ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೋಲಿನ ಹಾದಿಯಲ್ಲಿ ಮುಂಬೈಗೆ ಗೆಲ್ಲುವ ಕಾತರ

ಪಂದ್ಯಾವಳಿಯಲ್ಲಿ ಇದುವರೆಗೂ ಒಂದು ಪಂದ್ಯವನ್ನೂ ಗೆಲ್ಲದೆ, ಹೋರಾಟವನ್ನು...

Mainashree
Updated On : 29 Apr 2014, 10:39 am

ದುಬೈ: ಪಂದ್ಯಾವಳಿಯಲ್ಲಿ ಇದುವರೆಗೂ ಒಂದು ಪಂದ್ಯವನ್ನೂ ಗೆಲ್ಲದೆ, ಹೋರಾಟವನ್ನು ಮುಂದುವರಿಸಿರುವ ಹಾಲಿ ಚಾಂಪಿಯನ್ ಮುಂಬೈ ತಂಡ ಬುಧವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕುಂಟುತ್ತಾ ಸಾಗಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲವಿನ ಲೆಕ್ಕಾಚಾರ ಹಾಕುತ್ತಿದೆ.
 ದುಬೈಯಲ್ಲಿ ನಡೆಯುತ್ತಿರುವ ಮೊದಲ ಹಂತದ ಐಪಿಎಲ್ ಪಂದ್ಯಾವಳಿಯಲ್ಲಿ ಇದು ಮುಂಬೈ ಇಂಡಿಯನ್ಸ್ ಕೊನೆಯ ಪಂದ್ಯವಾಗಿದೆ. ನಂತರ ಉಳಿದ ಪಂದ್ಯಗಳನ್ನು ಭಾರತದಲ್ಲಿ ನಡೆಸಲಾಗುತ್ತದೆ.
8 ತಂಡಗಳು ಭಾಗವಹಿಸಿರುವ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಮುಂಬೈಗೆ, ಸ್ಥಿರ ಪ್ರದರ್ಶನ ನೀಡದ ಹೈದರಾಬಾದ್ ವಿರುದ್ಧ ಗೆಲವಿನ ಖಾತೆ ತೆರೆಯಲು ಮಹತ್ವದ ಅಕಾಶ ದೊರಕಿದೆ.
ಹೈದರಾಬಾದ್ ತಂಡ ಇದುವರೆಗೂ ಆಡಿರುವ 4 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಜಯ ಕಂಡುಕೊಂಡಿದ್ದು, ಮೂರು ಪಂದ್ಯಗಳಲ್ಲಿ  ಸೋಲನುಭವಿಸಿದೆ.ಕೆಲ ಬಲಾಢ್ಯ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದಾಗ್ಯೂ, ಮುಂಬೈ ತಂಡದ ಬ್ಯಾಟಿಂಗ್ ಇದುವರೆಗೂ ವೈಫಲ್ಯ ಕಾಣುತ್ತಲೇ ಸಾಗಿದೆ. ಕೆಲವೇ ಕೆಲ ಬ್ಯಾಟ್ಸ್‌ಮನ್‌ಗಳು ಮಿಂಚುವಲ್ಲಿ ಸಫಲರಾಗಿದ್ದಾರೆ. ಆದರೆ, ಅವರಲ್ಲೂ ದೊಡ್ಡ ಮೊತ್ತ ಸಂಗ್ರಹಿಸಲು ಸಾಧ್ಯವಾಗಿಲ್ಲ. ನಾಯಕ ರೋಹಿತ್ ಶರ್ಮಾ, ಮೈಕ್ ಹಸ್ಸಿ, ಕೊರೆ ಆ್ಯಂಡರ್ಸನ್ ಹಾಗೂ ಕೀರನ್ ಪೊಲಾರ್ಡ್ ಜಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡಿದ್ದಾರೆ. ಅಂಬಟಿ ರಾಯುಡು ಅವರು ಕೊಂಚ ರನ್ ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೆ, ಯಾವುದೇ ಬ್ಯಾಟ್ಸ್‌ಮನ್‌ಗೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಸಾಧ್ಯವಾಗುತ್ತಿಲ್ಲ.ಹೀಗಾಗಿ, ಈಗ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಜಯ ಕಾಣಬೇಕಾದರೆ, ತಂಡದ ಎಲ್ಲ ಬ್ಯಾಟ್ಸ್‌ಮನ್‌ಗಳು ಸಾಧ್ಯವಾದಷ್ಟು ದೊಡ್ಡ ಮೊತ್ತ ಗಳಿಸಲೇಬೇಕಾಗಿದೆ.ಮುಂಬೈ ಬೌಲಿಂಗ್ ವಿಭಾಗದಲ್ಲಿ ಭಾರತ ತಂಡದ ಹಿರಿಯ ಬೌಲರ್ ಜಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಅವರು ಹೈದರಾಬಾದ್ ವಿರುದ್ಧ ತಮ್ಮ ಅನುಭವವನ್ನು ಬಳಸಿಕೊಂಡು, ಜಯಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕಾಗಿದೆ.ಇನ್ನು ತಂಡದಲ್ಲಿರುವ ಪಾದರಸದಂತಹ ವೇಗಿ ಲಸಿತ್ ಮಾಲಿಂಗ ಅವರು ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಆದರೆ, ಮುಂಬೈ ತಂಡ ಈ ಪಂದ್ಯದಲ್ಲಿ ಜಯ ಕಾಣಬೇಕಾದರೆ, ಬೌಲಿಂಗ್ ವಿಭಾಗ ಸಹ ಸಮರ್ಥ ಪ್ರದರ್ಶನ ನೀಡುವ ಅಗತ್ಯವಿದೆ.
ಇದರೊಂದಿಗೆ ಸ್ಪಿನ್ನರ್ ಪ್ರಗ್ಯಾನ್ ಓಜಾ, ಹರ್ಭಜನ್ ಸಿಂಗ್, ಆ್ಯಂಡರ್ಸನ್ ಹಾಗೂ ಪೊಲಾರ್ಡ್ ಅವರಿಂದಲೂ ತಂಡ ಉತ್ತಮ ಬೌಲಿಂಗ್ ನಿರೀಕ್ಷಿಸುತ್ತಿದೆ.
ಇನ್ನು ಸರನ್‌ರೈಸರ್ಸ್ ಪರ ಎರಾನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿ ಮುಂಬೈ ವಿರುದ್ಧದ ಪಂದ್ಯದಲ್ಲೂ ಅದು ಫಿಂಚ್ ಮತ್ತು ವಾರ್ನರ್ ಅವರನ್ನೇ ಹೆಚ್ಚಿನ ಪ್ರಮಾಣದಲ್ಲಿ ಆಶ್ರಯಿಸಿದೆ. ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ನಾಯಕ ಶಿಖರ್ ಧವನ್ ಅವರು ಇದುವರೆಗೂ ತಮ್ಮ ನೈಜ ಬ್ಯಾಟಿಂಗ್ ಪ್ರದರ್ಶಿಸಿಲ್ಲ.
ಇನ್ನು ಮುಧ್ಯಮ ಕ್ರಮಾಂಕದಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್, ವೇಣುಗೋಪಾಲ್ ರಾವ್ ಹಾಗೂ ಡಾರೆನ್ ಸಾಮಿ ಅವರು ಬ್ಯಾಟಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ.  ಹೈದರಾಬಾದ್ ತಂಡದ ಬೌಲಿಂಗ್ ವಿಭಾಗ ಮಾತ್ರ ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ.
ಡೇಲ್ ಸ್ಟೇಯ್ನ್ ನೇತೃತ್ವದಲ್ಲಿ ಬೌಲಿಂಗ್ ವಿಭಾಗ ತನ್ನ ಸ್ಥಿರ ಪ್ರದರ್ಶನವನ್ನು ಕಾಪಾಡಿಕೊಂಡಿದೆ. ಸ್ಪಿನ್ನರ್‌ಗಳಾದ ಅಮಿತ್ ಮಿಶ್ರಾ ಮತ್ತು ಕರಣ್ ಶರ್ಮಾ ಅವರು ತಕ್ಕ ಬೌಲಿಂಗ್ ಪ್ರದರ್ಶಿಸಿದ್ದಾರೆ.
ಹೀಗಾಗಿ, ಈ ಪಂದ್ಯದಲ್ಲಿ ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್‌ಗಳು ಸೂಕ್ತ ಪ್ರದರ್ಶನ ನೀಡಿದಲ್ಲಿ, ಸಾಂಘಿಕ ಪ್ರದರ್ಶನ ನೀಡುವ ಮೂಲಕ ಪಂದ್ಯದಲ್ಲಿ ಜಯ ಕಾಣಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement