದು ಗೋಲು ಸಂಪಾದಿಸಿದ ಭಾರತ, ಹಿನ್ನಡೆ ಅಂತರವನ್ನು 2-4ಕ್ಕೆ ತಗ್ಗಿಸಿಕೊಂಡಿತು. ಕೊನೆಗೂ ಕನಿಷ್ಠ ಡ್ರಾ ಸಾಧಿಸುವ ಆಸೆ ಕೂಡ ಭಾರತಕ್ಕೆ ಈಡೇರಲಿಲ್ಲ.
ಭಾರತದ ಮಹಿಳೆಯರು ನಾಳೆ ಗುಂಪಿನ ತಮ್ಮ ಎರಡನೇ ಪಂದ್ಯದಲ್ಲಿ ಆತಿಥೇಯ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದ್ದಾರೆ.