ಹಾಕಿಯಲ್ಲಿ ಶತಕ ಪೂರೈಸಿದ ಪೂನಂ, ಚಂಚನ
ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ಸದಸ್ಯರಾದ ಪೂನಂ ರಾಣಿ ಮತ್ತು ಚಂಚನ ದೇವಿ ಅವರು 100 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ದಾಖಲೆ ಬರೆದಿದ್ದಾರೆ. ಈ ಇಬ್ಬರೂ ಮುನ್ಪಡೆ ಆಟಗಾರ್ತಿಯರು ಈಗ 100 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತದ ಅನುಭವಿ ಆಟಗಾರ್ತಿಯರಾಗಿದ್ದಾರೆ.
ಕಳೆದ ವಾರ ಐರ್ಲೆಂಡ್ ವಿರುದ್ಧ ಪಂದ್ಯ ಆಡುವ ಮೂಲಕ ಪೂನಂ ರಾಣಿ ಈ ಸಾಧನೆ ಮಾಡಿದರೆ, ಸ್ಕಾಟ್ಲೆಂಡ್ನಲ್ಲಿ ಭಾನುವಾರ ಆರಂಭವಾದ ಚಾಂಪಿಯನ್ಸ್ ಚಾಲೆಂಜ್-1 ಟೂರ್ನಿಯಲ್ಲಿ ಕೊರಿಯಾ ವಿರುದ್ಧದ ಪಂದ್ಯದೊಂದಿಗೆ ಚಂಚನ ದೇವಿ ಖ್ಯಾತಿಗೆ ಭಾಜನರಾದರು.
ಹರ್ಯಾಣದ ಹಿಸಾರ್ ಮೂಲದ ಪೂನಂ 2009ರಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ಅಮೆರಿಕದಲ್ಲಿ ನಡೆದ ಎಫ್ಐಎಚ್ ಜೂನಿಯರ್ ವಿಶ್ವಕಪ್ನಲ್ಲಿ ಸಹ ಅವರು ಭಾರತ ತಂಡದ ಸದಸ್ಯೆಯಾಗಿದ್ದರು.
ಮಣಿಪುರದ ಆಟಗಾರ್ತಿ ಚಂಚನ ದೇವಿ ಸಹ 2009ರಲ್ಲಿಯೇ ಥಾಯ್ಲೆಂಡ್ನಲ್ಲಿ ನಡೆದ ಏಳನೇ ಏಷ್ಯಾ ಕಪ್ ಮೂಲಕ ಅಂತಾರಾಷ್ಟ್ರೀಯ ರಂಗ ಪ್ರವೇಶ ಮಾಡಿದ್ದರು. ದೇಶ ಹೆಮ್ಮೆಪಡುವಂತಹ ಕೊಡುಗೆ ನೀಡಿರುವ ಈ ಇಬ್ಬರೂ ಆಟಗಾರ್ತಿಯರನ್ನು ಹಾಕಿ ಇಂಡಿಯಾ ಅಭಿನಂದಿಸಿದೆ.