ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಜಯದೊಂದಿಗೆ ತೆರೆ

Mainashree
Updated On : 28 Apr 2014, 10:59 am

ಮಾರ್ಗೋವಾ: ಪಂದ್ಯಾವಳಿಯ ಅಂತಿಮ ಪಂದ್ಯ ಆಡುವ ಮುನ್ನವೇ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದ ಬೆಂಗಳೂರು ಫುಟ್ಬಾಲ್ ಕ್ಲಬ್, ಕೊನೆಯ ಪಂದ್ಯದಲ್ಲಿ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ವಿರುದ್ಧ 2-1 ಗೋಲುಗಳ ಅಂತರದಿಂದ ಜಯದ ಕೇಕೆ ಹಾಕಿತು. ಇದರೊಂದಿಗೆ ಪ್ರಸಕ್ತ ಸಾಲಿನ ಐ-ಲೀಗ್‌ನಲ್ಲಿ ವಿಜಯದೊಂದಿಗೆ ಹೋರಾಟಕ್ಕೆ ತೆರೆ ಎಳೆದುಕೊಂಡಿದೆ.
ಇದರೊಂದಿಗೆ ಬಿಎಫ್‌ಸಿ ತಂಡ ಪಂದ್ಯಾವಳಿಯಲ್ಲಿ ಅತ್ಯಂತ ಹೆಚ್ಚು ಅಂದರೆ, 47 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಅಲ್ಲದೆ, ಒಂದು ಟ್ರೋಫಿ ಮತ್ತು ರು. 70 ಲಕ್ಷ ಮೊತ್ತ ಬಹುಮಾನಕ್ಕೆ ಭಾಜನವಾಗಿದೆ.
ತೀವ್ರ ಪೈಪೋಟಿಯಿಂದ ನಡೆದ ಪಂದ್ಯದ 42ನೇ ನಿಮಿಷದವರೆಗೂ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ, 42ನೇ ನಿಮಿಷದಲ್ಲಿ ಬೋಯಿಮಾ ಕಾರ್ಪೆಹ ಅವರು ಗೋಲು ದಾಖಲಿಸುವುದರೊಂದಿಗೆ ಗೋವಾ 1-0 ಅಂತರದೊಂದಿಗೆ ಮುನ್ನಡೆ ಸಾಧಿಸಿತು. ಹೀಗಾಗಿ ಮೊದಲಾರ್ಧ ಪಂದ್ಯ ಮುಕ್ತಾಯಗೊಂಡಾಗ ಗೋವಾ ತಂಡ 1-0 ಅಂತರದಿಂದ ಮುನ್ನಡೆ ಕಂಡುಕೊಂಡಿತ್ತು.
ಆದರೆ, ದ್ವಿತೀಯಾರ್ಧ ಪಂದ್ಯದಲ್ಲಿ ತಿರುಗೇಟು ನೀಡಿದ ಬಿಎಫ್‌ಸಿ, 59ನೇ ನಿಮಿಷದಲ್ಲಿ ರಾಬಿನ್ ಸಿಂಗ್ ದಾಖಲಿಸಿದ ಗೋಲಿನ ನೆರವಿನೊಂದಿಗೆ 1-1ರಿಂದ ಸಮಬಲ ಸಾಧಿಸಿತು. ಆಗ ಪಂದ್ಯದ ನಿಗದಿತ ಸಮಯದವರೆಗೂ ಉಭಯ ತಂಡಗಳು ಗೋಲು ದಾಖಲಿಸಲಿಲ್ಲ. ಹೀಗಾಗಿ ಪಂದ್ಯ ಡ್ರಾದಲ್ಲೇ ಅಂತ್ಯಗೊಳ್ಳಲಿದೆ ಎಂದು ಎಲ್ಲರೂ ಭಾವಿಸಿದ್ದರು.
ಆದರೆ, ಅಂತಿಮವಾಗಿ ಹೆಚ್ಚುವರಿ ಸಮಯದ 2ನೇ ನಿಮಿಷದಲ್ಲಿ ಬಿಖೋಖೀ ಅವರು ಗೋಲು ದಾಖಲಿಸುವ ಮೂಲಕ ಬೆಂಗಳೂರು 2-1 ಗೋಲುಗಳ ಜಯ ಕಂಡುಕೊಂಡಿತು. ದಿನದ ಇನ್ನೊಂದು ಐ-ಲೀಗ್ ಪಂದ್ಯದಲ್ಲಿ ಯುನೈಟೆಡ್ ತಂಡದ ವಿರುದ್ಧ ಜಯ ಕಂಡ ಈಸ್ಟ್ ಬೆಂಗಾಲ್ ತಂಡ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು.
 ಈಸ್ಟ್ ಬೆಂಗಾಲ್ ತಂಡ 43 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಲ್ಲದೆ, ರು. 40 ಲಕ್ಷ ಬಹುಮಾನಕ್ಕೆ ಭಾಜನವಾಯಿತು. ಇನ್ನು ದಿನದ ಮತ್ತೊಂದು ಪಂದ್ಯದಲ್ಲಿ ಚರ್ಚಿಲ್ ಬ್ರದರ್ಸ್ ವಿರುದ್ಧ ಸೋಲನುಭವಿಸಿದ ಸಲ್ಗಾಂವ್ಕರ್ ತಂಡ 38 ಅಂಕಗಳೊಂದಿಗೆ 3ನೇ ಸ್ಥಾನ ಪಡೆದಿದ್ದು, ರು. 25 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿದೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕಾಲು ಓಗ್ಬಾ ಅವರೊಂದಿಗೆ ಉತ್ತಮ ಪ್ರದರ್ಶನ ನೀಡಿದಾಗ್ಯೂ ಸೋತ ಗೋವಾ, ಐ-ಲೀಗ್‌ನ ಟಾಪ್-5 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.      ಪಂದ್ಯದಲ್ಲಿ ಬೆಂಗಳೂರು ಪರ ಸೀನ್ ರೂನಿ, ಜಾನ್ ಮೆನಿಯಾಂಗರ್ ಅದ್ಭುತ ಆಕ್ರಮಣಕಾರಿ ದಾಳಿ ನಡೆಸಿದರು.
ಮೊದಲಾರ್ಧ ಪಂದ್ಯದಲ್ಲಿ ಮುನ್ನಡೆ ಕಂಡುಕೊಂಡಿದ್ದ ಗೋವಾ, ದ್ವಿತೀಯಾರ್ಧ ಪಂದ್ಯದಲ್ಲಿ ಜಯದತ್ತ ಸಾಗಲು ಪ್ರಯತ್ನಿಸಿದರೆ, ಬೆಂಗಳೂರು ತಂಡ ಸಮಬಲ ಸಾಧಿಸಲು ಯತ್ನಿಸುತ್ತಿತ್ತು. ಆದರೆ, ಅಂತಿಮವಾಗಿ ಗೆಲ್ಲುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದು ಕಂಡುಬಂದಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement