ಕೆಕೆಆರ್‌ಗೆ ಸ್ಪರ್ಧಾತ್ಮಕ ಗುರಿ
ಅಬುಧಾಬಿ: ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ (72) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ಗೆ ಸ್ಪರ್ಧಾತ್ಮಕ 153 ರನ್‌ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 152 ರನ್ ಕಲೆ ಹಾಕಲು ಯಶಸ್ವಿಯಾಯಿತು.
ಆರಂಭಿಕ ಕುಸಿತ: ರಾಜಸ್ಥಾನ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಜಿಂಕ್ಯ ರಹಾನೆ ಹಾಗೂ ಕರುಣ್ ನಾಯರ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಕೇವಲ 1 ರನ್ ಗಳಿಸಿದ್ದ ಕರ್ನಾಟಕದ ಆಟಗಾರ ಕರುಣ್ ನಾಯರ್, ವಿನಯ್ ಕುಮಾರ್ ಎಸೆತಕ್ಕೆ ಬಲಿಯಾದರು.
ನಂತರ ಜತೆಯಾದ ರಹಾನೆ (72) ಹಾಗೂ ಸಂಜು ಸ್ಯಾಮ್ಸನ್ (20) 2ನೇ ವಿಕೆಟ್‌ಗೆ 41 ರನ್‌ಗಳ ಜತೆಯಾಟ ನೀಡುವ ಮೂಲಕ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಈ ವೇಳೆ ಸ್ಯಾಮ್ಸನ್, ಶಕಿಬ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ನಿರಾಸೆ ಅನುಭವಿಸಿದರು.
ಮೂರನೇ ವಿಕೆಟ್‌ಗೆ ಆರಂಭಿಕ ರಹಾನೆ ಜತೆಗೂಡಿದ ನಾಯಕ ಶೇನ್ ವ್ಯಾಟ್ಸನ್ ತಂಡದ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ರಕ್ಷಣಾತ್ಮಕ ಆಟಕ್ಕೆ ಮುಂದಾದ ಪರಿಣಾಮ ತಂಡದ ರನ್ ವೇಗ ಕುಂಟುತ್ತಾ ಸಾಗಿತು.
ಈ ಜೋಡಿ ಇನಿಂಗ್ಸ್‌ನ 14ನೇ ಓವರ್‌ನಿಂದ ರನ್ ವೇಗವನ್ನು ಹೆಚ್ಚಿಸುವ ಸಲುವಾಗಿ ಬಿರುಸಿನ ಆಟಕ್ಕೆ ಮುಂದಾದರು. ಇಬ್ಬರು ಆಟಗಾರರು 64 ರನ್ ದಾಖಲಿಸಿದರು. ತಂಡ ಬೃಹತ್ ಮೊತ್ತದತ್ತ ಕಾಲಿಡುತ್ತಿರುವ ಸಂದರ್ಭದಲ್ಲಿ ಅನಾವಶ್ಯಕ ರನ್ ಕದಿಯಲು ಮುಂದಾದ ಪರಿಣಾಮ ಶೇನ್ ವ್ಯಾಟ್ಸನ್ (33) ರನೌಟ್ ಆದರು. ನಂತರ ಬಂದ ಸ್ಟುವರ್ಟ್ ಬಿನ್ನಿ ಸಹ ರನ್ ಖತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡಿದ್ದು, ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು. ಇದೇವೇಳೆ ಇನಿಂಗ್ಸ್ ಉದ್ದಕ್ಕೂ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ 59 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 72 ರನ್ ದಾಖಲಿಸಿದ್ದ ರಹಾನೆ, ವಿನಯ್ ಕುಮಾರ್ ಎಸೆತದಲ್ಲಿ ಯಾದವ್‌ಗೆ ಕ್ಯಾಚ್ ನೀಡಿ ತಮ್ಮ ಅತ್ಯುತ್ತಮ ಇನಿಂಗ್ಸ್ ಅಂತ್ಯಗೊಳಿಸಿದರು.
ಸ್ಕೋರ್ ವಿವರ
ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 152
ಅಜಿಂಕ್ಯ ರಹಾನೆ ಸಿ ಯಾದವ್ ಬಿ ವಿನಯ್ 72, ಕರುಣ್ ನಾಯರ್ ಬಿ ವಿನಯ್ 1, ಸಂಜು ಸ್ಯಾಮ್ಸನ್ ಬಿ ಶಕಿಬ್ 20, ಶೇನ್ ವ್ಯಾಟ್ಸನ್ ರನೌಟ್ (ಮನೀಶ್/ಬಿಸ್ಲಾ) 33, ಸ್ಟುವರ್ಟ್ ಬಿನ್ನಿ ಸಿ ಬಿಸ್ಲಾ ಬಿ ಮಾರ್ಕೆಲ್ 0, ಸ್ಟೀವನ್ ಸ್ಮಿತ್ ಅಜೇಯ 19, ಫಾಕ್ನರ್ ಅಜೇಯ 2
ಇತರೆ: (ವೈಡ್ 5) ಒಟ್ಟು 5
ವಿಕೆಟ್ ಪತನ: 1-13, 2-54, 3-118, 4-128, 5-145
ಬೌಲಿಂಗ್ ವಿವರ: ವಿನಯ್ ಕುಮಾರ್ , ಮಾರ್ಕೆಲ್ 4-0-40-1, ನಾರಾಯಣ್ 4-0-28-0, ಶಕಿಬ್ ಅಲ್ ಹಸನ್ 4-0-23-1, ಜಾಕ್ ಕಾಲಿಸ್ 1-0-4-0, ಪಿಯೂಶ್ ಚಾವ್ಲಾ 3-0-27-0