ಬಿಎಫ್‌ಸಿ ಮೆರವಣಿಗೆ
ಬೆಂಗಳೂರು: ಕ್ರಿಕೆಟ್ ತಂಡವೊಂದು ಚಾಂಪಿಯನ್ ಆದಾಗ ನಮ್ಮ ದೇಶದಲ್ಲಿ ಸಿಗುವ ಸ್ಪಂದನೆ ಇತರ ಕ್ರೀಡೆಗಳಲ್ಲಿ ಸಿಗುವುದಿಲ್ಲ ಎಂಬುದಕ್ಕೆ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಘಟನೆ ಸ್ಪಷ್ಟವಾಗಿತ್ತು.
ಪ್ರಚಾರದ ಕೊರತೆಯೋ, ಫುಟ್ಬಾಲ್ ಬಗೆಗಿನ ಉದಾಸೀನತೆಯೋ, ಪ್ರಸಕ್ತ ಸಾಲಿನ ಐ-ಲೀಗ್‌ಗೆ ಪದಾರ್ಪಣೆ ಮಾಡಿದ ವರ್ಷವೇ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ಆಟಗಾರರನ್ನು ನಗರದಲ್ಲಿ ಮೆರವಣಿಗೆ ಮಾಡಲಾಯಿತು. ಆದರೆ, ಅದಕ್ಕೆ ಜನರ ಸ್ಪಂದನೆಯೇ ದೊರಕಲಿಲ್ಲ. ದೇಶದ ಪ್ರತಿಷ್ಠಿತ ಫುಟ್ಬಾಲ್ ಪಂದ್ಯಾವಳಿಯನ್ನು ಗೆದ್ದುಕೊಂಡ ಬಿಎಫ್‌ಸಿ ತಂಡವನ್ನು ತೆರೆದ ವಾಹನದಲ್ಲಿ ನಡೆಸಿದ ಮೆರವಣಿಗೆ, ಒಂದು ರೀತಿಯಲ್ಲಿ ಪರಿಚಯವಿಲ್ಲದ ರಾಜಕೀಯ ಪಕ್ಷವೊಂದು ಚುನಾವಣಾ ಸಂದರ್ಭದಲ್ಲಿ ಪ್ರಚಾರ ನಡೆಸಿದಂತಿತ್ತು.
ಕಾರಣ, ಚಾಂಪಿಯನ್ ತಂಡ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸುತ್ತಿದ್ದರೆ, ಜನರು ಅದಕ್ಕೂ, ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುವಂತಹ ವಾತಾವರಣ ಕಂಡುಬಂದಿತು. ಕೆಲವರು ಇದು ಯಾವ ಮೆರವಣಿಗೆ ಎಂದು ಕೇಳಿದ ಪ್ರಸಂಗವೂ ನಡೆಯಿತು. ಸುಮಾರು ಮುಕ್ಕಾಲು ಗಂಟೆ ಸಮಯ ನಡೆದ ಮೆರವಣೆಗೆಯಲ್ಲಿ ಆಟಗಾರರು, ತಂಡದ ಸಿಬ್ಬಂದಿ ಹಾಗೂ ಕೆಲವೇ ಕೆಲವು ಜನರು ಮಾತ್ರ ಇದ್ದರು. ನಂತರ ಫುಟ್ಬಾಲ್ ಸ್ಟೇಡಿಯಂ ಪ್ರವೇಶಿಸಿದ ತಂಡಕ್ಕೆ ಪ್ರಶಸ್ತಿ ನೀಡಿ ಸಂಭ್ರಮ ಆಚರಿಸಲಾಯಿತು.